More

    ಬಂಧನ ವೇಳೆ ಕಾನೂನು ನೆರವಿಗೆ ಲೀಗಲ್ ಸರ್ವಿಸ್ ಕ್ಲಿನಿಕ್

    ಚಿಕ್ಕಮಗಳೂರು: ಯಾವುದೇ ಪ್ರಕರಣದಲ್ಲಿ ಆರೋಪಿ ಬಂಧಿತನಾಗುವ ಸಂದರ್ಭದಲ್ಲಿ ಕಾನೂನು ಚೌಕಟ್ಟಿನಲ್ಲಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಜಿಲ್ಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಶುಭಾ ಗೌಡರ್ ಹೇಳಿದರು.

    ಎಸ್ಪಿ ಕಚೇರಿಯಲ್ಲಿ ಸೋಮವಾರ ನೂತನ ಕಾನೂನು ಸೇವೆಗಳ ಕೇಂದ್ರ (ಲೀಗಲ್ ಸರ್ವಿಸ್ ಕ್ಲಿನಿಕ್) ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸೇವಾ ಕೇಂದ್ರವು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಸಾರ್ವಜನಿಕರಿಗೆ ಉಚಿತ ಸಲಹೆ, ಸೇವೆ ಒದಗಿಸುತ್ತಿದೆ ಎಂದು ಹೇಳಿದರು.

    ಮೊದಲು ಕಾನೂನು ಮುಖ್ಯಸ್ಥರ ಮೂಲಕ ಒದಗಿಸುತ್ತಿದ್ದ ಕಾನೂನು ನೆರವನ್ನು ತಿದ್ದುಪಡಿ ಮೂಲಕ ಹಕ್ಕು ಎಂದು ಪರಿಗಣಿಸಿ ಸಂವಿಧಾನದಲ್ಲಿ ಅಳವಡಿಸಲಾಗಿದೆ. ತಿದ್ದುಪಡಿ ಬಳಿಕ ಯಾವುದೇ ಆರೋಪಕ್ಕೆ ಒಳಗಾದ ವ್ಯಕ್ತಿ ಬಂಧಿತನಾಗುವ ಸಂದರ್ಭ ಕಾನೂನು ಚೌಕಟ್ಟಿನಲ್ಲಿ ಉಚಿತ ಕಾನೂನು ನೆರವು ಪಡೆಯಬಹುದು ಎಂದರು.

    ಆರೋಪಿಯನ್ನು ನ್ಯಾಯಾಲಯ ಅಥವಾ ಸಂಬಂಧಿಸಿದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಅವರಿಗೆ ವಕೀಲರನ್ನು ನೇಮಕ ಮಾಡಿಕೊಳ್ಳಲು ಆಗದಿದ್ದಲ್ಲಿ ಕಾನೂನು ಸೇವಾ ಕೇಂದ್ರಗಳ ಮೂಲಕ ನೆರವು ಒದಗಿಸಲಾಗುವುದು. ಇದಕ್ಕಾಗಿ ರಿಮ್ಯಾಂಡ್ ಅಥವಾ ಪ್ಯಾನೆಲ್ ಅಡ್ವೊಕೇಟ್ ನೇಮಿಸಲಾಗಿದೆ ಎಂದು ತಿಳಿಸಿದರು.

    ಲೀಗಲ್ ಸರ್ವಿಸ್ ಕ್ಲಿನಿಕ್ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ದಸ್ತಗಿರಿಯಾದ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಅವರಿಗೆ ಕಾನೂನಾತ್ಮಕವಾಗಿ ದೊರೆಯುವ ನೆರವು, ಹಕ್ಕುಗಳನ್ನು ಪ್ರತಿಪಾದಿಸುವುದಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ವ್ಯಕ್ತಿ ದಸ್ತಗಿರಿ ಆಗದಿದ್ದರೂ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸುತ್ತಾರೆ. ಆ ವೇಳೆ ಜನತೆ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಕ್ಲಿನಿಕ್ ನೆರವು ಪಡೆಯಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts