More

    ಶಿರಾದಲ್ಲಿ ಪ್ರತಿಷ್ಠೆಯ ಪಣ ; ಕೈಗೆ ಹುಮ್ಮಸ್ಸು ತುಂಬುವ ಯತ್ನ ; ತೆನೆಗೆ ಅಸ್ಥಿತ್ವದ ಪ್ರಶ್ನೆ ; ಕಮಲಕ್ಕೆ ಮುಖಂಡರ ಕೊರತೆ

    ಶಿರಾ: ವಿಧಾನಸಭೆ ಉಪಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ನೀಡಿದ್ದ ಶಿರಾ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗಿನಿಂದ ಆರಂಭವಾಗಿದೆ. ಗ್ರಾಮಗಳಲ್ಲಿ ಕಾರ್ಯಕರ್ತರಿಲ್ಲದಿದ್ದರೂ ಉಪಸಮರದಲ್ಲಿ ಗೆದ್ದು ಬೀಗಿರುವ ಬಿಜೆಪಿ ಕ್ಷೇತ್ರದಲ್ಲಿ ಪ್ರಬಲವಾಗಿದ್ದು ಕಾಂಗ್ರೆಸ್, ಜೆಡಿಎಸ್ ಸೇರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಕಳೆದ ಬಾರಿ ಕಾಂಗ್ರೆಸ್ ಶಾಸಕರಿದ್ದರೂ ಸ್ಥಳೀಯ ಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ತಲೆಕೆಡಿಸಿಕೊಂಡಿದ್ದು ಕಡಿಮೆ. ಹಾಗಾಗಿ ಜೆಡಿಎಸ್ ಪ್ರಾಬಲ್ಯ ಮೆರೆದಿತ್ತು. ಬಿಜೆಪಿ ಎಲ್ಲಿಯೂ ಪೂರ್ಣ ಸಾಮರ್ಥ್ಯದಿಂದ ಅಧಿಕಾರ ಹಿಡಿಯುವ ಸ್ಥಿತಿ ಇರಲಿಲ್ಲ. ಆದರೆ ಈಗ ಬಿಜೆಪಿ ವಿರುದ್ಧ ಕಾಂಗ್ರೆಸ್, ಜೆಡಿಎಸ್ ತಂತ್ರ ರೂಪಿಸಬೇಕಿದೆ!.

    ಬಿಜೆಪಿ ನೂತನ ಶಾಸಕರ ಆಯ್ಕೆ ನಂತರ ಕ್ಷೇತ್ರದೆಲ್ಲೆಡೆ ಹೊಸ ತಲೆಮಾರಿನ ಯುವಕರು ರಾಜಕೀಯ ಪ್ರವೇಶಿಸಲಾರಂಭಿಸಿದ್ದು, ತಂತ್ರಗಾರಿಕೆಯೂ ಬದಲಾಗಿದೆ. ಹಿಂದೆಲ್ಲ ದೇವಾಲಯ, ಕುಟುಂಬ, ಪಕ್ಷ, ವಂಶಕ್ಕಷ್ಟೇ ಸೀಮಿತವಾಗಿದ್ದ ಚುನಾವಣೆ ಈಗ ಹಣ, ಹೆಂಡ, ಮಾಂಸದವರೆಗೂ ಬಂದಿದೆ. ತಾಲೂಕಿನಲ್ಲಿ 35 ಗ್ರಾಪಂಗಳಿದ್ದು 1,07,082 ಪುರುಷ ಹಾಗೂ 1,00,508 ಮಹಿಳೆ ಹಾಗೂ ಇತರ 7 ಸೇರಿ 2,07,597 ಮತದಾರರಿದ್ದು ಪ್ರಮುಖ ಮೂರು ಪಕ್ಷಗಳಿಗೂ ಪ್ರಾಬಲ್ಯ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

    ಉತ್ಸಾಹ ಮರುಸ್ಥಾಪಿಸಲು ಕೈಪಡೆ ಯತ್ನ: ಸತತ ಎರಡು ವಿಧಾನಸಭೆ ಚುನಾವಣೆಯ ಸೋಲು ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರನ್ನು ಕಂಗಾಲಾಗಿಸಿದೆ. ಇದರ ನಡುವೆಯೇ ಕಾರ್ಯಕರ್ತರಲ್ಲಿ ಉತ್ಸಾಹ ಮರುಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಟಿಬಿಜೆ ಶಿರಾ ನಗರ ನಿವಾಸದಲ್ಲೇ ಮುಖಂಡರ ಸಭೆ ನಡೆಸಿ ಗ್ರಾಮಸ್ವರಾಜ್ ಕನಸು, ರಾಜೀವ್‌ಗಾಂಧಿ ಅವರ ಕೊಡುಗೆ ಬಗ್ಗೆ ಭಾಷಣ ಮಾಡಿ ಕಳುಹಿಸುತ್ತಿದ್ದಾರೆ. ಈ ಹಳೆಯ ಭಾಷಣಗಳಿಂದ ಗೆಲುವು ಕಷ್ಟ ಎಂಬುದನ್ನು ಅರಿತ ಕಾರ್ಯಕರ್ತರು ಸ್ವಂತ ಬಲದ ಮೇಲೆ ಹೋರಾಟಕ್ಕೆ ಮುಂದಾಗಿದ್ದಾರೆ.

    ತೆನೆಗೆ ನಾಯಕನ ಕೊರತೆ: ಮಾಜಿ ಸಚಿವ ಬಿ.ಸತ್ಯನಾರಾಯಣ ನಿಧನದ ನಂತರ ಜೆಡಿಎಸ್ ಅಸ್ಥಿತ್ವದ ಪ್ರಶ್ನೆಯೇ ಎದುರಾಗಿದೆ. ಗ್ರಾಮಗಳ ಕಾರ್ಯಕರ್ತರು ಸಾಮೂಹಿಕ ವಲಸೆ ಹೋಗಲಾರಂಭಿಸಿದ್ದಾರೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಂಡು ಪ್ರಾಬಲ್ಯ ಮುಂದುವರಿಸಲು ಕಾರ್ಯಕರ್ತರ ಸಭೆ ನಡೆಸುತ್ತಿದೆಯಾದರೂ ಭವಿಷ್ಯದ ನಾಯಕನ ಕೊರತೆ ಎದ್ದು ಕಾಣಿಸುತ್ತಿದೆ.

    ಬಿಜೆಪಿಯಲ್ಲಿ ಮೂರು ಶಕ್ತಿಕೇಂದ್ರ!: ಉಪಚುನಾವಣೆಯಲ್ಲಿ ನೂತನ ಶಾಸಕರನ್ನು ಪಡೆದು ಬೀಗುತ್ತಿರುವ ಬಿಜೆಪಿ ಗ್ರಾಮಗಳಲ್ಲಿ ಇನ್ನೂ ಸಂಘಟನೆ ಕೊರತೆ ಎದುರಿಸುತ್ತಿದೆ. ಬಹುತೇಕ ಗ್ರಾಮಗಳಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿವೆಯಾದರೂ ಪಕ್ಷದ ಬೆಂಬಲ ಪಡೆದು ಚುನಾವಣೆಗೆ ಸ್ಪರ್ಧಿಸುವ ಮುಖಂಡರ ಕೊರತೆಯಿದೆ. ಶಾಸಕ ಡಾ.ರಾಜೇಶ್‌ಗೌಡ, ನಿಗಮ ಮಂಡಳಿ ಅಧ್ಯಕ್ಷರಾಗಿರುವ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಚುನಾವಣೆಗೆ ತಯಾರಿ ನಡೆಸಿದ್ದು ಮೂರು ಶಕ್ತಿಕೇಂದ್ರಗಳಾಗಿ ಮಾರ್ಪಟ್ಟಿರುವುದು ಈ ಬೆಳವಣಿಗೆ ಬಿಜೆಪಿಗೆ ಲಾಭವೋ, ನಷ್ಟವೋ ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ.

    ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿ ಅಧಿಕಾರ ವಿಕೇಂದ್ರಿಕರಣದ ಸಂಕಲ್ಪದಂತೆ ಗ್ರಾಪಂ ಚುನಾವಣೆ ನಡೆಯುತ್ತಿದ್ದು ಹರಾಜು ಮೂಲಕ ಆಯ್ಕೆ ಶುದ್ಧ ತಪ್ಪು. ತಾಲೂಕು ಚುನಾವಣಾಧಿಕಾರಿ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುವ ಭ್ರಷ್ಟ ನಡೆಗೆ ಕಡಿವಾಣ ಹಾಕಬೇಕು.
    ಟಿ.ಬಿ.ಜಯಚಂದ್ರ, ಕಾಂಗ್ರೆಸ್ ಮುಖಂಡ

    ತಾಲೂಕಿನಲ್ಲಿ ಜೆಡಿಎಸ್ ಪ್ರಾಬಲ್ಯವಿದೆ, ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ಕ್ಷೇತ್ರದ ಜನರಿಗೆ ನಾಯಕನಿಲ್ಲದಂತಾಗಿದೆ. ಎಚ್.ಡಿ.ದೇವೇಗೌಡರ ಕುಟುಂಬ ಸದಸ್ಯರು ಶಿರಾ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿ ವಹಿಸಿದ್ದು ಮತ್ತೆ ನಮ್ಮ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಪೂರಕವಾಗಿ ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಹೆಚ್ಚು ಬಲ ನೀಡುವ ಕೆಲಸ ನಡೆದಿದೆ.
    ಆರ್.ಉಗ್ರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ

    ಬಿಜೆಪಿಯ ಸಿದ್ಧಾಂತದ ಮೇಲೆ ನಂಬಿಕೆ ಇರುವ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಅವಕಾಶ ನೀಡಲಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಗೆಲುವಿನ ಸಂಕಲ್ಪದೊಂದಿದೆ ಹೋರಾಟ ನಡೆಸಲಿದ್ದಾರೆ. ಗ್ರಾಪಂ ಚುನಾವಣೆ ನಂತರ ಕ್ಷೇತ್ರದಲ್ಲಿ ಬಿಜೆಪಿ ಮತ್ತಷ್ಟು ಬಲವಾಗಲಿದೆ.
    ಡಾ.ರಾಜೇಶ್‌ಗೌಡ, ಬಿಜೆಪಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts