More

    ಹಾಲಿನ ಕಥೆ, ಗೋವಿನ ವ್ಯಥೆ ಅರಿಯೋಣ…

    ಇತ್ತೀಚಿನ ವರ್ಷಗಳಲ್ಲಿ ದೇಶದ ಮಹಾನಗರಗಳಲ್ಲಿ vegan (ವಿಗನ್) ಪರಿಕಲ್ಪನೆ ಬೆಳೆಯುತ್ತಿದೆ. ಅಂದರೆ, ಹಾಲು, ಮೊಟ್ಟೆ ಸೇರಿದಂತೆ ಪ್ರಾಣಿಜನ್ಯ ಆಹಾರಗಳನ್ನು ತ್ಯಜಿಸುವುದು. ಈ ಪದ್ಧತಿ ಅಮೆರಿಕ ಮತ್ತು ಬ್ರಿಟನ್​ನಿಂದ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಆಮದಾಗಿದೆ. ವಿಶೇಷವಾಗಿ ಹೊಸಪೀಳಿಗೆಯವರು ಈ ವಿಗನ್ ಪದ್ಧತಿ ಅನುಸರಿಸುತ್ತಿದ್ದಾರೆ. ಇದು ಸಸ್ಯಾಹಾರಿಗಳಿಗೆ ಸಂತೋಷ ತರುವ ಸಂಗತಿಯೇ. ಆದರೂ, ಭಾರತದಲ್ಲಿ ಹಾಲು ಕುಡಿಯುವುದಿಲ್ಲ ಅಥವಾ ಬಳಸುವುದಿಲ್ಲ ಎಂಬ ಸಂಗತಿಯೇ ಅಚ್ಚರಿದಾಯಕ. ತಲೆತಲಾಂತರಗಳಿಂದ ಹಾಲು ನಮ್ಮ ಆಹಾರ ಪದ್ಧತಿಯ ಭಾಗವಾಗಿದೆ. ಅಲ್ಲದೆ, ದೇಶದ ಗ್ರಾಮೀಣ ಭಾಗದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದ್ದು, ಅಲ್ಲಿಯ ಜನರು, ರೈತರು, ಅದರಲ್ಲೂ ವಿಶೇಷವಾಗಿ ಕೃಷಿಕ ಮಹಿಳೆಯರು ಡೇರಿ ಉದ್ಯಮವನ್ನೇ ಅವಲಂಬಿಸಿದ್ದಾರೆ.

    ಹಾಲಿನ ಕಥೆ, ಗೋವಿನ ವ್ಯಥೆ ಅರಿಯೋಣ...ನಮ್ಮ ಕುಟುಂಬಕ್ಕೆ ಆತ್ಮೀಯರಾದ ಹಿರಿಯರು ಇತ್ತೀಚೆಗೆ ಮನೆಗೆ ಬಂದಿದ್ದರು. ಕುಶಲೋಪರಿ ಬಳಿಕ ನಾನು ಕಾಫಿ ತರುತ್ತೇನೆ ಎಂದು ಹೊರಟಾಗ ಅವರು ತಡೆದು, ‘ನನಗೆ ಬ್ಲಾ್ಯಕ್ ಕಾಫಿ ಇರಲಿ’ ಎಂದರು. ನಾನು ಆಶ್ಚರ್ಯದಿಂದ, ‘ನಿಮ್ಮ ಮನೆಯಲ್ಲಿ ತಾಜಾ ಹಾಲಿನಿಂದ ಕಾಫಿ ತಯಾರಿಸಿ ನಮಗೆಲ್ಲ ಕೊಡುತ್ತಿದ್ರಿ, ಇದೇನು ಬದಲಾವಣೆ, ಯಾವಾಗ ಬ್ಲಾ್ಯಕ್ ಕಾಫಿ ಸೇವನೆ ಆರಂಭಿಸಿದಿರಿ?’ ಎಂದು ಕೇಳಿದೆ. ಅದಕ್ಕವರು, ‘ಪ್ರಶ್ನೆ ಬ್ಲಾ್ಯಕ್ ಕಾಫಿಯದ್ದಲ್ಲ, ನಾನು ಹಾಲು ಸೇವಿಸುವುದನ್ನೇ ಬಿಟ್ಟಿದ್ದೇನೆ’ ಎಂದರು. ‘ಹಾಗಾದರೆ ಮೊಸರು?’ ಎಂದು ಕುತೂಹಲದಿಂದ ಕೇಳಿದೆ. ‘ಮೊಸರು, ಬೆಣ್ಣೆ, ಪೇಡಾ, ರಸಗುಲ್ಲಾ, ಶ್ರೀಖಂಡ, ಬಾಸುಂದಿ ಯಾವುದೂ ಸ್ವೀಕರಿಸುತ್ತಿಲ್ಲ. ಇದೆಲ್ಲವೂ ಹಾಲಿಂದ ತಾನೇ ಮಾಡುವುದು’ ಎಂದರು. ಇವೆಲ್ಲ ಅವರಿಗೆ ಸಿಹಿಪದಾರ್ಥಗಳು ಇಷ್ಟ ಎಂಬುದು ನನಗೆ ಗೊತ್ತಿತ್ತು. ಇದಕ್ಕೆ ಕಾರಣ ಕೇಳಿದಾಗ, ‘ಹಾಲು ತಯಾರಿಕೆಯ ಅವಾಂತರಗಳು, ಆಕಳ ವಿದೇಶಿ ಮತ್ತು ಮಿಶ್ರ ತಳಿಗಳು, ಅದರಿಂದಾಗುತ್ತಿರುವ ಅನಾರೋಗ್ಯ ಇದೆಲ್ಲದರ ಬಗ್ಗೆ ನಿಮಗೂ ಗೊತ್ತೇ ಇದೆ. ಕರೊನಾ ಹೊತ್ತಲ್ಲಿ ಈ ಕುರಿತಾದ ಮತ್ತಷ್ಟು ಮಾಹಿತಿಗಳು, ವಿಡಿಯೋಗಳನ್ನು ನೋಡಿ ವಿಗನ್ ಆಗಿಬಿಟ್ಟಿದ್ದೇನೆ’ ಎಂದರು. ಇದು ಒಬ್ಬಿಬ್ಬರ ಕಥೆಯಲ್ಲ.

    ಮತ್ತೊಂದು ಆಯಾಮವನ್ನೂ ಗಮನಿಸಬೇಕು. ಡೇರಿ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಆದಾಯದ ಮೂಲವಾದರೆ, ನಗರ ಭಾಗದವರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಲಭ್ಯತೆಯನ್ನು ತುಂಬ ಸುಲಭವಾಗಿಸಿದೆ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹೆಚ್ಚು ಬಲ ಕೊಟ್ಟಿರುವುದೇ ಈ ಡೇರಿ ವ್ಯವಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿರುವ ರಾಷ್ಟ್ರವಾಗಿದ್ದು, ಡೇರಿ ವ್ಯವಸ್ಥೆ ಬೆಳೆಯುತ್ತಲೇ ಸಾಗಿದೆ.

    ಹಾಲು ಎಂದಾಕ್ಷಣ ನಮಗೆ ಗೊತ್ತಿರುವುದು ಆಕಳ ಹಾಲು, ಎಮ್ಮೆ ಹಾಲು, ಗಿಣ್ಣದ ಹಾಲು. ಆಡಿನ ಹಾಲಿನ ಬಳಕೆಯೂ ಅಲ್ಲಲ್ಲಿ ಇದೆ. ಇದನ್ನು ಬಿಟ್ಟರೆ ಕತ್ತೆ ಹಾಲನ್ನು ಔಷಧವಾಗಿ ಕೆಲವೆಡೆ ಬಳಕೆ ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ಹೊಸ ಹಾಲಿನ ಬಗ್ಗೆ ಹೆಚ್ಚು ಚರ್ಚೆ. ಅದುವೇ ಎ2 (ಅ2) ಮಿಲ್ಕ್. ‘ಆಕಳು ಕಪ್ಪಾದರೆ, ಹಾಲು ಕಪ್ಪೇ’ ಎಂಬ ಗಾದೆಮಾತು ಜನಜನಿತ. ಅಂದರೆ, ಎಲ್ಲ ಹಾಲು ಒಂದೇ ಎಂಬ ಭಾವನೆಯಿತ್ತು. ಆದರೆ, ವಾಸ್ತವ ಹಾಗಲ್ಲ ಎಂಬುದು ಅರಿವಾಗುತ್ತಿದೆ. ಹಾಲು ಮಾರಾಟದ ಸರಕಾದ ಬಳಿಕ, ಹಾಲಿನ ಬಳಕೆ ಅಧಿಕವಾದ ನಂತರ ಅದರಲ್ಲಿರುವ ಪ್ರೋಟಿನ್​ಗಳು, ರೋಗನಿರೋಧಕ ಶಕ್ತಿ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಈಗ ಎ2 ಮಿಲ್ಕ್ ಅಂದರೆ ಗೋವಿನ ದೇಸಿ ತಳಿಯ ಶುದ್ಧ ಹಾಲಿನ ಬಗ್ಗೆ ಚರ್ಚೆ ಗರಿಗೆದರಿದೆ.

    ಭಾರತದಲ್ಲಿ ಪ್ರಸಕ್ತ ಪ್ರತಿನಿತ್ಯ ಸರಾಸರಿ 1980 ಲಕ್ಷ ಟನ್​ಗಳಷ್ಟು ಹಾಲು ಉತ್ಪಾದನೆಯಾಗುತ್ತಿದೆ. ದೇಶಾದ್ಯಂತ ಹರಡಿರುವ ಡೇರಿಗಳಿಗೆ ಕೋಟ್ಯಂತರ ಗ್ರಾಹಕರು ಇದ್ದಾರೆ. ಹಾಲು ಒಂದು ಸಂಪೂರ್ಣ ಆಹಾರ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹಾಲು ಪೂರಕ ಆಹಾರ. ಅದರಲ್ಲಿ ಪ್ರೋಟಿನ್​ಗಳಿರುತ್ತವೆ ಎಂಬೆಲ್ಲ ಸಂಗತಿಗಳು ನಮಗೆ ಗೊತ್ತು. ಹಾಗಾಗಿಯೇ, ಹಾಲು ನಮ್ಮ ಜೀವನಶೈಲಿಯ, ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿದ್ದು, ದಿನಚರಿ ಆರಂಭವಾಗುವುದೇ ಹಾಲಿನ ಪೊಟ್ಟಣ ಓಪನ್ ಮಾಡುವ ಮೂಲಕ. ಹಾಗಾದರೆ, ಹಾಲು ಬೇಡ, ಅದರ ಸೇವನೆಯನ್ನೇ ನಿಲ್ಲಿಸೋಣ, ್ಖಜಚ್ಞ ಆಗಿಬಿಡೋಣ ಎಂಬ ಚರ್ಚೆಗಳು ಆರಂಭವಾಗಿರುವುದಾದರೂ ಏಕೆ ಎಂದು ಯೋಚಿಸಬೇಕಲ್ಲವೇ?

    ಗ್ರಾಹಕರಾಗಿ ನಾವು ಹಾಲಿನಲ್ಲಿ ಎಷ್ಟು ಕೊಬ್ಬು ಇದೆ, ಕೆನೆ ಇದೆ, ಪ್ರೋಟಿನ್ ಇದೆ, ಅದು ಎ2ನಾ, ಎ1ನಾ ಎಂಬುದನ್ನೆಲ್ಲ ಪರಾಮಶಿಸುತ್ತೇವೆ. ಆದರೆ, ಜನರು ಇನ್ನೊಂದು ವ್ಯವಸ್ಥೆ ಬಗ್ಗೆಯೂ ಗಮನ ಹರಿಸಬೇಕಿದೆ. ಗೋವುಗಳನ್ನು ಬೆಳೆಸುವ ಪರಿ, ಅಲ್ಲಿನ ಅಹಿತಕರ ವಾತಾವರಣ, ಹೆಚ್ಚು ಹಾಲು ಉತ್ಪಾದನೆಗೆ ಬಳಸುತ್ತಿರುವ ತಳಿಗಳು, ವ್ಯಾಪಾರೀಕರಣದ ಮಧ್ಯೆ ಪ್ರಾಣಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯದ ಬಗ್ಗೆಯೂ ನಾವು ತಿಳಿದುಕೊಳ್ಳಬೇಕು.

    ಯಾವಾಗ ನಾವು ಪ್ರತಿ ವಸ್ತುವನ್ನೂ ಹಣದಿಂದ ಅಳೆಯಲು ಶುರುಮಾಡಿದೆವೋ ಆಗಿನಿಂದಲೇ ವ್ಯಾಪಾರೀಕರಣದ ಭಾವ ಹೆಚ್ಚಾಯಿತು. ಇಡೀ ವ್ಯವಸ್ಥೆಯೇ ಅದರ ಮೇಲೆ ಅವಲಂಬಿತವಾಗಿರುವ ಸ್ಥಿತಿಯಲ್ಲಿ ಇದನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ. ಆದರೆ, ವ್ಯಾಪಾರೀಕರಣ ಅತಿ ಸ್ವಾರ್ಥದೆಡೆಗೆ, ಅತಿ ಲಾಭಕೋರತನದೆಡೆಗೆ ತಿರುಗಿದಾಗ ಸಮಾಜದಲ್ಲಿ ಹಲವು ಅಪಸವ್ಯಗಳು ಕಂಡುಬರುತ್ತವೆ, ಸಂವೇದನೆ ಕಡಿಮೆಯಾಗುತ್ತ ಹೋಗುತ್ತದೆ. ಹಾಲನ್ನು ದುಡ್ಡು ಕೊಟ್ಟು ಖರೀದಿಸುವ ಪದ್ಧತಿ ಆರಂಭವಾಗಿ ವರ್ಷಗಳೇ ಕಳೆದಿವೆ. ಇದರಿಂದ ಗೋವು ಹೆಚ್ಚು ಹಾಲು ಕೊಟ್ಟರೆ, ಹೆಚ್ಚು ಹಣ ಬರುತ್ತದೆ ಎಂಬ ಮನೋಭಾವ ಗೋವು ಸಾಕಾಣಿಕೆದಾರರಲ್ಲಿ ಬೆಳೆಯಿತು. ಇದಕ್ಕಾಗಿ ವಿದೇಶಿ ತಳಿಗಳ (ಎಚ್​ಎಫ್ ತಳಿ ಒಂದಾದರೆ, ಜರ್ಸಿ ಮತ್ತೊಂದು ಪ್ರಮುಖ ತಳಿ) ಅವಲಂಬನೆ ಹೆಚ್ಚಿತು. ಭಾರತದಲ್ಲಿ ದೇಸಿ ಗೋವಿನ 350-400 ತಳಿಗಳು ಇದ್ದವು. ಈ ದೇಸಿ ತಳಿಗಳು ಸರಾಸರಿಯಾಗಿ ದಿನಕ್ಕೆ ಮೂರರಿಂದ ಮೂರೂವರೆ ಲೀಟರ್ ಹಾಲು ಕೊಡುತ್ತವೆ. ಅದೇ ವಿದೇಶಿ ತಳಿಗಳು, ಮಿಶ್ರತಳಿಗಳು ಹದಿನೈದು-ಇಪ್ಪತ್ತು ಲೀಟರ್ ಕೊಡುತ್ತವೆ. ಲೀಟರ್ ಹಾಲಿಗೆ ಅದೇ ಮೌಲ್ಯ ಸಿಕ್ಕಾಗ ಗೋವು ಸಾಕಾಣಿಕೆದಾರರು, ಹಾಲು ಉತ್ಪಾದಕರು ಮಿಶ್ರತಳಿಗಳತ್ತ ವಾಲಿದರು/ವಾಲುತ್ತಿದ್ದಾರೆ. ಮಿಶ್ರತಳಿಗಳಿಗೆ ಅವುಗಳದ್ದೇ ಆದ ಸಮಸ್ಯೆಗಳಿವೆ. ಪ್ರಮುಖವಾಗಿ ಇವು ಬಹುಬೇಗ ಬೇರೆ-ಬೇರೆ ರೋಗಗಳಿಗೆ ತುತ್ತಾಗುತ್ತವೆ. ಪಶುವೈದ್ಯರು ಬಂದು ಪದೇಪದೆ ಆಂಟಿಬಯಾಟಿಕ್ ಕೊಡಬೇಕಾಗುತ್ತದೆ. ಇದರಿಂದ ಹಾಲಿನಲ್ಲಿ ಆಂಟಿಬಯಾಟಿಕ್ ಅಂಶಗಳು ಸೇರುತ್ತಿವೆ. ಈ ಹಸುವಿನ ಗಂಡುಕರುಗಳನ್ನು ಇಲ್ಲಿನ ಕೃಷಿಗೆ ಬಳಸಲಾಗುತ್ತಿಲ್ಲ, ಅವು ಇಲ್ಲಿನ ಭೌಗೋಳಿಕ ಪರಿಸ್ಥಿತಿಗೆ, ಕೃಷಿಪದ್ಧತಿಗೆ ಹೊಂದಿಕೊಳ್ಳುವುದಿಲ್ಲ. ಹಾಗಾಗಿ, ಮಿಶ್ರತಳಿಯ ಗಂಡು ಕರುಗಳು ಕಸಾಯಿಖಾನೆ ಪಾಲಾಗುತ್ತಿವೆ.

    ಮತ್ತೊಂದೆಡೆ, ಗೋವು ಸಾಕಾಣಿಕೆ ವೆಚ್ಚವೂ ಅಧಿಕವಾಗುತ್ತಿದೆ. ಮೇವು ದುಬಾರಿಯಾಗಿದೆ. ಈ ವಿದೇಶಿ ತಳಿಯ ಆಕಳುಗಳಿಗೆ (ಎಫ್​ಎಚ್, ಜರ್ಸಿ) ಸಾಂಪ್ರದಾಯಿಕ ಆಹಾರ ಒಗ್ಗುವುದಿಲ್ಲ. ಅವುಗಳಿಗೆ ಡೇರಿಯಿಂದ ತರಿಸಿಕೊಂಡ ವಿಶೇಷವಾದ ಆಹಾರವನ್ನೇ ನೀಡಲಾಗುತ್ತದೆ. ಮೊದಲೆಲ್ಲ ಆಕಳುಗಳು ಸಂಪೂರ್ಣ ಸಸ್ಯಾಹಾರಿಯಾಗಿದ್ದವು. ಹಾಗಾಗಿ, ಹಾಲನ್ನು ಸಸ್ಯಾಹಾರದ ಒಂದು ಭಾಗ ಎಂದು ಭಾವಿಸಲಾಗಿತ್ತು. ಆದರೆ, ಮಿಶ್ರತಳಿ ಆಕಳುಗಳಿಗೆ ಕೊಡುವ ಆಹಾರದಲ್ಲಿ ಮೀನು ಸೇರಿದಂತೆ ಹಲವು ಪ್ರಾಣಿಜನ್ಯ ಅಂಶಗಳಿರುತ್ತವೆ. ಕೆಲವು ದೇಶಗಳಲ್ಲಂತೂ ಆಕಳುಗಳಿಗೆ ಪೋಷಕಾಂಶ ನೀಡಲು ಮಾಂಸಾಹಾರದ ಪದಾರ್ಥಗಳನ್ನು ಬಳಸಲಾಗುತ್ತಿದೆ.

    ಉತ್ಪಾದನೆ ಹೆಚ್ಚು ಮಾಡುವ ಸರಕಾಗಿ ಹಾಲು ಬದಲಾದಾಗ, ಹಾಲಿನಲ್ಲಿ ಯಾವ ವಿಶೇಷ ಗುಣಗಳು ಇರಬೇಕೋ, ಅವು ಇರುವುದಿಲ್ಲ ಎಂಬುದು ವಾಸ್ತವ. ಮಿಶ್ರತಳಿ ಆಕಳುಗಳಿಗೆ ಕೊಡುವ ಆಹಾರ ಮತ್ತು ಆಂಟಿಬಯಾಟಿಕ್​ನ ಪ್ರಮಾಣಗಳು ಮನುಷ್ಯನ ದೇಹಕ್ಕೆ, ಅದರಲ್ಲೂ ಮಕ್ಕಳು ಮತ್ತು ವಯಸ್ಸಾದವರ ದೇಹಕ್ಕೆ ತೊಂದರೆ ಉಂಟು ಮಾಡುತ್ತಿವೆ. ಈ ನಿಟ್ಟಿನಲ್ಲಿ ಎ2 ಅಂದರೆ ದೇಸಿ ತಳಿಯ ಗೋವಿನ ಹಾಲೇ ಉತ್ತಮ ಎಂದು ಹೇಳಲಾಗುತ್ತಿದೆ. ಆಹಾರ ವಿಜ್ಞಾನಿಗಳು ಈ ಮಾತನ್ನು ಖಡಾಖಂಡಿತವಾಗಿ ಹೇಳುತ್ತಿಲ್ಲ. ಆದರೂ, ಪುರಾವೆಗಳ ಮೂಲಕ ನೋಡಿದರೆ ಎ2 ಹಾಲು ಒಳ್ಳೆಯದು ಎಂಬುದು ಸ್ಪಷ್ಟವಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳಿಂದ ಒಟ್ಟಾರೆ ಸಮಾಜ, ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆಯೂ ಅವಲೋಕಿಸಬೇಕು. ಗೋಹತ್ಯೆ ಆಗಬಾರದು ಮತ್ತು ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದಲೂ ಪರಾಮಶಿಸಿದಾಗ ದೇಸಿ ಆಕಳ ಹಾಲು ಉತ್ತಮ ಎನ್ನಬಹುದು.

    ಹಾಲು ಉತ್ಪಾದನೆ ಹೆಚ್ಚಿಸಲು ಗೋವುಗಳನ್ನು ಶೋಷಿಸಲಾಗುತ್ತಿದೆ, ದಬ್ಬಾಳಿಕೆ ಮಾಡಲಾಗುತ್ತಿದೆ, ಹಾಮೋನುಗಳ ಚುಚ್ಚುಮದ್ದು ಕೊಡಲಾಗುತ್ತಿದೆ ಎಂಬ ಕಾರಣಗಳನ್ನು ಮುಂದೆ ಮಾಡಿ ಹಾಲುಸೇವನೆಯನ್ನೇ ತ್ಯಜಿಸೋದು ಪರಿಹಾರವಾಗಲಾರದು. ದೇಸಿ ಗೋವಿನ ಹಾಲನ್ನು ಸೇವಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ, ದೇಸಿ ತಳಿಗಳು ಉಳಿದು, ಬೆಳೆಯುತ್ತವೆ. ಎತ್ತುಗಳು ನಮ್ಮ ಕೃಷಿಪದ್ಧತಿಗೆ ಆಧಾರವಾಗುತ್ತವೆ. ಅವುಗಳ ಸಗಣಿ ಗೊಬ್ಬರವಾಗಿ, ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗುತ್ತದೆ, ಜಮೀನಿನ ಫಲವತ್ತತೆ ಹೆಚ್ಚುತ್ತದೆ. ಹೀಗೆ ಇವು ಒಂದಕ್ಕೊಂದು ಪೂರಕ ಕೊಂಡಿಗಳೇ ಆಗಿವೆ. ಹಾಗಾಗಿ, ಹಾಲು ನಮ್ಮ ಮನೆಬಾಗಿಲಿನವರೆಗೂ ಹೇಗೆ ಬರುತ್ತದೆ, ಅದರ ತಯಾರಿಕೆ, ಪ್ಯಾಕಿಂಗ್ ವಿಧಾನ ಹೀಗೆ ಸಮಗ್ರ ಮಾಹಿತಿಯನ್ನು ಜನಸಾಮಾನ್ಯರೂ ತಿಳಿದುಕೊಳ್ಳಬೇಕು. ಆಹಾರ ಸೇವನೆ ಆರೋಗ್ಯಕ್ಕೆ ಪೂರಕ ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಈಗ ಪರಿಸ್ಥಿತಿ ಬದಲಾಗಿರಬಹುದು. ಆದರೆ, ಪರಿಹಾರವೂ ನಮ್ಮ ಕೈಯಲ್ಲೇ ಇದೆ. ವಿದೇಶಿ ತಳಿ, ಮಿಶ್ರತಳಿಗಳ ಹಾಲನ್ನು ದೂರವಿಟ್ಟು, ದೇಸಿ ತಳಿಯ ಹಾಲನ್ನು ಬಳಸಿದರೆ ಯಾವುದೇ ಆತಂಕದ ಅಗತ್ಯವಿಲ್ಲ. ಬದಲಾಗಿ ನಮ್ಮ ಸ್ವಾಸ್ಥ್ಯಕ್ಕೆ ಅದರಿಂದ ಹಲವು ಪ್ರಯೋಜನಗಳೇ ಇವೆ. ವಾಸ್ತವವನ್ನು ಅರಿತು, ಸರಿಯಾದ ಮಾರ್ಗ ಅನುಸರಿಸೋಣ.

    (ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts