More

    ವನವಾಸದ ರಾಮನಿಗೆ ಕಿರೀಟ: ಯಕ್ಷಗಾನದ ಗತ್ತು-ಗೈರತ್ತುಗಳಿಗೆ ಪೂರ್ಣವೇಷವೇ ಸಮಂಜಸ

    ಇಡಗುಂಜಿ ಮೇಳದ ಅದ್ಭುತ ಕಲಾಕೃತಿಯಲ್ಲೊಂದಾದ ‘ಸೀತಾಪಹರಣ’ ಪ್ರದರ್ಶನದ ಕುರಿತು ಕೇಳಿಬಂದ ಪ್ರಶ್ನೆಯೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಯಕ್ಷಗಾನ ಪ್ರದರ್ಶನ ಯಕ್ಷಗಾನೀಯವಾಗಿರಬೇಕೋ ಅಥವಾ ವಾಸ್ತವಕ್ಕೆ ಹತ್ತಿರವಾಗಿರಬೇಕೋ ಎಂಬ ಚರ್ಚೆ ಬಹುಕಾಲದಿಂದಲೂ ಇದೆ. ಸೀತಾಪಹರಣದ ಹಿನ್ನೆಲೆಯದಲ್ಲಿ ಅದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ನೀವೂ ಅಭಿಪ್ರಾಯ ವ್ಯಕ್ತಪಡಿಸಬಹುದು. ನಿಮ್ಮ ಅಭಿಪ್ರಾಯವನ್ನು ಯಾರ ಭಾವನೆಗೂ ಧಕ್ಕೆ ಬರದಂತೆ ಸುಮಾರು 200 ಪದಗಳಲ್ಲಿ ಇರುವಂತೆ ಟೈಪಿಸಿ ಕಳುಹಿಸಿ. ಸೂಕ್ತ ಕಂಡ ಬರಹವನ್ನು www.vijayavani.net ಮತ್ತು ವಿಜಯವಾಣಿಯ ಇತರ ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟಿಸಲಾಗುವುದು. ನಿಮ್ಮ ಬರಹ ಕಳುಹಿಸಬೇಕಾದ ಇ-ಮೇಲ್ ವಿಳಾಸ: [email protected]

    ವನವಾಸದ ರಾಮನಿಗೆ ಕಿರೀಟ: ಯಕ್ಷಗಾನದ ಗತ್ತು-ಗೈರತ್ತುಗಳಿಗೆ ಪೂರ್ಣವೇಷವೇ ಸಮಂಜಸ| ಶ್ರೀಧರ ಡಿ.ಎಸ್​., ಯಕ್ಷಗಾನ ವಿದ್ವಾಂಸ, ಕಲಾವಿದ, ಸಾಹಿತಿ
    ಇದು ಸೂಕ್ಷ್ಮ ವಿಚಾರ. ಯಕ್ಷಗಾನದ ಆಹಾರ್ಯಗಳ ಬಳಕೆಯನ್ನು ನಾಟಕದ ಆಹಾರ್ಯಗಳೊಂದಿಗೆ ತುಲನೆ ಮಾಡುವುದರಿಂದ ಇಂತಹ ಪ್ರಶ್ನೆಗಳೇಳುತ್ತವೆ. ಯಕ್ಷಗಾನದ ಪ್ರೇಕ್ಷಕ ರಾಮನನ್ನು ವನವಾಸಿಯಾಗಿದ್ದರೂ ರಾಮನನ್ನಾಗಿಯೇ ನೋಡುತ್ತಾನೆ. ಇಡಗುಂಜಿ ಮೇಳದಲ್ಲಿ ದಿ.ಶಂಭು ಹೆಗಡೆಯವರ ಕಾಲದಿಂದಲೂ ಯಕ್ಷಗಾನೀಯವಾಗಿ ಯೋಚಿಸಿ ಕಲಾಮೌಲ್ಯಗಳನ್ನು ವರ್ಧಿಸುವುದರ ಕುರಿತು ಗಂಭೀರ ಚಿಂತನೆ ನಡೆಸಿಯೇ ಪ್ರಯೋಗಕ್ಕೆ ಇಳಿಸುತ್ತಿದ್ದರೆಂಬುದು ತಿಳಿದ ವಿಚಾರ.

    ಯಕ್ಷಗಾನದ ಬಣ್ಣಗಾರಿಕೆ, ವೇಷಭೂಷಣಗಳೆಲ್ಲ ಆಯಾ ಪಾತ್ರಗಳ ಗುಣಸ್ವಭಾವಗಳನ್ನು ಪ್ರತಿಪಾದಿಸುತ್ತವೆ. ಇವು ಸಹಜವಾದ ಆಕೃತಿಗಳಲ್ಲ. ಯಕ್ಷಗಾನದ ಆಹಾರ್ಯಗಳೂ ನಮಗೆ ತಿಳಿಯದ ಭಿನ್ನ ನೆಲೆಯ ಚಿತ್ರಗಳು. ಅದು ಅದ್ಭುತ ಲೋಕದ ದೃಶ್ಯ. ಆದ್ದರಿಂದ ವೇಷವೆಂದರೆ ಪಾತ್ರದ ಹೊರಮೈಯ ಆಕೃತಿ ಮಾತ್ರವಲ್ಲ ಒಳಗಣ ಸ್ವಭಾವ. ಆದ್ದರಿಂದ ರಾಮ ಎಂದರೆ ಅವನ ಸ್ವಭಾವವೂ ಹೌದು. ಅದಕ್ಕೆ ಸಾತ್ವಿಕ ಸ್ವಭಾವದ ಆತನನ್ನು ಪೂರ್ಣ ವೇಷದಲ್ಲೇ ಪಾರಂಪರಿಕವಾಗಿ ತೋರ್ಪಡಿಸಲಾಗುತ್ತದೆ.

    ಇದು ರಾಮನಿಗೆ ಮಾತ್ರವಲ್ಲ. ವನವಾಸದ ಪಾಂಡವರಿಗೂ ಅನ್ವಯಿಸುತ್ತದೆ. ಇಲ್ಲೊಂದು ಸೂಕ್ಷವನ್ನು ಗಮನಿಸಬೇಕು. ವೇಷಾಂತರವನ್ನೇ ಮಾಡುವ ಸಂದರ್ಭ ಒದಗಿದಾಗ, ನಳನು ಬಾಹುಕನಾದಾಗ ಒಳಗಿನಿಂದ ನಳನೇ ಇದ್ದನೆಂಬುದಕ್ಕೆ ಕಿರೀಟ ಸಂಕೇತ. ಋಷಿಗಳ ಪಾತ್ರವೇ ಆದರೂ ಮುಡಿಯನ್ನು, ಆಭರಣವನ್ನೂ ಕಟ್ಟಿಯೇ ಮಾಡುವುದು ಬಹುಕಾಲದಿಂದ ಬಂದಿದೆ( ಬಡಗಿನಲ್ಲಿ). ರಾಮನಿಗೆ ಋಷಿಗಿಂತ ಭಿನ್ನತೆ ಇದೆಯಲ್ಲ. ಇಲ್ಲವಾದರೆ ಋಷಿಯಂತೆ ಚಿತ್ರಿಸಬೇಕು. ಅದು ರಾಮನಾಗದು. ಈ ಹಿನ್ನೆಲೆಯಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ವಿಧಾನ ಸರಿ ಎನ್ನಿಸುತ್ತದೆ.

    ಯಕ್ಷಗಾನದ ಬಣ್ಣ, ಕಿರಾತ, ಹೆಣ್ಣುಬಣ್ಣ, ಋಷಿ ಇವುಗಳೆಲ್ಲ ಆಯಾಪಾತ್ರಗಳ ಸ್ವಭಾವಗಳ ಹೊರಾವರಣ ಆಹಾರ್ಯ. ಯಕ್ಷಗಾನದ ನೃತ್ಯ, ಪರಂಪರಾ ಕ್ರಮಗಳ ಪ್ರದರ್ಶನಗಳಿಗೂ ಈ ರೀತಿ ಸರಿಹೊಂದುತ್ತವೆ. ರಂಗದ ಹಿನ್ನೆಲೆಯಲ್ಲೆ ಹೇಳುವುದಾದರೆ “ಪಂಚವಟಿ” ಪ್ರಸಂಗದಲ್ಲಿ ರಾಮ, ಲಕ್ಷ್ಮಣ, ರಾವಣ, ಮಾರೀಚ ಈ ಎಲ್ಲ ಪಾತ್ರಗಳೂ ಯಕ್ಷಗಾನದ ವೇಷವೇ ಇಲ್ಲದೆ ಬರಬೇಕಾಗುತ್ತದೆ. ಇಡೀ ಕಥೆಯೇ ಹಾಗಾಗುವುದೂ ಸರಿಯಲ್ಲವಲ್ಲ. ಯಕ್ಷಗಾನದ ಗತ್ತು ಗೈರತ್ತುಗಳಿಗೆ ಪೂರ್ಣವೇಷವೇ ಸಮಂಜಸ, ಸರಿಯಾದ ಕ್ರಮ.

    ವನವಾಸದ ರಾಮನಿಗೆ ಕಿರೀಟ: ಯಕ್ಷಗಾನದ ಗತ್ತು-ಗೈರತ್ತುಗಳಿಗೆ ಪೂರ್ಣವೇಷವೇ ಸಮಂಜಸ

    ವನವಾಸಿ ರಾಮನಿಗೇಕೆ ಕಿರೀಟ-ಆಭರಣ?: ಹೀಗೊಂದು ಚರ್ಚೆ, ನಿಮ್ಮ ಅಭಿಪ್ರಾಯಕ್ಕೂ ಇಲ್ಲಿದೆ ವೇದಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts