More

    ಅಪಘಾತದ ಸ್ಥಳದಲ್ಲೇ ಶ್ರದ್ಧಾಂಜಲಿ

    ಧಾರವಾಡ: ಅಲ್ಲಿ ಸೇರಿದ್ದ ಎಲ್ಲರ ಕಣ್ಣುಗಳು ತೇವವಾಗಿದ್ದವು. ಸಂಬಂಧಿಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವಾಗ ಎಷ್ಟೇ ಪ್ರಯತ್ನ ಪಟ್ಟರೂ ಕಣ್ಣೀರು ಸುರಿಯುವುದನ್ನು ತಡೆದುಕೊಳ್ಳಲು ಆಗಲಿಲ್ಲ. ಇದು ಹು-ಧಾ ಬೈಪಾಸ್​ನ ಇಟ್ಟಿಗಟ್ಟಿ ಕ್ರಾಸ್ ಬಳಿ ಶನಿವಾರ ಕಂಡುಬಂದ ಭಾವುಕ ದೃಶ್ಯ.

    ಜ. 15ರಂದು ಬೈಪಾಸ್ ರಸ್ತೆ ಇಟ್ಟಿಗಟ್ಟಿ ಕ್ರಾಸ್ ಬಳಿ ಟೆಂಪೊ-ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಾವಣಗೆರೆಯ ಮಹಿಳೆಯರು ಸೇರಿ ಒಟ್ಟು 12 ಜನ ಮೃತಪಟ್ಟಿದ್ದರು. ಅಂದಿನಿಂದಲೂ ರಸ್ತೆ ವಿಸ್ತರಣೆಗೆ ಆಗ್ರಹ ಕೇಳಿ ಬಂದಿತ್ತು.

    ಮೃತರ ಹಾಗೂ ಗಾಯಾಳುಗಳ ಸಂಬಂಧಿಕರು ಸೇರಿ ಚಿತ್ರದುರ್ಗ, ರಾಣೆಬೆನ್ನೂರ, ಹಾವೇರಿ, ಹುಬ್ಬಳ್ಳಿ, ಧಾರವಾಡದ ನೂರಾರು ಜನರು ಅಪಘಾತ ಸ್ಥಳದಲ್ಲೇ ಶನಿವಾರ ಪೂಜೆ ನೆರವೇರಿಸಿ, ನಮ್ಮ ಸಂಬಂಧಿಕರ ಸಾವೇ ಕೊನೆಯಾಗಲಿ. ಮುಂದೆ ಇಂತಹ ಅನಾಹುತ ಸಂಭವಿಸದಂತೆ ರಸ್ತೆ ವಿಸ್ತರಣೆ ಮಾಡಲಿ ಎಂದು ಪ್ರಾರ್ಥಿಸಿದರು. ಒಂದು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಮೃತಪಟ್ಟವರ ಭಾವಚಿತ್ರಗಳನ್ನು ರಸ್ತೆಯಲ್ಲೇ ಇಟ್ಟು ನಮನ ಸಲ್ಲಿಸಿದರು. ಒಂದು ನಿಮಿಷ ಮೌನ ಆಚರಿಸಿದರು.

    ಅಪರ ಜಿಲ್ಲಾಧಿಕಾರಿಗೆ ಬೇಡಿಕೆ: ಮೃತ ಮಹಿಳೆಯರ ಕುಟುಂಬಸ್ಥರು ಹಾಗೂ ಹೋರಾಟಗಾರರು ಶ್ರದ್ಧಾಂಜಲಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಎದುರು ಬೇಡಿಕೆ ಮಂಡಿಸಿದರು. ಜಿಲ್ಲಾಡಳಿತ ಸಭೆ ನಡೆಸಿದರೆ, ರಸ್ತೆಯಲ್ಲಿ ಎಚ್ಚರಿಕೆ ನಾಮಫಲಕ ಹಾಕಿದರೆ ಸಾಲದು. ಆದಷ್ಟು ಶೀಘ್ರದಲ್ಲಿ ರಸ್ತೆ ವಿಸ್ತರಣೆಗೆ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

    ಸ್ಥಳೀಯ ಹೋರಾಟಗಾರ ಪಿ.ಎಚ್. ನೀರಲಕೇರಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮಾಜಿ ಶಾಸಕ ಗುರುಸಿದ್ದನಗೌಡ, ಚಂದ್ರಶೇಖರ, ಶಿವಶಂಕರ ಹಂಪಣ್ಣವರ, ಶ್ರೀಶೈಲಗೌಡ ಕಮತರ, ಮೃತರ ಕುಟುಂಬದವರು, ಹಿತೈಷಿಗಳು, ಜಯ ಕರ್ನಾಟಕ ಸಂಘದ ಪದಾಧಿಕಾರಿಗಳು, ಇತರರು ಇದ್ದರು.

    ಪರ್ಯಾಯ ಮಾರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಸಂಘಟನೆಗಳು ಹೆದ್ದಾರಿ ತಡೆ ಮಾಡುವುದಾಗಿ ಹೇಳಿದ್ದರಿಂದ ಬಹುತೇಕ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಹೀಗಾಗಿ, ಶ್ರದ್ಧಾಂಜಲಿ ನಿಮಿತ್ತ ರಸ್ತೆ ತಡೆ ಮಾಡಿದ್ದರಿಂದ ಕೆಲ ವಾಹನಗಳು ಮಾತ್ರ ಸಾಲು ಗಟ್ಟಿ ನಿಂತಿದ್ದವು.

    ಬೈಪಾಸ್ ರಸ್ತೆಯಲ್ಲಿ ಜೀವ ಹಾನಿ ಆಗುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸರ್ಕಾರಕ್ಕೆ ಜೀವಕ್ಕಿಂತ ಹಣ ಮುಖ್ಯ ಎನಿಸುತ್ತಿದೆ. ಕೂಡಲೆ, ರಸ್ತೆ ವಿಸ್ತರಣೆ ಮಾಡಿ ಅಮಾಯಕರ ಜೀವ ಹಾನಿ ತಡೆಯಬೇಕು. ರಸ್ತೆ ವಿಸ್ತರಣೆ ಆಗದ ಹೊರತು ನಮ್ಮವರ ಆತ್ಮಕ್ಕೆ ಶಾಂತಿ ಸಿಗದು.

    | ಡಾ. ರವಿಕುಮಾರ

    ಅಪಘಾತದಲ್ಲಿ ಮೃತಪಟ್ಟ ಪ್ರೀತಿ ಅವರ ಪತಿ

    ಬೈಪಾಸ್ ರಸ್ತೆ ನೋಡಿದಾಗ ವ್ಯಥೆಯಾಗುತ್ತದೆ. ಇಷ್ಟೊಂದು ಬಲಿ ತೆಗೆದುಕೊಂಡರೂ ರಸ್ತೆ ವಿಸ್ತರಣೆಗೆ ಉತ್ತರ ಕರ್ನಾಟಕದ ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ? ಈಗಲಾದರೂ ಎಚ್ಚೆತ್ತುಕೊಳ್ಳಲಿ. ಅಧಿಕಾರಕ್ಕಾಗಿ ರಾಜಕೀಯ ಮಾಡದೆ ಜನರ ಹಿತಕ್ಕಾಗಿ ಮಾಡಬೇಕು.

    | ಅನಸೂಯಮ್ಮ

    ಮಾಜಿ ಸಿಎಂ ಜೆ.ಎಚ್. ಪಟೇಲ ಅವರ ಸಹೋದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts