ಶ್ರೀರಾಮ ಸೇನೆಯಿಂದ ಸಹಿ ಅಭಿಯಾನ 18ಕ್ಕೆ

1 Min Read
ಶ್ರೀರಾಮ ಸೇನೆಯಿಂದ ಸಹಿ ಅಭಿಯಾನ 18ಕ್ಕೆ

ಧಾರವಾಡ: ಸಮಾನ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ಶ್ರೀರಾಮ ಸೇನೆಯಿಂದ ಜು. 18ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ನಡೆಸಲಾಗುವುದು. 5 ಲಕ್ಷ  ಸಹಿ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿದ್ದು, ಕರಪತ್ರ ಹಂಚಿಕೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ನಾಗರಿಕ ಕಾನೂನು ಜಾರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸಹಿ ಅಭಿಯಾನದ ಮೂಲಕ ಆಗ್ರಹಿಸಲಾಗುವುದು. ಸಂವಿಧಾನದ 44ನೇ ಕಲಂನಲ್ಲಿ ಸಮಾನತೆಯ ಉಲ್ಲೇಖ ಇದೆ. ಆದರೆ, ಕಾಂಗ್ರೆಸ್‌ನ ಅಡ್ಡಿ ಮತ್ತು ತುಷ್ಟೀಕರಣ ರಾಜಕಾರಣದಿಂದ ಇನ್ನೂ ಜಾರಿಗೆ ಬಂದಿಲ್ಲ. ಜಗತ್ತಿನ ಎಲ್ಲೂ ಎರಡು ಕಾನೂನು ಇಲ್ಲ. ಭಾರತದಲ್ಲಿ ಮಾತ್ರ ಎರಡು ಕಾನೂನು ಏಕೆ? ಎಂದರು.
ರಾಷ್ಟ್ರೀಯ ಸರ್ವೇ ಒಂದರ ಪ್ರಕಾರ ಶೇ. 67ರಷ್ಟು ಮುಸ್ಲಿಂ ಮಹಿಳೆಯರು ಕಾನೂನನ್ನು ಬೆಂಬಲಿಸಿದ್ದಾರೆ. ಆದರೆ, ಮುಸ್ಲಿಂ ಧರ್ಮ ಗುರುಗಳು ವಿರೋಧಿಸುತ್ತಿದ್ದಾರೆ. ಮತೀಯವಾದಿ ಮನಸ್ಥಿತಿ ಇದಕ್ಕೆ ಕಾರಣ. ಅವರಿಗೆ ಷರಿಯಾ ಕಾನೂನು ಮುಖ್ಯವೇ ಹೊರತು ನ್ಯಾಯಾಲಯ, ಕಾನೂನು ಮುಖ್ಯವಲ್ಲ ಎಂದರು.
ಕಾಂಗ್ರೆಸ್ ಹಿಂದುತ್ವ ವಿರೋಧಿ ಪಕ್ಷ. ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಗೋಶಾಲೆ ಸ್ಥಾಪನೆಗಾಗಿ ಜನಸೇವಾ ಟ್ರಸ್ಟ್‌ಗೆ ನೀಡಿದ್ದ 35 ಎಕರೆ ಜಮೀನು ಪರಭಾರೆಯನ್ನು ತಡೆ ಹಿಡಿಯಲಾಗಿದೆ. ಇದು ಅಕ್ಷಮ್ಯ. ಚುನಾಯಿತ ಪ್ರತಿನಿಧಿಗಳು ವಿಧಾನಸೌಧದಲ್ಲಿ ನಮಾಜ್ ಮಾಡಲು ಕೊಠಡಿ ಕೇಳಿರುವುದು ಮೂರ್ಖತನದ ಪರವಾವಧಿ. ವಿಧಾನಸೌಧ ಮಕ್ಕಾ ಮದೀನಾ ಅಲ್ಲ. ಸರ್ಕಾರ ಅನುಮತಿ ಕೊಟ್ಟರೆ ನಾವೂ ವಿಧಾನಸೌಧದಲ್ಲಿ ಭಜನೆ, ಹನುಮಾನ ಚಾಲೀಸಾ ಪಠಣ ಮಾಡುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ಗಂಗಾಧರ ಕುಲಕರ್ಣಿ, ಅಣ್ಣಪ್ಪ ದೀವಟಗಿ, ಪಾಂಡುರಂಗ ಯಮೋಜಿ ಸುದ್ದಿಗೋಷ್ಠಿಯಲ್ಲಿದ್ದರು.

See also  ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತ
Share This Article