More

    ಇಂದಿನಿಂದ ಶ್ರೀ ಸಂಗಮೇಶ್ವರ ಜಾತ್ರೆ ಆರಂಭ

    ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಸಂಸ್ಥೆ ಹಾಗೂ ಚಡಚಣ ಪಪಂ ಸಂಯುಕ್ತಾಶ್ರಯದಲ್ಲಿ ಫೆ. 11ರಿಂದ ಫೆ. 17ರ ವರೆಗೆ ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಉತ್ಸವ ಹಾಗೂ ಜಾನುವಾರು ಜಾತ್ರೆ ನಡೆಯಲಿದೆ.
    ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಫೆ. 11 ರಂದು ಬೆಳಗ್ಗೆ ಶ್ರೀ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮತ್ತು ನಂದೀಶನಿಗೆ ಎಣ್ಣೆಮಜಲು ಪೂಜೆ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ, ನಂದಿಧ್ವಜವು ವಿವಿಧ ವಾದ್ಯ-ವೈಭವಗಳೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವುದು. ನಂತರ 9 ಗಂಟೆಗೆ ದೇವರ ನುಡಿಮುತ್ತುಗಳು ನಡೆಯಲಿವೆ.
    ಫೆ. 12 ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ನಂಧ್ವಜವು ವಿವಿಧ ಕಲಾ ತಂಡಗಳೊಂದಿಗೆ ಹೊರಟು ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ನಂತರ ರಾತ್ರಿ 9 ಗಂಟೆಗೆ ಸಂಗಮೇಶ್ವರ ಸಂಸ್ಥೆ ಹಾಗೂ ಇಂಡಿಯನ್ ಶುಗರ್ಸ್‌ ಸಕ್ಕರೆ ಕಾರ್ಖಾನೆಯ ಸಹಕಾರದೊಂದಿಗೆ ದೇವಸ್ಥಾನದ ಬಳಿಯ ಸ್ಥಳದಲ್ಲಿ ವರ್ಣರಂಜಿತ ಚಿತ್ರ-ವಿಚಿತ್ರವಾದ ಮದ್ದು ಸುಡಲಾಗುವುದು.
    ಫೆ. 13 ರಂದು ಮಧ್ಯಾಹ್ನ 2.30 ಗಂಟೆಗೆ ಚಡಚಣ ಪಪಂ ವತಿಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಸಿದ್ಧ ಕುಸ್ತಿ ಪಟುಗಳಿಂದ ಮಲ್ಲರ ಜಂಗಿ ಕುಸ್ತಿಗಳು ನಡೆಯಲಿವೆ.
    ಫೆ. 17 ರಂದು ಸಂಜೆ 7 ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ, ನಂದಿಧ್ವಜ ನಾನಾ ತರಹದ ವಾದ್ಯ ವೈಭವಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪುವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
    ಜಾನುವಾರು ಜಾತ್ರೆ ನಡೆಯುವ ಜಾಗದಲ್ಲಿ ವಿದ್ಯುತ್, ನೀರು, ವೈದ್ಯಕೀಯ ಹಾಗೂ ಶಾಂತಿ ಪಾಲನೆಯ ಸುವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಪ್ರತಿದಿನ ಸಂಜೆ ಮನರಂಜನೆ ಕಾರ್ಯಕ್ರಮಗಳಾದ ಸಿನಿಮಾ, ನಾಟಕ, ವಿವಿಧ ತರಹದ ಆಟ-ನೋಟಗಳು, ಗೀ-ಗೀ ಪದಗಳು ನಡೆಯಲಿವೆ ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.

    ಸ್ವಾತಂತ್ರೃ ಹೋರಾಟದ ಹಿನ್ನೆಲೆ

    ಸುಮಾರು 79 ವರ್ಷಗಳ ಇತಿಹಾಸವಿರುವ ಈ ಜಾತ್ರೆಗೆ ಸ್ವಾತಂತ್ರೃ ಹೋರಾಟದ ಹಿನ್ನೆಲೆ ಇದೆ. ನೆರೆಯ ಮಹಾರಾಷ್ಟ್ರ ರಾಜ್ಯದ ಸೊಲಾಪುರದಲ್ಲಿ 1942ರಲ್ಲಿ ನಡೆಯುತ್ತಿದ್ದ ಚಲೇಜಾವ ಚಳುವಳಿಯನ್ನು ಹಿಮ್ಮೆಟ್ಟಿಸಲು ಬ್ರಿಟಿಷರು ನಡೆಸಿದ ದಬ್ಬಾಳಿಕೆಗೆ ತುತ್ತಾದ ಜನ ತಮ್ಮ ದನಕರುಗಳೊಂದಿಗೆ ಅಂದು ಓಡಿ ಬಂದು ಚಡಚಣದಲ್ಲಿ ಆಶ್ರಯ ಪಡೆದರು. ಅಂದಿನಿಂದ ಇಲ್ಲಿ ಸೇರಿದ ದನಗಳನ್ನು ನೋಡಿ ಹಿರಿಯರು ದನಗಳ ಜಾತ್ರೆ ನಡೆಸಲು ತೀರ್ಮಾನಿಸಿ, 1943ರಿಂದ ಈ ಜಾತ್ರೆ ಆರಂಭಿಸಿದರು ಎನ್ನಲಾಗಿದೆ. ಜಾತ್ರೆಯಲ್ಲಿ ಸಾವಿರಾರು ಜನರು ಸೇರುತ್ತಿದ್ದು, ಸಾವಿರಾರು ದನಕರುಗಳ ಖರೀದಿಯೂ ನಡೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts