More

    ಸಿದ್ಧಿ ಜನಾಂಗ ಪರಿಶಿಷ್ಟ ಪಂಗಡಕ್ಕೆ

    ಖಾನಾಪುರ: ತಾಲೂಕಿನ ಬಾಳಗುಂದ, ಕರ್ಜಗಿ, ಬಸ್ತವಾಡ, ಗಣೇಬೈಲ, ತಾವರಗಟ್ಟಿ, ಭೂರಣಕಿ, ಗೋಧೊಳಿ ಸೇರಿ ಅರಣ್ಯದಂಚಿನ ಜನವಸತಿ ಪ್ರದೇಶಗಳಲ್ಲಿ ವಾಸವಿರುವ ಸಿದ್ಧಿ ಜನಾಂಗದ ಜನರಿಗೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡಿರುವ ರಾಜ್ಯ ಸರ್ಕಾರ ಕಳೆದ ಜೂ.6ರಂದು ಈ ಕುರಿತು ಸುತ್ತೋಲೆ ಹೊರಡಿಸಿದೆ ಎಂದು ಸಿದ್ಧಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬಸಾಬ ಹುಲಿಕೊಪ್ಪ ಸಿದ್ಧಿ ಮಾಹಿತಿ ನೀಡಿದರು.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದವರಿಗೆ ಸರ್ಕಾರ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುತ್ತಿದೆ. ಆದರೆ, ತಾಲೂಕಿನ ಸಿದ್ಧಿ ಸಮುದಾಯದವರಿಗೆ ಬೆಳಗಾವಿ ಜಿಲ್ಲಾಡಳಿತದಿಂದ ಈ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಈ ವಿಷಯವಾಗಿ ಖಾನಾಪುರ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಇರ್ಫಾನ್ ತಾಳಿಕೋಟಿ ಹಾಗೂ ಸ್ಥಳೀಯ ಸಿದ್ಧಿ ಸಮುದಾಯದವರು ಬೆಳಗಾವಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಬೆಳಗಾವಿ ಜಿಪಂನ ಆಗಿನ
    ಸಿಇಒ ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ ಜಯರಾಂ ಅವರೂ ಸಹ ಮುತುವರ್ಜಿ ವಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಸಿದ್ಧಿ ಸಮುದಾಯದವರ ಸಮಸ್ಯೆ ಆಲಿಸಿದ ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯ ಸಿದ್ಧಿ ಸಮುದಾಯದವರಿಗೂ ಸವಲತ್ತು ನೀಡುವಂತೆ ಆದೇಶಿಸಿದೆ ಎಂದು ವಿವರಿಸಿದರು.

    ಸರ್ಕಾರದಿಂದ ನಮಗೆ ಸಿಕ್ಕಿರುವ ವಿಶೇಷ ಸೌಲಭ್ಯಗಳನ್ನು ನಾವು ಸ್ವಾಗತಿಸುತ್ತೇವೆ. ಈ ಸೌಲಭ್ಯ ಸಿಗಲು ಕಾರಣರಾದ ಇರ್ಫಾನ್ ತಾಳಿಕೋಟಿ, ಐಎಎಸ್ ಅಧಿಕಾರಿಗಳಾದ ಜಯರಾಂ, ರಾಮಚಂದ್ರನ್, ಹಿಂದಿನ ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಉಣ್ಣಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಮುಖಂಡರನ್ನು ಜು.8ರಂದು ಖನಾಪುರ ಪಟ್ಟಣದಲ್ಲಿ ಆಯೋಜಿಸಿರುವ ಸಿದ್ಧಿ ಸಮುದಾಯದವರ ಸಮಾವೇಶದಲ್ಲಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಿದ್ಧಿ ಸಮುದಾಯದ ಹಳಿಯಾಳ ತಾಲೂಕು ಅಧ್ಯಕ್ಷ ಬಸ್ತಾಂವ್ ನಾಯ್ಕ ಸಿದ್ಧಿ, ಸಾಮಾಜಿಕ ಕಾರ್ಯಕರ್ತ ಇರ್ಫಾನ್ ತಾಳಿಕೋಟಿ, ಅಸ್ಲಂ ಮುಲ್ಲಾ ಸಿದ್ಧಿ, ಸಾವೇರ ನಾಯ್ಕ ಸಿದ್ಧಿ, ಶಾನೂರ್ ಸಿದ್ಧಿ, ಪೀರಸಾಬ್ ಸಿದ್ಧಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts