More

    ಸಿದ್ದು, ಎಚ್​ಡಿಕೆ ಪರ್ಸೆಂಟೇಜ್ ಕದನ; ಬಿಡದಿಯ ಈಗಲ್​ಟನ್ ರೆಸಾರ್ಟ್ ಜಮೀನು ವಿವಾದ 

    ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಈಗಲ್​ಟನ್ ಗಾಲ್ಪ್ ರೆಸಾರ್ಟ್ ಜಮೀನು ವಿವಾದದ ಚರ್ಚೆ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ‘ಪರ್ಸೆಂಟೇಜ್’ ಆರೋಪ-ಪ್ರತ್ಯಾರೋಪ, ವಾಕ್ಸಮರಕ್ಕೆ ವಿಧಾನಸಭೆ ಗುರುವಾರ ಸಾಕ್ಷಿಯಾಯಿತು.

    ಬಜೆಟ್ ಮೇಲಿನ ಚರ್ಚೆ ಕುಮಾರಸ್ವಾಮಿ ಮುಂದುವರಿಸಿ, ಬಿಡದಿಯ ಈಗಲ್​ಟನ್ ರೆಸಾರ್ಟ್ ಮಾಲೀಕರಿಗೆ ಸರ್ಕಾರಿ ಜಮೀನು ಅತಿಕ್ರಮಿಸಿದ್ದಕ್ಕಾಗಿ ಒಂದು ಕೋಟಿ ರೂ. ದಂಡ ವಿಧಿಸಲಾಗಿತ್ತು. ಆದರೆ ರಾಮನಗರ ಜಿಲ್ಲೆಯ ಪ್ರಭಾವಿ ನಾಯಕರೊಬ್ಬರು ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ 982 ಕೋಟಿ ರೂ.ಗೂ ಅಧಿಕ ದಂಡ ವಿಧಿಸಲಾಗಿದೆ. ಈ ಪ್ರಭಾವಿ ನಾಯಕ ಬೆಂಬಲಿಗರಿಗೆ ಊಟ ಹಾಕಿಸಿದ್ದ. ರೆಸಾರ್ಟ್ ಮಾಲೀಕರು 95,000 ರೂ. ಬಿಲ್ ಕಳುಹಿಸಿದ್ದಕ್ಕೆ ದ್ವೇಷ ಸಾಧಿಸಲು ಅಥವಾ ಪರ್ಸೆಂಟೇಜ್​ಗಾಗಿ ಈ ಮಾರ್ಗ ಕಂಡುಕೊಂಡಿರುವಂತಿದೆ. ಪ್ರಕರಣವೀಗ ಕೋರ್ಟ್ ಮೆಟ್ಟಿಲೇರಿದ್ದು, 2009ರಿಂದ ಈ ವಿವಾದ ಶುರುವಾಗಿದೆ. ನಿಜಾಂಶ ಹೊರಬರಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

    ತಟಸ್ಥವಾಗಿದ್ದೇಕೆ?: ಬಜೆಟ್​ಗೆ ಸಂಬಂಧಪಡದ ವಿಷಯ ಪ್ರಸ್ತಾಪಿಸಿದ್ದೀರಿ ಎಂದು ಆಕ್ಷೇಪಿಸುತ್ತಲೇ ಸಿದ್ದರಾಮಯ್ಯ ಮಾತಿಗಿಳಿದು, ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೀರಿ. ಈ ಬಗ್ಗೆ ಗೊತ್ತಿದ್ದೂ ಪ್ರತಿಪಕ್ಷ ನಾಯಕ ಸ್ಥಾನ, ಮುಖ್ಯಮಂತ್ರಿಯಾಗಿದ್ದಾಗ ಕ್ರಮಕೈಗೊಳ್ಳಲಿಲ್ಲವೇಕೆ? ಎಂದು ಕೇಳಿದರು. ಗಾಲ್ಪ್ ಹೆಸರಿನಲ್ಲಿ ಸರ್ಕಾರಿ ಗೋಮಾಳ ಮತ್ತು ಖರಾಬು ಜಮೀನು ಕಬಳಿಸಿ ಕಟ್ಟಡಗಳನ್ನು ಕಟ್ಟಿ ಚದರಡಿಗೆ ಮಾರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚದರಡಿ ಲೆಕ್ಕದಂತೆ 982 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ತಾವು ಅಧಿಕಾರಿದ್ದಾಗ ತೆಗೆದುಕೊಂಡ ನಿರ್ಣಯವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶ ಸೇರಿ ಯಾವುದೇ ರೀತಿ ತನಿಖೆಗೆ ಒಪ್ಪಿಸಿ, ತಪು್ಪ ಕಂಡು ಬಂದರೆ ಕಾರಣರಾದವರಿಗೆ ಶಿಕ್ಷೆಯಾಗಲಿ. ಈ ರೀತಿ ರಾಜಕೀಯ ಭಾಷಣ 10 ದಿನ ಮಾಡಬಲ್ಲೆ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಕೋರ್ಟ್ ತೀರ್ಪು ಓದಿದ ಬಳಿಕ ರೆಸಾರ್ಟ್ ಮಾಲೀಕನ ಮಗನನ್ನು ಕರೆದು ಕೇಳಿದಾಗ ಎಲ್ಲ ದಾಖಲೆಗಳನ್ನು ಕೊಟ್ಟು ವಿಷಯ ತಿಳಿಸಿದ್ದು, ಈಗಷ್ಟೇ ನನ್ನ ಗಮನಕ್ಕೆ ಬಂದಿರುವ ಕಾರಣ ಸದನದ ಮುಂದೆ ಮಂಡಿಸಿರುವೆ. ಸರ್ಕಾರಿ ಜಮೀನು ಸಂರಕ್ಷಕರು ಎಂದು ಹೇಳಿಕೊಳ್ಳುವವರು ಇದೇ ಸರ್ವೆ ನಂಬರ್ ವ್ಯಾಪ್ತಿಯ 28 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮಾಡಿದ್ದೇನೆಂಬುದು ದಾಖಲೆಗಳಿವೆ. ರಾಜಕೀಯ ಭಾಷಣ 10 ದಿನ ಅಲ್ಲ, ಒಂದು ವರ್ಷ ಮಾಡಬಲ್ಲೆ ಎಂದು ಕುಮಾರಸ್ವಾಮಿ ಮಾರುತ್ತರಿಸಿದರು.

    ಪ್ರಭಾವಿ ನಾಯಕ ಯಾರು?: ರೆಸಾರ್ಟ್​ಗೆ ಅಧಿಕ ಪ್ರಮಾಣದ ದಂಡ ಬೀಳುವಂತೆ ಮಾಡಿದ ರಾಮನಗರ ಜಿಲ್ಲೆಯ ಪ್ರಭಾವಿ ನಾಯಕರು ಯಾರು? ಎಂದು ಬಹಿರಂಗಪಡಿಸಿರಿ. ಅಂತಹವರು ಮುಖ್ಯಮಂತ್ರಿಯಾದರೆ ರಾಜ್ಯದ ಗತಿ ಏನು? ಎಂದು ಎಚ್​ಡಿಕೆಗೆ ಬಿಜೆಪಿಯ ಬಸನಗೌಡಪಾಟೀಲ್ ಕೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ಗೆ ತಿವಿದರು. ಅಲ್ಲದೆ, ರಾಮನಗರದ ಪ್ರಭಾವಿ ನಾಯಕನಿಗೆ ಮಣಿಸಲು ಎಚ್​ಡಿಕೆ ಸಮರ್ಥರು ಎಂಬ ಹೊಗಳಿಕೆ ಮಾತೂ ಸೇರಿಸಿದರು.

    ಜಂಟಿ ಭಾರತ ರತ್ನ: ಸರ್ಕಾರಿ ಜಮೀನು ಕಬಳಿಸಿದ್ದಕ್ಕೆ ವಿಧಿಸಿದ ದಂಡವಿದು ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಾಗ ಓಹೋಹೋ ಸರ್ಕಾರಿ ಜಮೀನು ಸಂರಕ್ಷಕರು ಭಾರತರತ್ನ ಕೊಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮಧ್ಯೆ ಪ್ರವೇಶಿಸಿದ ರಮೇಶ್​ಕುಮಾರ್, ದಂಡದ ದರ ನಿಗದಿ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲೂ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದು, ಆ ವಿಷಯ ಅಲ್ಲಿಗೆ ಮುಗಿಯಿತು. ಈ ಹಿಂದೆ ಒಟ್ಟಿಗೆ ಸೇರಿ ಅಧಿಕಾರ ಚಲಾಯಿಸಿರುವ ಕಾರಣ ಭಾರತ ರತ್ನ ಜಂಟಿಯಾಗಿ ತೆಗೆದುಕೊಳ್ಳೋಣವೆಂದು ಕುಟುಕಿದರು.

    ತಜ್ಞರೊಂದಿಗೆ ರ್ಚಚಿಸಿ ಕ್ರಮ: ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಈಗಲ್​ರೆಸಾರ್ಟ್ ಜಮೀನಿನ ವಿವಾದ ಹಲವಾರು ವರ್ಷ ಹಳೆಯದು. ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿದೆ. ಕುಮಾರಸ್ವಾಮಿ ದಾಖಲೆ ಪಡೆದು ಅಧ್ಯಯನ ನಡೆಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವೆ ಎಂದರು.

    ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಾಗ ಇಂತಹ ಒಳ ಒಪ್ಪಂದದ ರಾಜಕೀಯಕ್ಕೆ ನನ್ನದು ಡೋಂಟ್ ಕೇರ್ ನಿಲುವು. ಅದೇನ್ ಹೇಳುತ್ತೀರಿ ಹೇಳಿಕೊಳ್ಳಿ ಎಂದು ಸಿದ್ದರಾಮಯ್ಯ ಗುಡುಗಿದರು. ಒಳ-ಹೊರ ರಾಜಕೀಯ ಒಪ್ಪಂದಗಳೆಲ್ಲ ನಿಮಗೆ ಬಿಟ್ಟದ್ದು ಎಂದು ತಿರುಗೇಟು ನೀಡಿದ ಎಚ್.ಡಿ.ಕುಮಾರಸ್ವಾಮಿ, 2008-09ರಲ್ಲೂ ಇದೇ ರೀತಿ ದಾಖಲೆ ಬಿಡುಗಡೆ ಮಾಡಿ ಅದರ ಪ್ರತಿಫಲ ಅನುಭವಿಸಿದ್ದೇನೆ. ನಿಮಗೆ (ಸಿದ್ದರಾಮಯ್ಯ) ಮುಜುಗರ ಉಂಟು ಮಾಡಲು ದಾಖಲೆ ಸಹಿತ ಈ ವಿಷಯ ತಂದಿದ್ದಲ್ಲ ಎಂದರು.

    ಗೂಳಿ ಕಾಳಗದಲ್ಲಿ ಕರುಗಳು ಸಾಯ್ತವೆ!: ಈ ಹಿಂದೆ ಜೋಡೆತ್ತುಗಳು ನಮ್ಮನ್ನು ತಗೊಂಡೋಗಿ ಇದೇ ರೆಸಾರ್ಟ್​ನಲ್ಲಿ ಕೂಡಿ ಹಾಕಿದ್ದವು. ವಿಮಾನದಲ್ಲಿ ಕರೆದುಕೊಂಡು ಹೋಗ್ತೇವಂದ್ರು ಬಸ್ ಗತಿಯಾಯಿತು. ಅಲ್ಲಿರುವಷ್ಟು ದಿನವೂ ಪಡಿಪಾಟಲು, ಬೆಳಗಿನ ನಿತ್ಯಕರ್ಮಕ್ಕೂ ಒದ್ದಾಟ ಹೇಳುವುದೇ ಬೇಡ. ಅಲ್ಲಿ ವಾಸವಿ ದ್ದುದಕ್ಕೆ ದುಡ್ಡು ಕಟ್ಟಿಲ್ಲ. ಅದಕ್ಕಾಗಿ ದಂಡ ವಿಧಿಸುವುದಾದರೆ ಕಡಿಮೆಯಿರಲಿ, ಗೂಳಿ ಕಾಳಗದಲ್ಲಿ ಸಣ್ಣ ಕರುಗಳು ಸಾಯ್ತವೆ ಎಂದು ಕಾಂಗ್ರೆಸ್​ನ ರಮೇಶ್​ಕುಮಾರ್ ಕಾಲೆಳೆದರು.

    ಮಂತ್ರಿಗಳೆಲ್ಲ ಎಲ್ಲಿಗೆ ಹೋದರು?: ಬಜೆಟ್ ಅಧಿವೇಶನದ ಐದನೇ ದಿನದ ಸಂಜೆ ಬಹುತೇಕ ಮಂತ್ರಿಗಳು ಸದನದಲ್ಲಿ ಕಾಣಿಸದೇ ಇರುವುದು ಪ್ರತಿಪಕ್ಷ ನಾಯಕರು ಸೇರಿ ಶಾಸಕರನ್ನು ಕೆರಳಿಸಿತು. ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಚಿವರಿಗೆ ಜವಾಬ್ದಾರಿ ಬೇಡವೇ, ಸದನ ನಡೆಯುವಾಗ ಇಲ್ಲಿರುವ ಬದಲು ಎಲ್ಲಿಗೆ ಹೋಗಿದ್ದಾರೆ, ಏಕೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಗೊತ್ತಿಲ್ಲ ಎಂದು ತಿಳಿಸಿದರು. ಎ.ಟಿ.ರಾಮಸ್ವಾಮಿ ಮಾತನಾಡಿ, ಸಚಿವರು ಈ ರೀತಿ ನಡೆದುಕೊಳ್ಳುವುದು ಸದನಕ್ಕೆ ಗೌರವ ಬರುತ್ತದೆಯೇ, ಲಘುವಾಗಿ ತೆಗೆದುಕೊಳ್ಳಬಾರದು ಎಂದರು.

    ಬುಲ್ಡೋಜರ್ ಎದುರು ನಡೆಯದ ಆಟ; ಅಬ್ಬರಿಸಲು ಹೋಗಿ ಮಕಾಡೆ ಮಲಗಿದ ಓವೈಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts