More

    ನಾಳೆ ಕೋಲಾರಕ್ಕೆ ಸಿದ್ದರಾಮಯ್ಯ ; ಮಿನಿ ಸ್ಟೇಡಿಯಂನಲ್ಲಿ ವೇದಿಕೆ ನಿರ್ಮಾಣ

    ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ನಗರಕ್ಕೆ ಆಗಮಿಸುವ ಹಿನ್ನೆಲೆ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು, ಜೂನಿಯರ್​ ಕಾಲೇಜು ಪಕ್ಕದ ಮಿನಿ ಸ್ಟೇಡಿಯಂನಲ್ಲಿ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

    ಸಿದ್ದರಾಮಯ್ಯ ಅವರು ಜ.9 ರಂದು ಬೆಳಗ್ಗೆ 12.15ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ನಗರದ ಕ್ಲಾಕ್​ ಟವರ್​ ಮೂಲಕ ಹೊಸ ಬಸ್​ ನಿಲ್ದಾಣ, ಅಮ್ಮವಾರಿಪೇಟೆ ವೃತ್ತ, ಮೆಕ್ಕೆ ವೃತ್ತದ ಮೂಲಕ ಕಾಂಗ್ರೆಸ್​ ಕಚೇರಿಗೆ ಆಗಮಿಸಿ, ಮಹನೀಯರ ಭಾವ ಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಿನಿ ಸ್ಟೇಡಿಯಂನಲ್ಲಿ ಆಯೋಜಿಸಿರುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬೃಹತ್​ ಕಟೌಟ್​: ಕೋಲಾರದ ಟೊಮ್ಯಾಟೊ ಮಾರುಕಟ್ಟೆ ಬಳಿ ಮತ್ತು ವೇದಿಕೆ ಮುಂಭಾಗ ಬೃಹತ್​ ಕಟೌಟ್​ ನಿಲ್ಲಿಸಲು ಸೆಂಟ್ರಿಂಗ್​ಗಳನ್ನು ನಿರ್ಮಿಸಲಾಗುತ್ತಿದೆ. ಮಿನಿ ಸ್ಟೇಡಿಯಂ ಅಂಗಳದಲ್ಲಿ ವೇದಿಕೆ ಮತ್ತು ಮುಂಭಾಗದಲ್ಲಿ ಪೆಂಡಾಲ್​ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

    ಘಟಬಂಧನ್​ ಗುಂಪು ಸಿದ್ದರಾಮಯ್ಯ ಬರುವುದಕ್ಕಾಗಿ ತಾಲೂಕಿನಾದ್ಯಂತ ಪೂರ್ವಭಾವಿ ಸಭೆ ನಡೆಸಿ, ವೇದಿಕೆ ನಿರ್ಮಾಣ ಹಾಗೂ ಬೃಹತ್​ ಕಟೌಟ್​ಗಳನ್ನು ನಿರ್ಮಿಸಲು ಸಿದ್ಧಗೊಂಡಿರುವ ಹೊತ್ತಿನಲ್ಲಿಯೇ ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಹಾಗೂ ಘಟಬಂಧನ್​​ ಗುಂಪು ಮುಖಾಮುಖಿ ಆಗದ ಹೊರತು ಕಾರ್ಯಕ್ರಮ ನಡೆಯುವುದಿಲ್ಲ ಎಂಬ ವಾಟ್ಸ್​ ಆ್ಯಪ್​ ಸುದ್ದಿಗಳು ಹರಿದಾಡುತ್ತಿವೆ.

    ಸದ್ಯ ಕೋಲಾರ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಎರಡು ಗುಂಪುಗಳ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸಿ ಕೋಲಾರಕ್ಕೆ ಬರಬೇಕು. ನಿಮ್ಮ ಸ್ಪರ್ಧೆ ಬಗ್ಗೆ ನಮ್ಮ ಅಭ್ಯಂತರವಿಲ್ಲ ಎಂದು ಈಗಾಗಲೇ ಸಿದ್ದರಾಮಯ್ಯ ಅವರಿಗೆ ಕೆ.ಎಚ್​.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

    ಶನಿವಾರ ರಾತ್ರಿ ಘಟಬಂಧನ್​​ ಬಣ ಹಾಗೂ ಕೆ.ಎಚ್​.ಮುನಿಯಪ್ಪ ಗುಂಪು ಸಿದ್ದರಾಮಯ್ಯ ಮನೆಯಲ್ಲಿ ಮುಖಾಮುಖಿ ಭೇಟಿಯಾಗುವ ಸಮಯ ನಿಗದಿಪಡಿಸಲಾಗಿತ್ತು.

    ಆದರೆ ಭಾನುವಾರ ಚಿತ್ರದುರ್ಗದಲ್ಲಿ ಎಸ್​ಸಿ ಸಮಾವೇಶ ಇರುವುದರಿಂದ ಕೆ.ಎಚ್​.ಮುನಿಯಪ್ಪ ಚಿತ್ರದುರ್ಗಕ್ಕೆ ತೆರಳಿದ್ದಾರೆ. ಇವರ ಜತೆಯಲ್ಲಿ ಡಿ.ಕೆ.ಶಿವಕುಮಾರ್​, ರಾಜ್ಯ ಉಸ್ತುವಾರಿ ರಣದೀಪ್​ ಸುರ್ಜೇವಾಲ, ವೇಣುಗೋಪಾಲ್​ ಬೆಂಗಳೂರಿನಲ್ಲಿ ಲಭ್ಯ ಇಲ್ಲದಿರುವುದರಿಂದ ಎರಡು ಗುಂಪುಗಳು ಭೇಟಿಯಾಗಲು ಸಾಧ್ಯವಾಗಿಲ್ಲ.

    ಈ ಹಿನ್ನೆಲೆಯಲ್ಲಿ ಸೋಮವಾರ ಕಾರ್ಯಕ್ರಮವನ್ನು ಸಿದ್ದರಾಮಯ್ಯನವರು ಮುಂದೂಡಬೇಕಾಗುತ್ತದೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಈ ಸಂದೇಶ ಹರಿದಾಡುತ್ತಿದೆ ಎಂದು ಕೆ.ಎಚ್​.ಮುನಿಯಪ್ಪ ಗುಂಪಿನ ಮುಖಂಡರಾದ ಶೇಷಾಪುರ ಗೊಪಾಲ್​ ಹಾಗೂ ಜಯದೇವ್​ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಪ್ರವಾಸ ಶುಕ್ರವಾರ ಸಂಜೆ 5ಕ್ಕೆ ಅಧಿಕೃತವಾಗಿ ಪ್ರಕಟಗೊಂಡಿದ್ದರೂ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ ಎಂದುಮುನಿಯಪ್ಪ ಗುಂಪು ಹೇಳುತ್ತಿದೆ. ಆದರೆ ಘಟಬಂಧನ್​​ ಗುಂಪು ಶುಕ್ರವಾರ ಸಂಜೆ ತನಕವೂ ಪೂರ್ವಭಾವಿ ಸಭೆಗಳನ್ನು ನಡೆಸಿ ವೇದಿಕೆ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದೆ.

    ಈ ಗೊಂದಲಗಳಿಂದಾಗಿ ನಡುವೆ ಕಾರ್ಯಕರ್ತರು ಯಾರನ್ನು ನಂಬಬೇಕು ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತೇನೆ ಎಂದು ಹೇಳಿದ ದಿನದಿಂದಲೂ ಇದೇ ರೀತಿಯಲ್ಲಿ ಕಾರ್ಯಕರ್ತರಲ್ಲಿ ಗೊಂದಲವುಂಟು ಮಾಡುವ ಕೆಲಸಗಳು ನಡೆಯುತ್ತಿವೆ.

    ರಾಜಕಾರಣಿಗಳು ಒಂದಾಗುವ ನಿಟ್ಟಿನಲ್ಲಿ ಇದ್ದರೂ ಮುಖಂಡರ ಒಣ ಪ್ರತಿಷ್ಠೆಗಳಿಂದ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಗೊಂದಲ ಉಂಟುಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಬೆಂಬಲಿಗರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts