More

    ಬಂಗಾಳಿಯಲ್ಲಿ ಸಿದ್ಧಾಂತ ಶಿಖಾಮಣಿ

    ಹುಬ್ಬಳ್ಳಿ: ವೀರಶೈವ ಧರ್ಮಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯು ಸದ್ಯದಲ್ಲೇ ಬಂಗಾಳಿ ಭಾಷೆಗೆ ತರ್ಜುಮೆಗೊಂಡು ಬಾಂಗ್ಲಾದೇಶದಲ್ಲಿ ಜರುಗುವ ವಿಶೇಷ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕಾಶಿ ಜ್ಞಾನ ಪೀಠದ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

    ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ, ವೇದ ವಿದ್ಯಾಲಯ ಹಾಗೂ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಜಂಟಿ ಆಶ್ರಯದಲ್ಲಿ ಕಾಶಿ ಜ್ಞಾನಪೀಠದಲ್ಲಿ ಆಯೋಜಿಸಿದ್ದ ಧರ್ಮ ಸಿದ್ಧಾಂತ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಅಂತರ್ಜಾಲದ ಜೂಮ್ ಆಪ್ ಕಲಿಕಾ ವರ್ಗದ ಶ್ರೀ ರುದ್ರ ಪ್ರಶಿಕ್ಷಣದಲ್ಲಿ ಪಾಲ್ಗೊಂಡಿದ್ದ ಬಾಂಗ್ಲಾದೇಶದ ಶ್ರೀ ಜ್ಞಾನಾನಂದ ಬ್ರಹ್ಮಚಾರಿ ಅವರು ವ್ಯಾಕರಣ, ನ್ಯಾಯ, ವೇದಾಂತ ಶಾಸ್ತ್ರಗಳಲ್ಲಿ ಪ್ರಖರ ಪಂಡಿತರಾಗಿದ್ದು, ಸಂಸ್ಕೃತ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದಾರೆ. ಅವರ ಮಾತೃಭಾಷೆ ಬಂಗಾಳಿ ಆಗಿದ್ದು, ಅಖಂಡ ಮನುಕುಲದ ಜೀವನ ವಿಧಾನ ಚಿಂತನೆಗೆ ಅಗತ್ಯವಿರುವ ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವನ್ನು ಬಂಗಾಳಿ ಭಾಷೆಗೆ ಅನುವಾದಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯು ಬಂಗಾಳಿ ಭಾಷೆಗೆ ತರ್ಜುಮೆಗೊಂಡು ಬಾಂಗ್ಲಾದೇಶದಲ್ಲಿಯೇ ಮುದ್ರಣವಾಗಲಿದೆ ಎಂದು ತಿಳಿಸಿದರು.

    ಶ್ರೀ ರುದ್ರ ಪಠಣ ಕಲಿಕೆ: ಪ್ರಸ್ತುತ ಕಾಶಿ ಜ್ಞಾನ ಪೀಠದ ವೇದ ವಿದ್ಯಾಲಯವು ಅಂತರ್ಜಾಲದ ಜೂಮ್ ಆಪ್ ಬಳಕೆ ಮಾಡಿ ಅಮೆರಿಕ, ರಷ್ಯಾ, ಜರ್ಮನಿ ಮತ್ತು ಬಾಂಗ್ಲಾದೇಶಗಳು ಹಾಗೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆಸಕ್ತ ಮಹಿಳೆಯರು-ಪುರುಷರಿಗೆ ಸ್ವರಯುಕ್ತವಾಗಿ ಶ್ರೀರುದ್ರ ಪಠಣವನ್ನು ಕಲಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಗೃಹಿಣಿಯರು ಪಾಲ್ಗೊಂಡು ಎರಡು ಮಾಸಗಳಲ್ಲಿ ಸಂಪೂರ್ಣ ಶ್ರೀ ರುದ್ರವನ್ನು ಸ್ವರಯುಕ್ತವಾಗಿ ಅಭ್ಯಾಸ ಮಾಡಿದ್ದಾರೆ. ವಿಶ್ವಾರಾಧ್ಯ ಗುರುಕುಲದ ವೇದ ಪ್ರಾಧ್ಯಾಪಕ ಪಂ. ಮಲ್ಲಿಕಾರ್ಜುನಶಾಸ್ತ್ರಿ ನಿತ್ಯವೂ ಪಾಠ ಪ್ರವಚನಗಳನ್ನು ನಡೆಸುತ್ತಿದ್ದಾರೆ ಎಂದರು.

    ಪ್ರಮಾಣಪತ್ರ ವಿತರಣೆ: ಕಾಶಿ ಜ್ಞಾನ ಪೀಠದ ವೇದ ವಿದ್ಯಾಲಯದಲ್ಲಿ ಹೆಸರು ನೋಂದಾಯಿಸಿ ಅಂತರ್ಜಾಲ ಬಳಸಿ ಶ್ರೀರುದ್ರ ಪಠಣವನ್ನು ನಿಖರ ನೆಲೆಯಲ್ಲಿ ಕಲಿತು ಯಶಸ್ವಿಯಾದ ವಿದ್ಯಾರ್ಥಿಗಳಿಗೆ, ಜಗದ್ಗುರುಗಳು ವೇದಪ್ರವೇಶ ಪ್ರಮಾಣಪತ್ರಗಳನ್ನು ಅನುಗ್ರಹಿಸಿ ಆಶೀರ್ವದಿಸಿದರು. ಶ್ರೀಕಾಶಿ ಜ್ಞಾನಪೀಠದಲ್ಲಿ ಶ್ರೀರುದ್ರ ಪ್ರಶಿಕ್ಷಣ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅಪೇಕ್ಷಿತರು ಮೊ.ಸಂ. 9049439399, 8554992836ಗೆ ಸಂರ್ಪಸಿ, ಹೆಸರು ನೋಂದಾಯಿಸಿ ಅಧ್ಯಯನ ಮಾಡಬಹುದೆಂದು ವೇದ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts