

ನವದೆಹಲಿ: ಮುಜಾಫರ್‌ನಗರದ ಶಾಲಾ ಶಿಕ್ಷಕಿಯೊಬ್ಬರು ಅಲ್ಪಸಂಖ್ಯಾತ ಸಮುದಾಯದ ಹುಡುಗನಿಗೆ ಕಪಾಳಮೋಕ್ಷ ಮಾಡುವಂತೆ ಇನ್ನೋರ್ವ ವಿದ್ಯಾರ್ಥಿಗೆ ಹೇಳಿರುವುದು ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿದೆ. ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್.ಎಸ್. ಓಕಾ ಹಾಗೂ ಪಂಕಜ್ ಮಿತ್ತಲ್ ಅವರಿದ್ದ ದ್ವಿಸದಸ್ಯ ಪೀಠವು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮುಜಾಫರ್ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಶಿಕ್ಷಕಿ ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿದ್ದಾರೆ. ಈ ವಿಚಾರವು ನಮಗೆ ಅಸಮಾಧನಾವನ್ನು ಉಂಟು ಮಾಡಿದ್ದು, ಒಬ್ಬ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಗುಣಮಟ್ಟದ ಶಿಕ್ಷಣ ಈ ರೀತಿ ಇರುತ್ತದೆಯೇ. ಈ ಘಟನೆಯ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗಿದ್ದು, ಗಂಭೀರ ಸ್ವರೂಪದ ಪ್ರಕರಣ ಇದಾಗಿದೆ.
FIRನಲ್ಲಿ ಮಗುವಿನ ತಂದೆ ಮಾಡಿರುವ ಆರೋಪಗಳನ್ನು ಉಲ್ಲೇಖಿಸಲಾಗಿಲ್ಲ. ಧರ್ಮದ ಕಾರಣಕ್ಕೆ ನನ್ನ ಮಗನನ್ನು ಥಳಿಸಲಾಗಿದೆ ಎಂದು ಮಗುವಿನ ತಂದೆ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಆದರೆ, ಈ ವಿಚಾರವನ್ನು FIRನಲ್ಲಿ ಉಲ್ಲೇಖಿಸಲಾಗಿಲ್ಲ. ಈ ಪ್ರಕರಣವು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದ್ದು, ಉತ್ತರಪ್ರದೇಶ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ಗೆ ಒಳಪಡಿಸಿ ಅದರ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ.