More

    ಸಿದ್ದರಾಮೋತ್ಸವಕ್ಕೆ ಬಂದವರೆಲ್ಲರಿಗೂ ಊಟ ಕೊಡಲು ಬಾಣಸಿಗರ ಹರಸಾಹಸ: ರಾಹುಲ್​ಗೆ ತಟ್ಟಿದ ಟ್ರಾಫಿಕ್ ಬಿಸಿ

    ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವದಲ್ಲಿ ನಿರೀಕ್ಷೆಗೂ ಮೀರಿದ ಜನಸಾಗರ ಹರಿದುಬಂದಿದ್ದು, 6 ಲಕ್ಷ ಜನರಿಗೆ ಮಾಡಿದ್ದ ಅಡುಗೆ ಕೊರತೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ರಾಹುಲ್​ ಗಾಂಧಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ್ದು, ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಬರಲಾಗದೇ ವಿಳಂಬವಾಗಿದೆ.

    ಒಂದು ಕಡೆ ಸಾಕಷ್ಟು ಜನರು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದರೆ, ಇನ್ನೊಂದೆಡೆ ಊಟಕ್ಕೂ ಜನ ಸಾಗರವಿದೆ. ಬಂದವರೆಲ್ಲರಿಗೂ ಊಟ ಕೊಡಲು ಬಾಣಸಿಗರು ಹರಸಾಹಸ ಪಡುತ್ತಿದ್ದಾರೆ. ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಎರಡು ಕಡೆ ಊಟಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

    ಬಿಸಿಬೇಳೆ ಬಾತ್​​, ಪಲಾವ್​, ಮೊಸರನ್ನ, ಮೈಸೂರು ಪಾಕ್ ಹಾಗೂ ‌ಲಾಡು ತಿನಿಸುಗಳು ಊಟದ ಮೆನುವಿನಲ್ಲಿದೆ. ಸುಮಾರು ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರಿನಿಂದ ಬಂದ 2500 ಬಾಣಸಿಗರು ಊಟ ತಯಾರಿ ಮಾಡಿದ್ದಾರೆ.

    20 ಕ್ವಿಂಟಲ್ ಲಾಡು ಹಾಗೂ 6 ಲಕ್ಷ ಮೈಸೂರು ಪಾಕ್ ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಜಿಲ್ಲೆಗಳಿಂದ ಬರುವ ಬೆಂಬಲಿಗರಿಗೆ ಇನ್ನೊಂದು ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಆಹಾರ ಸಾಮಗ್ರಿಗಳನ್ನು ಟನ್ ಲೆಕ್ಕದಲ್ಲೇ ತರಲಾಗಿದೆ. ಒಂದು ಸಾವಿರ ಕಮರ್ಷಿಯಲ್ ಸಿಲೆಂಡರ್ಗಳ ಬಳಕೆ ಮಾಡಲಾಗಿದೆ.

    ಈಗಾಗಲೇ 10 ಟನ್ ಅಕ್ಕಿ, 5 ಟನ್ ಅಡುಗೆ ಎಣ್ಣೆ, 8 ಟನ್ ತರಕಾರಿ ಹಾಗೂ ಎರಡು ಟನ್ ತುಪ್ಪ ಬಳಸಲಾಗಿದೆ. ಆದರೆ, ಸಾಮಗ್ರಿ ಕೊರತೆ ಹಿನ್ನೆಲೆಯಲ್ಲಿ ಆಯೋಜಕರು ಮತ್ತೆ ಸಾಮಗ್ರಿ ತರಿಸುತ್ತಿದ್ದಾರೆ. ಊಟಕ್ಕಾಗಿ ನೂಕು ನುಗ್ಗಲು ಹೆಚ್ಚಾಗಿದ್ದು, ಜನರಿಗೆ ಊಟ ಪೂರೈಸುವುದೇ ಬಹುದೊಡ್ಡ ಸವಾಲಾಗಿದೆ.

    ರಾಹುಲ್​ಗೆ ಟ್ರಾಫಿಕ್​ ಬಿಸಿ
    ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಬರುತ್ತಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಟ್ರಾಫಿಕ್​ ಬಿಸಿ ತಟ್ಟಿದೆ. ಇಂದು ಬೆಳಗ್ಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರು ಆಶೀರ್ವಾದ ಪಡೆದ ರಾಹುಲ್​ ಗಾಂಧಿ, ಬಳಿಕ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟರು. ಆದರೆ, ಕಾರ್ಯಕ್ರಮದಿಂದ ದಾವಣಗೆರೆಯಲ್ಲಿ ಉಂಟಾಗಿರುವ ಭಾರಿ ಟ್ರಾಫಿಕ್​ ಜಾಮ್​ನಲ್ಲಿ ರಾಹುಲ್​ ಸಿಲುಕಿಕೊಂಡರು. ಇತ್ತ ವೇದಿಕೆ ಮೇಲೆ ರಾಹುಲ್​ಗಾಗಿ ಎಲ್ಲರು ಕಾಯುತ್ತಾ ಕುಳಿತಿದ್ದರು. ರಾಹುಲ್​ ತಡವಾಗಿ ವೇದಿಕೆಗೆ ಆಗಮಿಸಿದರು. (ದಿಗ್ವಿಜಯ ನ್ಯೂಸ್​)

    ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

    ಸಿದ್ದರಾಮೋತ್ಸವಕ್ಕೆ ಬರ್ತಿದ್ದ ಕಾರ್ಯಕರ್ತ ಮೃತಪಟ್ಟರೂ ಸಂಭ್ರಮಾಚರಣೆ: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

    ಭಾರಿ ಮಳೆಗೆ ಅವಾಂತರ ಸೃಷ್ಟಿ ಹಿನ್ನೆಲೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್​: ಬದಲಿ ಮಾರ್ಗ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts