More

    ವಿಶೇಷ; ಕರೊನಾದಿಂದ ಮಲಗಿದ ಭಾರತೀಯ ಚಿತ್ರರಂಗ; ವಾರಕ್ಕೆ ಅಂದಾಜು 400 ಕೋಟಿ ನಷ್ಟ!! ಸ್ಯಾಂಡಲ್​ವುಡ್​ ಸ್ಥಿತಿ ಹೇಗಿದೆ?

    ಸಿನಿಮಾ ಅಂದರೆ ಅದೊಂದು ಬೃಹತ್​ ಕುಟುಂಬ. ಲಕ್ಷಾಂತರ ಜನರ ಜೀವನಾಡಿ. ಅದರಿಂದಲೇ ತುತ್ತಿನ ಚೀಲ ತುಂಬಿಸಿಕೊಂಡು ಜೀವನ ದೂಡುತ್ತಿರುತ್ತಾರೆ. ತೆರೆಮೇಲಿನ ಕಲಾವಿದರ ಬವಣೆ ಒಂದೆಡೆಯಾದರೆ, ತೆರೆಹಿಂದಿನ ಅಂದರೆ ಲೈಟ್​ಬಾಯ್​ಗಳಿಂದ ಹಿಡಿದು, ನಿರ್ದೇಶಕನವರೆಗೂ ಅದು ಬಂದು ನಿಲ್ಲುತ್ತದೆ. ಒಟ್ಟಾರೆ ಹೇಳಬೇಕೆಂದರೆ ಸಿನಿಮಾ ಎಂಬುದು ಅದೊಂದು ಬೃಹತ್​ ಸರಪಳಿ. ಇದೀಗ ಕರೊನಾ ಹಾವಳಿಯಿಂದಾಗಿ ಆ ಸರಪಳಿ ಕಡಿದು ಹೋಗುವ ಲಕ್ಷಣಗಳು ಎದುರಾಗುತ್ತಿವೆ. ಸ್ಟಾರ್​ ಕಲಾವಿದರು, ಕೈಲಾದ ಮಟ್ಟಿಗೆ ದೇಣಿಗೆ ರೂಪದಲ್ಲಿ ಮತ್ತು ಆಹಾರ ಸಾಮಗ್ರಿ ರೂಪದಲ್ಲಿ ಬೇಕಾದಷ್ಟು ಕೊಟ್ಟರೂ ಅದು ಸದ್ಯದ ಸ್ಥಿತಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ತಾತ್ಕಾಲಿಕ ಮಳೆಗೆ ತೂತು ಬಿದ್ದ ಕೊಡೆಹಿಡಿದಂತಾಗಿದೆ. ಹಾಗಂತ ಇದು ಒಂದೇ ಇಂಡಸ್ಟ್ರಿಗೆ ಸಂಬಂಧಿಸಿದ್ದಲ್ಲ. ಭಾರತದಲ್ಲಿನ ಎಲ್ಲ ಚಿತ್ರೋದ್ಯಮದ ಸ್ಥಿತಿಯೂ ಹೀಗೆ ಆಗಿದೆ. ವ್ಯವಹಾರ ನಿಂತಿದ್ದರಿಂದ, ನಿರ್ಮಾಪಕರಿಂದ ಹಿಡಿದು ಚಿತ್ರದ ಕೊನೆಯ ಕಾರ್ಮಿಕನ ವರೆಗೂ ಪರಿಸ್ಥಿತಿ ಅತಂತ್ರವಾಗಿದೆ. ಸಿನಿಮಾವನ್ನೇ ಪರೋಕ್ಷವಾಗಿ ನಂಬಿಕೊಂಡವರ ಬದುಕು ಬೀದಿಗೆ ಬಿದ್ದಿದೆ. ನಷ್ಟದ ವಿಚಾರಕ್ಕೆ ಬಂದರೆ, ದೊಡ್ಡ ಮೊತ್ತವೇ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಹೌದು, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಭಾರತೀಯ ಸಿನಿಮಾರಂಗಕ್ಕೆ ಒಂದು ವಾರಕ್ಕೆ ಅಂದಾಜು ಬರೋಬ್ಬರಿ 400 ಕೋಟಿಗೂ ಅಧಿಕ ನಷ್ಟ ಸಂಭವಿಸುತ್ತಿದೆ ಎಂದು ಬಾಲಿವುಡ್​ನ ಕೆಲ ಸಿನಿಮಾ ವಿಶ್ಲೇಷಕರು ಮತ್ತು ನಿರ್ಮಾಪಕರ ವಲಯ ಅಭಿಪ್ರಾಯಪಟ್ಟಿದೆ. ಮಾರ್ಚ್​ 12ರಿಂದ ಮಾ. 31ರ ವರೆಗಿನ ಅವಧಿಯಲ್ಲಿ 1500 ಕೋಟಿ ರೂ. ನಷ್ಟವಾಗಿದೆಯಂತೆ.

    ಶೂಟಿಂಗ್​ ಸ್ಥಗಿತ, ಬಿಡುಗಡೆ ಮುಂದೂಡಿಕೆ
    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್​ ನಿಂತಿದೆ. ಇದರಿಂದ ನಿಂತ ಸಿನಿಮಾದ ನಿರ್ಮಾಪಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೌದು, ಸಿನಿಮಾ ಶೂಟಿಂಗ್​ ಸಲುವಾಗಿ ಎಲ್ಲಿಂದಲೋ ಬಡ್ಡಿ ಆಧಾರದ ಮೇಲೆ ಕೋಟ್ಯಂತರ ಮೊತ್ತ ತಂದು ನೀರು ಸುರಿದಂತೆ ಸುರಿಯುವ ನಿರ್ಮಾಪಕ, ಲಾಕ್​ಡೌನ್​ನಿಂದ ಅಕ್ಷರಶಃ ನಲುಗಿ ಹೋಗುತ್ತಿದ್ದಾನೆ. ಇನ್ನು ಈಗಾಗಲೇ ಬಿಡುಗಡೆ ದಿನಾಂಕ ಘೋಷಿಸಿಕೊಂಡಿರುವ ಸಿನಿಮಾ ಗತಿ ದೇವರಿಗೇ ಪ್ರೀತಿ! ಏಕೆಂದರೆ, ಅಂದುಕೊಂಡ ದಿನಾಂಕದಂದು ಸಿನಿಮಾ ಬಿಡುಗಡೆ ಆಗಲಿಲ್ಲ ಎಂದರೆ ಸಹಜವಾಗಿ ಅಲ್ಲಿ ನಷ್ಟದ ಭೀತಿ ಎದುರಾಗುತ್ತದೆ. ಇದೀಗ ಕರೊನಾ ಹಿನ್ನೆಲೆಯಲ್ಲಿ ಸಿದ್ಧಗೊಂಡ ನೂರಾರು ಸಿನಿಮಾಗಳು ಬಿಡುಗಡೆಯನ್ನು ಮುಂದೂಡಿವೆ. ಇದು ಭವಿಷ್ಯದ ದೃಷ್ಟಿಯಿಂದ ಮತ್ತು ಗಳಿಕೆ ವಿಚಾರದಲ್ಲೂ ಆಯಾ ಚಿತ್ರತಂಡಗಳ ಮೇಲೆ ಮಾರಕವಾಗಿ ಪರಿಣಮಿಸಲಿದೆ.


    ಲಾಕ್​ಡೌನ್​ ತೆರವಾದರೂ ಗಳಿಕೆ ಕಷ್ಟಕಷ್ಟ
    ಲಾಕ್​ಡೌನ್​ ತೆರವಾದ ಬಳಿಕ ಸಿನಿಮಾ ಬಿಡುಗಡೆ ಆದರೆ, ಆ ಸಿನಿಮಾಗಳು ಅದ್ಬುತ ಗಳಿಕೆ ಮಾಡಲಿವೆ ಎಂಬುದನ್ನು ಹೇಳುವುದು ಕಷ್ಟ ಸಾಧ್ಯ. ಏಕೆಂದರೆ, ಕರೊನಾ ಮಾರಿಯ ಭಯಕ್ಕೆ ಜನ ಚಿತ್ರಮಂದಿರಕ್ಕೆ ಕಾಲಿಡದೇ ಇರುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಗಂಭೀರತೆ ಜನತೆಗೆ ಹೆಚ್ಚಿರುವುದರಿಂದ ಎರಡು ತಿಂಗಳ ಕಾಲ ಸಿನಿಮಾಗಳಿಂದ ದೂರ ಉಳಿದರೂ ಅಚ್ಚರಿ ಇಲ್ಲ!


    ಮಾಲ್​, ಮಲ್ಟಿಪ್ಲೆಕ್ಸ್ ಸ್ಥಿತಿ ಚಿಂತಾಜನಕ; ವಿನಾಯಿತಿಯಿಂದ ಕೊಂಚ ನಿರಾಳ
    ಮಾಲ್​, ಮಲ್ಟಿಪ್ಲೆಕ್ಸ್ ನಡೆಯುತ್ತಿರುವುದೇ ಸಿನಿಮಾಗಳ ಮೇಲೆ. ಸಾವಿರಾರು ಕೆಲಸಗಾರರು ಅಲ್ಲಿನ ಸಂಬಳವನ್ನೇ ನಂಬಿ ಜೀವನ ದೂಡುತ್ತಿರುತ್ತಾರೆ. ಇದೀಗ ಸಿನಿಮಾ ಪ್ರಸಾರ ನಿಂತಿರುವುದರಿಂದ ಕೆಲಸಗಾರರ ಬದುಕು ಅತಂತ್ರವಾಗಿದೆ. ಮಾಲ್​, ಮಲ್ಟಿಪ್ಲೆಕ್ಸ್ ಗಳಗೆ ಬಾಡಿಗೆ, ವಿದ್ಯುತ್​ ಬಿಲ್​, ಸಂಬಳ ಸೇರಿ ನಿರ್ವಹಣೆಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಈ ಬಗ್ಗೆ ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ ಖುದ್ದು ಪ್ರಧಾನಿಗೆ ಪತ್ರ ಬರೆದಿತ್ತು. ಒಂದಷ್ಟು ವಿನಾಯಿತಿಯನ್ನೂ ಬೇಡಿತ್ತು. ಅದರಂತೆ ಮೂರು ವರ್ಷ ಬಡ್ಡಿರಹಿತ ಪಾವತಿ ಮತ್ತು ಒಂದು ವರ್ಷ ಮಾರಟೊರಿಯಮ್​ ವಿನಾಯಿತಿಯನ್ನೂ ನೀಡಿದೆ, ಜಿಎಸ್​ಟಿ, ಶೋ ಟ್ಯಾಕ್ಸ್, ಪ್ರಾಪರ್ಟಿ ತೆರಿಗೆಯಿಂದಲೂ ವಿನಾಯಿತಿ ಸಿಕ್ಕಿದೆ.

    ಸ್ಯಾಂಡಲ್​ವುಡ್​ ಸ್ಥಿತಿ ಹೇಗಿದೆ?
    ಸಿನಿಮಾ ಅಂದರೆ ಅಲ್ಲಿ ಮೊದಲಿಗೆ ಬರುವುದೇ ದುಡ್ಡು. ದುಡ್ಡಿದ್ದರೆ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ಆದರೆ, ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಕರೊನಾ ಕಾಟ ಕೊಡುತ್ತಿದೆ. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಚಿತ್ರೀಕರಣ ನಂಬಿರುವ ಜೀವಗಳು ಖಾಲಿ ಕುಳಿತಿವೆ. ಇದೆಲ್ಲವನ್ನು ಗಮನಿಸಿದರೆ, ಚಂದನವನಕ್ಕೆ ಲಾಕ್​ಡೌನ್​ನಿಂದಾಗಿ 100ರಿಂದ 120 ಕೋಟಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲಿ ಏ.9ಕ್ಕೆ ರಾಬರ್ಟ್​ ಸಿನಿಮಾ ಬಿಡುಗಡೆ ಆಗಬೇಕಿತ್ತು. ಅದಾದ ಬಳಿಕ ಸಲಗ, ಪೊಗರು, ಕೋಟಿಗೊಬ್ಬ-3 ಹೀಗೆ ಸರಿಣಿ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಆದರೆ, ಇದೀಗ ಇವುಗಳ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸ ಕಂಡುಬರಲಿದೆ. ಶೂಟಿಂಗ್​ ಹಂತದಲ್ಲಿನ ಸಿನಿಮಾಗಳೂ ಮುಂದೂಡಿಕೆ ಆಗಿದ್ದು, ಇದೆಲ್ಲದರ ನೇರ ಪರಿಣಾಮ ಸ್ಯಾಂಡಲ್​ವುಡ್​ ಮೇಲೆ ಬಿದ್ದಿದೆ. ಕೋಟಿ ಕೋಟಿ ನಷ್ಟವೂ ಸಂಭವಿಸಿದ್ದು, ನಿರ್ಮಾಪಕ ಹೈರಾಣಾಗಿದ್ದಾನೆ. ಬಗ್ಗೆ ಪ್ರತಿಕ್ರಿಯೆ ನೀಡುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​, ಈ ಸ್ಥಿತಿ ನೋಡುತ್ತಿರುವುದು ಇದೇ ಮೊದಲು. ಭಾರತೀಯ ಸಿನಿಮಾರಂಗವೇ ನೆಲಕಚ್ಚಿದೆ, ಅದರಲ್ಲೂ ಸ್ಯಾಂಡಲ್​ವುಡ್​ ಸ್ಥಿತಿ ಬೇರೆ ಏನಲ್ಲ. ಎಲ್ಲವನ್ನು ಅಳೆದು ತೂಗಿ ನೋಡಿದರೆ ನಷ್ಟದ ಮೊತ್ತ ನೂರರ ಗಡಿ ದಾಟುತ್ತದೆ. ನಿಖರ ಅಂಕಿ ಅಂಶವನ್ನು ಹೇಳುವುದು ಕಷ್ಟ ಸಾಧ್ಯ. ಇದರ ಪರಿಣಾಮ ಲಾಕ್​ಡೌನ್​ ತೆರವಾದ ಮೇಲೂ ಮುಂದುವರಿಯಲಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts