More

    ಶ್ರೀ ಕರಿಯಮ್ಮ ದೇವಿ ರಥೋತ್ಸವ ಸಂಭ್ರಮ

    ಕಡೂರು: ಚೌಡ್ಲಾಪುರ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ಮಹಾರಥೋತ್ಸವ ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ವಿಜೃಂಭಣೆಯಿಂದ ನೆರವೇರಿತು.

    ಶನಿವಾರ ರಾತ್ರಿ ದೇವಿಗೆ ವಿಶೇಷ ಪೂಜೆ ಜತೆಗೆ ಬೇವಿನ ಉಡುಗೆ ಹಾಗೂ ಬಾಯಿಬೀಗ ಸೇವೆ ನಡೆಯಿತು. ಹರಕೆ ಹೊತ್ತ ನೂರಾರು ಮಹಿಳೆಯರು ಬೇವಿನ ಉಡುಗೆ ಮತ್ತು ಬಾಯಿಗೆ ಸಾಂಕೇತಿಕ ಬೀಗ ಧರಿಸಿ ಹರಕೆ ತೀರಿಸಿದರು. ನಂತರ ಕೆಂಡೋತ್ಸವ ನಡೆಯಿತು. ಉತ್ಸವ ಮೂರ್ತಿ ಹೊತ್ತ ಭಕ್ತರು ಕೆಂಡ ಹಾಯುವ ವೇಳೆ ಇತರ ಭಕ್ತರೂ ದೇವಿ ಸ್ಮರಣೆಯೊಂದಿಗೆ ಕೆಂಡ ಹಾಯುವ ಮೂಲಕ ಭಕ್ತಿಭಾವ ಮೆರೆದರು.ರಾತ್ರಿಯಿಡೀ ಮೆರವಣಿಗೆ ನಡೆಸಿ ಬೆಳಗಿನ ಜಾವ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಸಾಂಪ್ರದಾಯಿಕ ವಿಧಿವಿಧಾನದೊಂದಿಗೆ ಪ್ರತಿಷ್ಠಾಪಿಸಲಾಯಿತು. ಬಲಿಪೂಜೆ ನಂತರ ಭಕ್ತರು ರಥ ಎಳೆದು ಸಂಭ್ರಮಿಸಿದರು.ರಥೋತ್ಸವ ವೇಳೆ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನದ ಗೌಡರುಗಳಾದ ಕಲ್ಲಾಪುರ ದೊರೆಸ್ವಾಮಿ, ಚೌಡ್ಲಾಪುರ ಶಿವಣ್ಣ, ಎಂ.ಕೋಡಿಹಳ್ಳಿ ನಂಜುಂಡಪ್ಪ ಮತ್ತು ವಿ.ಸಿದ್ದರಹಳ್ಳಿ ಶಿವಪ್ಪ ಮತ್ತು ಗ್ರಾಮಸ್ಥರು ಇದ್ದರು. ಚೌಡ್ಲಾಪುರದ ಶಕ್ತಿದೇವತೆ ಕರಿಯಮ್ಮ ದೇವಿ ಸುತ್ತಮುತ್ತಲಿನ ಗ್ರಾಮಗಳ ಅಧಿದೇವತೆ. ಬೆಳಗಿನ ಜಾವವೇ ರಥೋತ್ಸವ ನಡೆಯುವುದು ವಾಡಿಕೆ. ದೇವಿಯನ್ನು ಅಸಾದಿ ಪದಗಳನ್ನು (ನಶಿಸುತ್ತಿರುವ ಜಾನಪದ ಪ್ರಾಕಾರ) ಹಾಡುತ್ತ ಕರೆತರುವುದು ಸಂಪ್ರದಾಯ. ಜಿಲ್ಲೆಯಲ್ಲಿ ಬಹು ವಿರಳವಾಗಿರುವ ಅಸಾದಿ ಕಲೆ ಈ ಗ್ರಾಮದಲ್ಲಿನ್ನೂ ಜೀವಂತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts