More

    ವನವಾಸಿ ರಾಮನಿಗೇಕೆ ಕಿರೀಟ-ಆಭರಣ?: ಹೀಗೊಂದು ಚರ್ಚೆ, ನಿಮ್ಮ ಅಭಿಪ್ರಾಯಕ್ಕೂ ಇಲ್ಲಿದೆ ವೇದಿಕೆ..

    ಇಡಗುಂಜಿ ಮೇಳದ ಅದ್ಭುತ ಕಲಾಕೃತಿಯಲ್ಲೊಂದಾದ ‘ಸೀತಾಪಹರಣ’ ಪ್ರದರ್ಶನದ ಕುರಿತು ಕೇಳಿಬಂದ ಪ್ರಶ್ನೆಯೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಯಕ್ಷಗಾನ ಪ್ರದರ್ಶನ ಯಕ್ಷಗಾನೀಯವಾಗಿರಬೇಕೋ ಅಥವಾ ವಾಸ್ತವಕ್ಕೆ ಹತ್ತಿರವಾಗಿರಬೇಕೋ ಎಂಬ ಚರ್ಚೆ ಬಹುಕಾಲದಿಂದಲೂ ಇದೆ. ಸೀತಾಪಹರಣದ ಹಿನ್ನೆಲೆಯದಲ್ಲಿ ಅದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ನೀವೂ ಅಭಿಪ್ರಾಯ ವ್ಯಕ್ತಪಡಿಸಬಹುದು. ನಿಮ್ಮ ಅಭಿಪ್ರಾಯವನ್ನು ಯಾರ ಭಾವನೆಗೂ ಧಕ್ಕೆ ಬರದಂತೆ ಸುಮಾರು 200 ಪದಗಳಲ್ಲಿ ಇರುವಂತೆ ಟೈಪಿಸಿ ಕಳುಹಿಸಿ. ಸೂಕ್ತ ಕಂಡ ಬರಹವನ್ನು www.vijayavani.net ಮತ್ತು ವಿಜಯವಾಣಿಯ ಇತರ ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟಿಸಲಾಗುವುದು. ನಿಮ್ಮ ಬರಹ ಕಳುಹಿಸಬೇಕಾದ ಇ-ಮೇಲ್ ವಿಳಾಸ: [email protected]

    | ರಾಜಶೇಖರ ಜೋಗಿನ್ಮನೆ

    ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಎನ್ನುವುದು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ ಒಂದು ಕಲಾತಂಡ. ಹಾಗೆಂದು ಅದನ್ನು ಕೇವಲ ಪ್ರದರ್ಶನ ಮೇಳ ಎನ್ನಲಾಗದು. ಕಲಾಚಿಂತನೆ, ಸೃಜನಶೀಲತೆ, ಕಲೆಯ ಸೌಂದರ್ಯ ಎಲ್ಲವನ್ನೂ ಮೇಳೈಸಿಕೊಂಡ ಒಂದು ಯಕ್ಷಗಾನ ಅಭಿಯಾನ ಎಂದರೇ ಬಹುಶಃ ಹೆಚ್ಚು ಸರಿ. ಯಕ್ಷಗಾನ ಪರಂಪರೆಯ ಚೌಕಟ್ಟಿನಲ್ಲಿ ಪ್ರದರ್ಶನವನ್ನು ಇನ್ನಷ್ಟು ಅಂದಗೊಳಿಸಲು ಬೇಕಾಗಿ ಏನೆಲ್ಲ ಮಾಡಬಹುದು ಎಂದು ಸದಾ ಚಿಂತಿಸುತ್ತ ಬಂದಿರುವ ಹೆಗ್ಗಳಿಕೆ ಅದರದು. ಯಕ್ಷಗಾನ ಹೇಗೆ ನಿತ್ಯನೂತನವೋ ಹಾಗೆಯೇ ಪ್ರದರ್ಶನವನ್ನೂ ನಿತ್ಯನೂತನವಾಗಿಸುತ್ತ, ಅದನ್ನು ಸುಧೋರಣೆಯಿಂದ ಪರಿಷ್ಕರಿಸುತ್ತ ಬೇರೆಯದೇ ನೆಲೆಯನ್ನು ಇಡಗುಂಜಿ ಮೇಳ ಕಂಡುಕೊಂಡಿದೆ. ಕೆರೆಮನೆ ಶಿವಾನಂದ ಹೆಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಮೇಳದ ಪ್ರದರ್ಶನಗಳಲ್ಲಿ ಕಲಾತ್ಮಕತೆಯ ಅಂಶ ಜಾಸ್ತಿ. ಎಲ್ಲೂ ಅತಿರೇಕವಿಲ್ಲದ, ಅನಗತ್ಯ ಅಬ್ಬರವಿಲ್ಲದ, ಸಮತೂಕದ, ಹದವಾದ ಪಾಕ ಅವರ ಪ್ರದರ್ಶನದಲ್ಲಿರುತ್ತದೆ. ಅಲ್ಲಿ ಯಾರೋ ಒಬ್ಬ ಕಲಾವಿದ ಆವರಿಸುವುದಿಲ್ಲ. ಬದಲಿಗೆ ಎಲ್ಲವೂ ಎಲ್ಲರೂ ಪಾತ್ರದ ನತೆಗನುಗುಣವಾಗಿ ಬೆರೆತ ಸಮಗ್ರತೆಯನ್ನು ಕಾಣಬಹುದಾಗಿದೆ. ಆದ್ದರಿಂದಲೇ ಕೆರೆಮನೆ ಮೇಳದ ಯಕ್ಷಗಾನ ಪ್ರದರ್ಶನವೆಂದರೆ ಅದು ಅಪ್ಪಟ ಕಲಾ ಪ್ರದರ್ಶನ. ಯಕ್ಷಗಾನವನ್ನು ಮೊದಲ ಬಾರಿ ನೋಡುವವರೂ ಇಷ್ಟಪಡುವಂಥ ಪ್ರಯೋಗ ಅದಾಗಿರುತ್ತದೆ ಎನ್ನಲಡ್ಡಿಯಿಲ್ಲ.

    ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುವ ಕೆರೆಮನೆ ಮೇಳವು ಪ್ರದರ್ಶಿಸಿದ “ಸೀತಾಪಹರಣ’ ಆಖ್ಯಾನ ಇತ್ತೀಚೆಗೆ ಬೆಂಗಳೂರಿನ ರಂಗಶಂಕರದಲ್ಲಿ ಗಮನ ಸೆಳೆಯಿತು. ವನವಾಸಕ್ಕೆ ತೆರಳಿದ ರಾಮ, ಲಕ್ಷ್ಮಣ, ಸೀತೆ ಪರ್ಣಕುಟಿ ರಚಿಸಿಕೊಂಡು ವಾಸಮಾಡಿದ ನಂತರ ಆರಂಭವಾಗುವ ಕಥಾನಕ ಸೀತೆಯ ಅಪಹರಣದೊಂದಿಗೆ ಮುಕ್ತಾಯವಾಗುತ್ತದೆ. ರಾವಣನಲ್ಲಿ ರಾಮನ ಕುರಿತು ದೂರುವ ಶೂರ್ಪನಖಿ ಸೀತೆಯನ್ನು ತರಲು ಒತ್ತಾಯಿಸಿ ತೆರಳುವುದು, ಮಾರೀಚ&ರಾವಣರ ಸಂಭಾಷಣೆ, ಮಾಯಾಜಿಂಕೆಯ ಮಾಯೆ, ಸೀತೆಯನ್ನು ವಿಧವಿಧವಾಗಿ ಆಕರ್ಷಿಸುವ ಜಿಂಕೆ, ಜಿಂಕೆಯನ್ನು ಹಿಡಿಯುವ ರಾಮನ ಯತ್ನ, ತಪ್ಪಿಸಿಕೊಳ್ಳುವ ಜಿಂಕೆಯ ಆಟ…ಇತ್ತ ಸೀತೆಯ ಅಪಹರಣ, ಜಟಾಯುವಿನ ಹೋರಾಟ ಇವೆಲ್ಲವೂ ಮನಮೋಹಕವಾಗಿ ಚಿತ್ರಿತವಾಗುವ ಮೂಲಕ ಪ್ರದರ್ಶನ ಎಲ್ಲೂ ಪ್ರೇಕ್ಷಕರ ಗಮನ ಬೇರೆಡೆ ಹೋಗದಂತೆ ಸೆಳೆದುಬಿಡುತ್ತದೆ. ರಂಗವನ್ನು ಅವರು ಬಳಸಿಕೊಂಡ ರೀತಿ, ಜಿಂಕೆಯನ್ನೂ ಸೇರಿದಂತೆ ಪ್ರತಿ ಪಾತ್ರವನ್ನೂ ಅಚ್ಚುಕಟ್ಟಾಗಿ ರೂಪಿಸಿದ ಜಾಣ್ಮೆ, ಪ್ರತಿ ಅಂಶವನ್ನೂ ಸೂಕ್ಷ್ಮವಾಗಿ ಗ್ರಹಿಸಿ ನ್ಯಾಯ ಒದಗಿಸಿದ ತನ್ಮಯತೆ ಈ ಎಲ್ಲ ಕಾರಣದಿಂದಾಗಿ ಒಂದು ಪ್ರಯೋಗವಾಗಿ ಸೀತಾಪಹರಣ ಖಂಡಿತ ಇಷ್ಟವಾಗುತ್ತದೆ. ಅದಕ್ಕೆ ನೂರಕ್ಕೆ ತೊಂತ್ತೊಂಬತ್ತು ಅಂಕ ನಿಶ್ಚಿತ. ತೆರೆಕುಣಿತ, ಒಡ್ಡೋಲಗದಂಥ ಪರಂಪರೆಯನ್ನು ಇಟ್ಟುಕೊಂಡೂ ಕೇವಲ ಒಂದೂವರೆ ಗಂಟೆ ಅವಧಿಯಲ್ಲಿ ಸದಾಶಯದ ಮಂಗಳದೊಂದಿಗೆ ಯಶಸ್ವೀ ಪ್ರದರ್ಶನವಾಗಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸುಮಧುರ ಹಿಮ್ಮೇಳ, ಹಿತಮಿತವಾದ ಮಾತು…ಹೀಗೆ ಒಂದು ಕಲಾಪ್ರದರ್ಶನ ಯೋಗ್ಯವಾಗುವಂತೆ ಕೋರಿಯಾಗ್ರಫಿ ಮಾಡಿದ ಶಿವಾನಂದ ಅವರ ಪ್ರಯತ್ನ ಅಭಿನಂದನೀಯ. ಈ ಪ್ರದರ್ಶನ ಮುಗಿದಾಗ ಸಭಿಕರು ಎದ್ದುನಿಂತು ಸುಮಾರು ಐದು ನಿಮಿಷಗಳ ಕಾಲ ಕರತಾಡನ ಮಾಡಿದ್ದು ಪ್ರದರ್ಶನದ ಯಶಸ್ಸಿಗೆ ಸಾಕ್ಷಿಯಾಗಿತ್ತು.

    ಈ ಎಲ್ಲದರ ನಡುವೆಯೂ ಯಕ್ಷಗಾನದ ಪಾರಂಪರಿಕ ಪ್ರೇಕ್ಷಕರಲ್ಲಿ, ರಾಮಾಯಣದ ಕುರಿತು ಬಲ್ಲವರಲ್ಲಿ ಈ ಪ್ರದರ್ಶನ ಒಂದೆರಡು ಪ್ರಶ್ನೆಗಳನ್ನೆತ್ತುತ್ತದೆ. ಪ್ರಮುಖವಾದ ಆಕ್ಷೇಪ ವೇಷಭೂಷಣದ ಕುರಿತಾಗಿ. ನಾವೆಲ್ಲ ತಿಳಿದಿರುವಂತೆ ವನವಾಸದಲ್ಲಿರುವ ರಾಮ, ಲಕ್ಷ್ಮಣ, ಸೀತೆಯರು ನಾರುಬಟ್ಟೆಯುಟ್ಟು ತೆರಳಿದವರು. ಆದರೆ ಈ ಪ್ರದರ್ಶನದಲ್ಲಿ ಸೀತೆ ಸರ್ವಾಭರಣ ಭೂಷಿತೆಯಾಗಿರುತ್ತಾಳೆ. ಅದನ್ನು ಸ್ವಲ್ಪ ಒಪ್ಪಬಹುದು. ನಂತರ ಆಕೆ ದಾರಿಯುದ್ದಕ್ಕೂ ತನ್ನ ಆಭರಣಗಳನ್ನು ಎಸೆಯುತ್ತ ಹೋಗುತ್ತಾಳೆ, ಕಿಷ್ಕಿಂಧೆಯಲ್ಲಿ ಬೀಳಿಸುತ್ತಾಳೆ ಎಂಬ ಉಲ್ಲೇಖವೂ ಕೆಲವೆಡೆ ಇದೆ. ಆದರೆ ಇಲ್ಲಿ ರಾಮನೂ ಕಿರೀಟಧಾರಿ. ಸನ್ಯಾಸಿ ವೇಷದಲ್ಲಿ ಬರುವ ರಾವಣನೂ ತೀರ ಬೇರೆ ಅನಿಸುವುದಿಲ್ಲ. ಕೆರೆಮನೆ ಮೇಳದವರು ಇತ್ತೀಚೆಗೆ ಬಳಸುತ್ತಿರುವ ವೇಷಭೂಷಣದ ಕುರಿತಾಗಿ ಇಂಥ ಪ್ರಶ್ನೆಗಳು ಅವರ ಇನ್ನೂ ಕೆಲ ಆಖ್ಯಾನಗಳ ಬಗೆಗೂ ಇವೆ. ಉದಾಹರಣೆಗೆ ದಮಯಂತಿ ಸ್ವಯಂವರದ ಬಾಹುಕ. ಶಂಭು ಹೆಗಡೆಯವರು ಆ ಪಾತ್ರಕ್ಕೆ ಬಳಸಿದ ವೇಷಭೂಷಣ ಜನಪ್ರಿಯವಾಗಿತ್ತು. ಆದರೆ ಈಗ ಶಿವಾನಂದ ಹೆಗಡೆ ಆ ಪಾತ್ರಕ್ಕೂ ಕಿರೀಟ ಬಳಕೆ ಆರಂಭಿಸಿದ್ದಾರೆ. ಇದು ಸರಿಯೇ? ಇದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸುವುದಿಲ್ಲವೇ ಎಂಬ ಪ್ರಶ್ನೆಗಳೂ ಸಹಜ. ಇದು ಬೇರೆ ಬೇರೆ ಸಂದರ್ಭದಲ್ಲಿ ಬಹುಕಾಲದಿಂದ ಕೇಳಿಬರುತ್ತಿರುವ ಆಕ್ಷೇಪವಾದರೂ ಈ ಬದಲಾವಣೆಯನ್ನು ಶಿವಾನಂದ ಅವರು ಸಕಾರಣದಿಂದಲೇ ಮಾಡಿದ್ದಾರೆನಿಸುತ್ತದೆ. ಏಕೆಂದರೆ ಅವರಿಗಿರುವ ಯಕ್ಷಗಾನದ ಕುರಿತಾದ ಕಾಳಜಿ ಹಾಗೂ ಸ್ಪಷ್ಟ ತಿಳಿವಳಿಕೆ ಮತ್ತು ದೇಶದ ಬೇರೆ ಬೇರೆ ಕಲೆಗಳ ಕುರಿತಾಗಿ ಅವರಿಗಿರುವ ಜ್ಞಾನದ ಕುರಿತು ಯಾವುದೇ ಅನುಮಾನವಿಲ್ಲದಿರುವುದರಿಂದ ಹಾಗನಿಸುತ್ತದೆ. ಈ ಪ್ರಯೋಗಕ್ಕೆ ಸಮರ್ಥನೆಗಳೂ ಅವರಲ್ಲಿ ಖಂಡಿತ ಇದ್ದಿರಬಹುದು. ಪ್ರದರ್ಶನದ ಕುರಿತಾಗಿ ಇಷ್ಟೆಲ್ಲ ಯೋಚಿಸಿರುವಾಗ ಅವರಲ್ಲಿಯೂ ಈ ಪ್ರಶ್ನೆ ಎದ್ದಿರಲೇಬೇಕು. ಹಾಗಿದ್ದಲ್ಲಿ ಈ ಪ್ರಶ್ನೆಗಳಿಗೆ ಅವರು ಕಂಡುಕೊಂಡ ಉತ್ತರವೇನು ಎಂಬುದನ್ನು ಪ್ರೇಕ್ಷಕರಿಗೂ ಸ್ಪಷ್ಟಗೊಳಿಸುವುದು ತೀರ ಅಗತ್ಯ. ಸಾಧ್ಯವಾದರೆ ಪ್ರದರ್ಶನದ ಆರಂಭದಲ್ಲೋ ಕೊನೆಯಲ್ಲಿಯೋ ತಾವೇಕೆ ಅದನ್ನು ಬಳಸಿದ್ದೇವೆ ಎಂಬುದನ್ನು ತಿಳಿಸುವುದೊಳಿತು. “ಸೂಕ್ತ ಸಮರ್ಥನೆ ಇಲ್ಲದಿದ್ದರೆ’ ಈಗಿನ ಸ್ವರೂಪವನ್ನು ಬದಲಿಸುವುದು ಕೂಡ ಅಪೇಕ್ಷಣಿಯ. ಏಕೆಂದರೆ ಉತ್ತಮ ಪ್ರದರ್ಶನವೊಂದು ಇಂಥ ಸಣ್ಣಪುಟ್ಟ ಗೊಂದಲಗಳಿಂದ ಮುಕ್ತವಾಗುವುದು ಯಕ್ಷಗಾನದ ದೃಷ್ಟಿಯಿಂದಲೂ ಅಗತ್ಯ ಎನ್ನುವುದು ಈ ಬರಹದ ಆಶಯ.

    ವನವಾಸಿ ರಾಮನಿಗೇಕೆ ಕಿರೀಟ-ಆಭರಣ?: ಹೀಗೊಂದು ಚರ್ಚೆ, ನಿಮ್ಮ ಅಭಿಪ್ರಾಯಕ್ಕೂ ಇಲ್ಲಿದೆ ವೇದಿಕೆ..

    ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್​​ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್​ ಮಾಡಲು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts