More

    ಯಕ್ಷಗಾನದಲ್ಲಿ ಅದು ಆಭರಣವಲ್ಲ, ಅಪೂರ್ವ ಕಲಾತ್ಮಕ ಚಿತ್ರಣ..

    ಇಡಗುಂಜಿ ಮೇಳದ ಅದ್ಭುತ ಕಲಾಕೃತಿಯಲ್ಲೊಂದಾದ ‘ಸೀತಾಪಹರಣ’ ಪ್ರದರ್ಶನದ ಕುರಿತು ಕೇಳಿಬಂದ ಪ್ರಶ್ನೆಯೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಯಕ್ಷಗಾನ ಪ್ರದರ್ಶನ ಯಕ್ಷಗಾನೀಯವಾಗಿರಬೇಕೋ ಅಥವಾ ವಾಸ್ತವಕ್ಕೆ ಹತ್ತಿರವಾಗಿರಬೇಕೋ ಎಂಬ ಚರ್ಚೆ ಬಹುಕಾಲದಿಂದಲೂ ಇದೆ. ಸೀತಾಪಹರಣದ ಹಿನ್ನೆಲೆಯದಲ್ಲಿ ಅದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ನೀವೂ ಅಭಿಪ್ರಾಯ ವ್ಯಕ್ತಪಡಿಸಬಹುದು. ನಿಮ್ಮ ಅಭಿಪ್ರಾಯವನ್ನು ಯಾರ ಭಾವನೆಗೂ ಧಕ್ಕೆ ಬರದಂತೆ ಸುಮಾರು 200 ಪದಗಳಲ್ಲಿ ಇರುವಂತೆ ಟೈಪಿಸಿ ಕಳುಹಿಸಿ. ಸೂಕ್ತ ಕಂಡ ಬರಹವನ್ನು www.vijayavani.net ಮತ್ತು ವಿಜಯವಾಣಿಯ ಇತರ ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟಿಸಲಾಗುವುದು. ನಿಮ್ಮ ಬರಹ ಕಳುಹಿಸಬೇಕಾದ ಇ-ಮೇಲ್ ವಿಳಾಸ: [email protected]

    ಯಕ್ಷಗಾನದಲ್ಲಿ ಅದು ಆಭರಣವಲ್ಲ, ಅಪೂರ್ವ ಕಲಾತ್ಮಕ ಚಿತ್ರಣ..| ಶಿವಾನಂದ ಹೆಗಡೆ ಕೆರೆಮನೆ, ಯಕ್ಷಗಾನ ಚಿಂತಕ, ಕಲಾವಿದ
    ನಮ್ಮ ಮಂಡಳಿಯ ಸೀತಾಪಹರಣಕ್ಕೆ ವಿಜಯವಾಣಿಯಲ್ಲಿ ಬರೆದ ಮಹತ್ವದ ಒಳನೋಟದ ಮಾತುಗಳಿಗೆ ಅತ್ಯಂತ ಆಭಾರಿ. ತಾವು ಎತ್ತಿದ ಒಂದು ಪ್ರಮುಖ ಪ್ರಶ್ನೆ ಕೂಡ ಗಮನಿಸಿದೆ. ತಾವೆಂದಂತೆ, ನನ್ನಲ್ಲಿ ಈಗಾಗಲೇ ಕೆಲವರು ನಮ್ಮ ಮಂಡಳಿಯ ಪ್ರಯೋಗವನ್ನು ಮುಖ್ಯವಾಗಿ ಆಹಾರ್ಯದಲ್ಲಿ ಆದ ಬದಲಾವಣೆಯ ಕುರಿತ ಪ್ರಶ್ನೆ ಕೇಳಿದ್ದಾರೆ. ನನ್ನ ನಿರ್ದೇಶನದ ಇನ್ನಿತರ ಕೃತಿಗಳಲ್ಲಿ ಕೂಡ ಈ ತರಹದ ಪ್ರಶ್ನೆ ಬಂದಿದೆ. ಇದಕ್ಕೆ ಆಗಲೇ ಆ ಆ ಸಂದರ್ಭದಲ್ಲಿ ಉತ್ತರಿಸಿದ್ದೇನೆ. ಪ್ರಸ್ತುತ ವನವಾಸದ ರಾಮನಿಗೆ ಕಿರೀಟ-ಆಭರಣ ಬೇಕೆ? ಎಂಬ ಪ್ರಶ್ನೆ.

    ನಾನು ಈಗಾಗಲೇ ತಂದ ಬಹುತೇಕ ಬದಲಾವಣೆ ಪರಂಪರೆಯದ್ದೇ ಆಗಿದೆ. ಯಕ್ಷಗಾನ ರಂಗಭೂಮಿಯಿಂದ ಅದು ಬಹುತೇಕ ಮರೆತು ಹೋಗುವಂತಾಗಿದೆ. ಮುಖ್ಯವಾಗಿ ಯಕ್ಷಗಾನದ ಆಭರಣ ಎಂದು ಕರೆಯುವುದು ವ್ಯಾವಹಾರಿಕ ಸೌಕರ್ಯಕ್ಕಾಗಿಯೇ ಹೊರತು ಮತ್ತೇನೂ ಅಲ್ಲ. ಆ ಪಾತ್ರ ಬೇರೆ, ಕಟ್ಟಿದ ಆಭರಣ ಬೇರೆ ಅಂತ ನೋಡುವುದರಲ್ಲೇ ತಪ್ಪಿದೆ. ಒಂದು ಅದ್ಭುತ ರಮ್ಯ ರಂಗಭೂಮಿಯ ಸಹಜ ಗುಣ ಮತ್ತು ಅಭಿವ್ಯಕ್ತಿ ವಿಧಾನ ಈ ಆಭರಣಗಳು. ಆ ಆ ಕಾಲ, ಲೋಕದ ವ್ಯಕ್ತಿಗಳಲ್ಲಿ ಮತ್ತು ಕಥೆಗಳಲ್ಲಿ ಅತಿಮಾನುಷತೆಯನ್ನು, ಶಾಬ್ದಿಕವಾಗಿ ಕಟ್ಟಿಕೊಳ್ಳಲು ಸಾಧ್ಯವಾಗದ ಪಾತ್ರಗಳನ್ನು ಯಕ್ಷಗಾನ ರಂಗಭೂಮಿ ಆಹಾರ್ಯದ ಮೂಲಕ ಸಾಧಿಸಿದ ಅಪೂರ್ವ ಕಲಾತ್ಮಕ ಚಿತ್ರಣ ಈ ಆಭರಣ ಎಂದು ಕರೆಯುವ ವಸ್ತುಗಳು. ಅಂದರೆ ಅದು ಆಭರಣ ಅಲ್ಲ ಆಆ ಪಾತ್ರದ ಮೈ ಕೈ, ಮುಖ, ಶರೀರದ ಕಲಾತ್ಮಕ ವಿಸ್ತೃತ ರೂಪ ಅಥವಾ ವಿಕಾಸಗೊಂಡ ರೂಪ. ಇದು ಬಹಳ ಹಿಂದೆಯೇ ನಾನು ಕಂಡುಕೊಂಡ ಸತ್ಯ. ಜಾಲತಾಣದಲ್ಲಿ ಕೆಲ ಮಿತ್ರರು ಇದನ್ನು ಎತ್ತಿದಾಗ ನನ್ನ ವಿಚಾರ ಹೇಳಿದ್ದೇನೆ. ಅಂತೆಯೆ ಇತ್ತೀಚೆಗೆ ಯಕ್ಷರಂಗ ಪತ್ರಿಕೆ ಹಳದೀಪುರದಲ್ಲಿ ಏರ್ಪಡಿಸಿದ್ದ ಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ಒಬ್ಬರು ಕೇಳಿದ್ದರು. ಆಗ ಕೂಡ ನನ್ನ ಯೋಚನೆ ಹೇಳಿದ್ದೆ.

    ಇದು ವಾಸ್ತವ ರಂಗಭೂಮಿಯಲ್ಲ. ಕಾಲ್ಪನಿಕ ಲೋಕದ ಕಲಾತ್ಮಕ ಪ್ರದರ್ಶನ. ಆದಷ್ಟು ಸಾಂಕೇತಿಕತೆಯನ್ನು ಧ್ವನಿಸುವ ರಂಗಭೂಮಿ. ಇಲ್ಲಿ ಲೋಕಧರ್ಮಿಗಿಂತ ನಾಟ್ಯಧರ್ಮಿ ಪ್ರಧಾನ. ದಮಯಂತಿ ಸ್ವಯಂವರದ ಬಾಹುಕನಿಗೂ ಇದೇ ಸಿದ್ಧಾಂತದ ಆಧಾರದ ಮೇಲೆ ಕಿರೀಟ ಇಟ್ಟು ಕಪ್ಪು ಬಟ್ಟೆಯಿಂದ ಅದನ್ನ ಮುಚ್ಚಿ ಅವನ ಪರಿವರ್ತನೆಯನ್ನು ಸಾಂಕೇತಿಕವಾಗಿ ಧ್ವನಿಸಿದ್ದೇನೆ.

    ಬಹುತೇಕರು ರಾಮಾಯಣದ ವನವಾಸದ ವೇಷದ ಬಗ್ಗೆ ಪ್ರಶ್ನಿಸುತ್ತಾರೆ. ಆದರೆ ಮಹಾಭಾರತ ಕೃಷ್ಣಾರ್ಜುನ ಕಾಳಗ, ಸೌಗಂಧಿಕಾ ಹರಣ, ಕಿರಾತಾರ್ಜುನ ಮುಂತಾದ ವನವಾಸದ ಪ್ರಸಂಗದಲ್ಲಿ ಪಾಂಡವರು ವನವಾಸದಲ್ಲಿ ಆಭರಣ ಸಹಿತ ಇರುವ ಯಕ್ಷಗಾನೀಯ ಸಂಪ್ರದಾಯವನ್ನು ಇಲ್ಲೂ ಅನ್ವಯಿಸುವಲ್ಲಿ ಮರೆಯುತ್ತಾರೆ.

    ನೀವು ಬರೆದಂತೆ ಆಟ ಆದ ಮೇಲೆ ಪ್ರೇಕ್ಷಕರೊಟ್ಟಿಗೆ ಸಣ್ಣ ಚರ್ಚೆಗೆ, ಸಂವಾದಕ್ಕೆ ಅವಕಾಶ ಸಿಕ್ಕರೆ ಬಹಳ ಉತ್ತಮ ವಿಚಾರ ವಿನಿಮಯ ಸಾಧ್ಯ. ಮೊನ್ನೆ ಡಿ.12 ನೇ ತಾರೀಖು ಬೆಂಗಳೂರಿನ ಐಐಎಸ್​​ಸಿಯಲ್ಲಿ ನಡೆದ ನಮ್ಮ ಪ್ರದರ್ಶನದ ನಂತರ ಆ ಕುರಿತು ಅನೇಕ ಪ್ರಶ್ನೋತ್ತರ, ಅರ್ಥಪೂರ್ಣ ಚರ್ಚೆ ನಡೆಯಿತು. ಇದು ಇನ್ನೂ ಹೆಚ್ಚು ನಮ್ಮ ತಾತ್ವಿಕ ಸಿದ್ಧಾಂತವನ್ನು ಗಟ್ಟಿಗೊಳಿಸುತ್ತದೆ. ಪ್ರೇಕ್ಷಕರ ನಮ್ಮ ನಡುವೆ ವೈಚಾರಿಕ ಬಾಂಧವ್ಯ ಬೆಸೆಯುತ್ತದೆ.

    ಯಕ್ಷಗಾನದ ಆಹಾರ್ಯದ ಬಗ್ಗೆ ವ್ಯಾಪಕ ಚರ್ಚೆ ಬೇಕಿದೆ. ಇಂಥ ಪ್ರಶ್ನೆ ಬಂದಾಗ ಪರಂಪರೆ ಎಂಬ ಒಂದು ಶಬ್ದ ಮುಂದಿಟ್ಟು ದಾಟುವವರೇ ಹೆಚ್ಚು. ಆಗ ಪರಂಪರೆಯಲ್ಲಿ ನುಸುಳಿದ ತಪ್ಪು ಕೂಡ ಹಾಗೇ ಉಳಿಯುತ್ತದೆ. ತಾವು ಎತ್ತಿದ ಪ್ರಶ್ನೆಗೆ ನಾನು ಆಭಾರಿ.

    ಯಕ್ಷಗಾನದಲ್ಲಿ ಅದು ಆಭರಣವಲ್ಲ, ಅಪೂರ್ವ ಕಲಾತ್ಮಕ ಚಿತ್ರಣ..

    ವನವಾಸಿ ರಾಮನಿಗೇಕೆ ಕಿರೀಟ-ಆಭರಣ?: ಹೀಗೊಂದು ಚರ್ಚೆ, ನಿಮ್ಮ ಅಭಿಪ್ರಾಯಕ್ಕೂ ಇಲ್ಲಿದೆ ವೇದಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts