More

    ಶಾರ್ಟ್ಸ್-ರೀಲ್ಸ್ ಮಾಯಾಲೋಕ!; ಇದು ತಳವಿರದ ಪಾತಾಳ, ಆಳಕ್ಕಿಳಿದಷ್ಟೂ ಕರಾಳ..

    ‘ನೋಡೋ.. ಇಡೀ ದಿನ ಮೊಬೈಲ್​ನಲ್ಲೇ ಬಿದ್ದಿರ್ತಿ. ಮನೆ ಕೆಲಸ ಮಾಡಲು ಚೂರೂ ಹೆಲ್ಪ್ ಮಾಡಲ್ಲ. ರೂಮಿಂದ ಹೊರ ಬಂದು ಉದ್ಧಾರ ಆಗೋ’ ಎಂದು ಪಾಲಕರು ನಿಮಗೆ ಬೈದಿದ್ದು ಇದೆಯಾ? ಹೌದು ಎಂದಾದರೆ ನೀವು ಈ ಲೇಖನ ಓದಲೇಬೇಕು. ಸಾಮಾಜಿಕ ಮಾಧ್ಯಮ ಆಧುನಿಕ ಲೋಕದ ಜೀವನಾಡಿ ಆಗಿ ಮಾರ್ಪಟ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದೇ. ದೂರದಲ್ಲಿರುವವರನ್ನು ಹತ್ತಿರ ಮಾಡುವ ಈ ಲೋಕದ ಕರಾಳ ಮುಖದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಅದರ ಕರಾಳತೆ ಯಾವ ಮಟ್ಟಿಗಿದೆ ಎಂದು ತೋರಿಸುವ ಉದ್ದೇಶ ಈ ಲೇಖನದ್ದು.

    | ಅತುಲ ದಾಮಲೆ ಬೆಂಗಳೂರು

    ‘ಸಾಮಾಜಿಕ ಜಾಲತಾಣ ಯಾಕಿಷ್ಟು ಅಡಿಕ್ಟಿವ್?’ ಎಂಬ ಈ ಪ್ರಶ್ನೆ ಹಲವರನ್ನು ಕಾಡಿರಬಹುದು. ಕೆಲವರಿಗೆ ಇದಕ್ಕೆ ಉತ್ತರ ಸಿಕ್ಕಿದ್ದರೆ, ಇನ್ನು ಕೆಲವರು ಉತ್ತರದ ಹುಡುಕಾಟದಲ್ಲಿ ಇರಬಹುದು. ಸಾಮಾಜಿಕ ಜಾಲತಾಣಗಳನ್ನು ಪ್ರಮುಖವಾಗಿ ಜನರು ಇದನ್ನು ಹಚ್ಚಿಕೊಳ್ಳಬೇಕು ಎಂಬ ರೀತಿಯಲ್ಲೇ ರೂಪಿಸಲಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ಆರ್ಥಿಕತೆ ನಡೆಯುವುದೇ ಎಷ್ಟು ಜನರು ಅದನ್ನು ಬಳಸುತ್ತಾರೆ ಎನ್ನುವ ವಿಚಾರದ ಮೇಲೆ. ಹೀಗಾಗಿ ಬೃಹತ್ ಕಂಪನಿಗಳು ಜನರು ತಮ್ಮ ತಾಣವನ್ನು ಹೆಚ್ಚುಹೆಚ್ಚು ಬಳಸುವಂತೆ ಹಾಗೂ ತಮ್ಮ ತಾಣದಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವಂತೆಯೇ ಅದನ್ನು ವಿನ್ಯಾಸ ಮಾಡಿರುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಶಾರ್ಟ್ಸ್ ಹಾಗೂ ರೀಲ್ಸ್.

    ಹೊರಬಂದರೂ ಮತ್ತದೇ ಗೀಳು

    ಮೊಬೈಲ್​ಫೋನ್ ಗೀಳಿನವರು ಸಾಧಾರಣವಾಗಿ ತಮ್ಮ ಮಾಮೂಲಿ ಸ್ಥಳದಲ್ಲಿ ಆರಾಮವಾದ ಭಂಗಿಯಲ್ಲೋ, ಮಲಗಿಕೊಂಡೋ ನೋಡುತ್ತಿರುತ್ತಾರೆ. ಅವರಿಗೆ ಈ ಲೋಕದ ಪರಿವೆಯೇ ಇರುವುದಿಲ್ಲ. ಅವರು ಸಾಮಾಜಿಕವಾಗಿ ಅಷ್ಟೊಂದು ಜನರೊಂದಿಗೆ ಬೆರೆತಿರುವುದಿಲ್ಲ. ಹೀಗಾಗಿ ಅಂಥವರು ಹೊರ ಬಂದಾಗ ಎಲ್ಲವೂ ಹೊಸದು ಅಥವಾ ಈ ಬದಿಯ ಲೋಕದ ಬಗ್ಗೆ ಮರೆತಿರುತ್ತಾರೆ. ಹೀಗಾಗಿ ಹೊರಬಂದಿದ್ದರೂ ಅವರು ತಮಗೆ ಅಪರಿಚಿತ ಅನಿಸುವ ಆ ಲೋಕದಿಂದ ತಪ್ಪಿಸಿಕೊಳ್ಳಲು ಮತ್ತೊಮ್ಮೆ ಮೊಬೈಲ್​ಫೋನ್ ಲೋಕದೊಳಗೆ ಜಾರಿಕೊಳ್ಳುತ್ತಾರೆ.

    ಧ್ವನಿ-ದೃಶ್ಯದ ಜತೆ ಸ್ಪರ್ಶದ ಮಿಳಿತ

    ಈ ಸಣ್ಣ ವಿಡಿಯೋಗಳ ಮಾಯೆ ಹರಡುವುದು ಹೇಗೆ ಎನ್ನುವುದನ್ನು ತಿಳಿದರೆ ಅದಕ್ಕೆ ಯುವಜನರು ಯಾಕೆ ಅಡಿಕ್ಟ್ ಆಗುತ್ತಾರೆ ಎನ್ನುವುದನ್ನೂ ತಿಳಿದಂತೆಯೇ. ಮನಃಶಾಸ್ತ್ರದ ಸಹ ಪ್ರಾಧ್ಯಾಪಕ ಹಾಗೂ ಆಪ್ತ ಸಮಾಲೋಚಕ ಡಾ.ಕೆ.ವಿ.ಸುಧೀರ್ ಹೇಳುವಂತೆ, ಅಡಿಕ್ಷನ್ ಆಗುವಾಗ ಎಲ್ಲ ಪಂಚೇಂದ್ರಿಯಗಳ ಸಹಭಾಗಿತ್ವ ಇರುತ್ತದೆ. ಅಡಿಕ್ಷನ್​ಗೆ ಒಳಗಾಗುವಾಗ ಅಲ್ಲಿ ಎರಡು ಭಾಗಗಳಿರುತ್ತವೆ. ಒಂದು ಏನು ನೋಡುತ್ತೇವೆ, ಇನ್ನೊಂದು ಅದನ್ನು ನೋಡಲು ಏನು ಮಾಡುತ್ತೇವೆ. ಅಂದರೆ ಈ ಸಣ್ಣ ವಿಡಿಯೋಗಳನ್ನು ನೋಡುವಾಗ ಧ್ವನಿ ಹಾಗೂ ದೃಷ್ಟಿ ಎಷ್ಟು ಕೆಲಸ ಮಾಡುತ್ತದೋ ಸ್ಪರ್ಶ ಕೂಡ ಅಷ್ಟೇ ಕೆಲಸ ಮಾಡುತ್ತದೆ.

    ಮತ್ತೆ ಮತ್ತೆ ಸ್ವೈಪ್ ಮಾಡಿಸುವ ತಂತ್ರ

    ಈ ಸಣ್ಣ ವಿಡಿಯೋಗಳಲ್ಲಿ ರಂಗುರಂಗಾದ ಅಥವಾ ಜನರ ಗ್ರಹಿಕೆ ಹಿಡಿದಿಟ್ಟುಕೊಳ್ಳುವಂತಹ ವಿಶುವಲ್ಸ್ ಹಾಕಲಾಗುತ್ತದೆ. ಅದರೊಂದಿಗೆ ಹುಕ್ ಮಾಡುವಂತಹ ಹಾಡು-ಮ್ಯೂಸಿಕ್ ಇರುತ್ತದೆ. ಇವೆರಡೂ ಮೊದಲ ಭಾಗ. ಎರಡನೆಯದ್ದು ಫೋನ್ ಗಾತ್ರ. ಟಿವಿ ಪರದೆ ನೋಡಲು ಹೆಚ್ಚಿನ ಶ್ರಮ ಬೇಕಾಗಿಲ್ಲ. ಫೋನ್​ನಲ್ಲಿ ಏನಿದೆ ಎಂದು ನೋಡಲು ಜನರು ಒಂದಷ್ಟು ಶ್ರಮ ಹಾಕಬೇಕಾಗುತ್ತದೆ. ಈ ಶ್ರಮ ಹಾಕಿದಾಗ ಆಕರ್ಷಕ ವಿಡಿಯೋ ಕಾಣಿಸುತ್ತದೆ. ಆಗ ಮೆದುಳಿನಲ್ಲಿ ಡೋಪಮೈನ್ ಎಂಬ ಕೆಮಿಕಲ್ ಉತ್ಪತ್ತಿ ಆಗುತ್ತದೆ. ಇದರ ಕೆಲಸವೇ ಆಹಾ ಎನಿಸುವಂಥ ಹಿತಕಾರಿ ಅನುಭವ ನೀಡುವುದು. ಈ ಅನುಭವವನ್ನು ಮತ್ತೊಮ್ಮೆ ಪಡೆಯಲು ಒಂದು ಬಾರಿ ಸ್ವೆಪ್ ಮಾಡಿದರೆ ಸಾಕು! ಅದೇ ಅನುಭವ ಮತ್ತೊಮ್ಮೆ ಬೇಕಾ? ಇನ್ನೊಮ್ಮೆ ಸ್ವೆಪ್ ಮಾಡಿ.. ಹೀಗೆ ಅಡಿಕ್ಷನ್​ಗೆ ಒಳಗಾಗಿ ಅದರ ಕರಾಳಲೋಕಕ್ಕೆ ಪ್ರವೇಶಿಸಿದರೆ ಅದರಿಂದ ಹೊರ ಬರುವುದು ಬಹಳ ಕಷ್ಟ.

    ಸಣ್ಣದೇ.. ಆದ್ರೂ ಗೀಳು ದೊಡ್ಡದು..

    ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಸಣ್ಣ ವಿಡಿಯೋಗಳನ್ನು ಸ್ಕ್ರೋಲ್ ಮಾಡಿ ನೋಡುವ ಹೊಸ ಮಾದರಿಯನ್ನು ಪರಿಚಯಿಸಿದ್ದೇ ಟಿಕ್​ಟಾಕ್. ಭಾರತದಲ್ಲಿ ಟಿಕ್​ಟಾಕ್ ಬ್ಯಾನ್ ಆದಾಗ ಇನ್​ಸ್ಟಾಗ್ರಾಂ ಹಾಗೂ ಯೂಟ್ಯೂಬ್​ನಂಥ ಬೃಹತ್ ಸಂಸ್ಥೆಗಳು ಟಿಕ್​ಟಾಕ್ ಮಾದರಿಯನ್ನೇ ತಮ್ಮಲ್ಲೂ ಬಳಸಿದರು. ಟಿಕ್​ಟಾಕ್​ಗೆ ಪರ್ಯಾಯವಾಗಿ ಸಿಕ್ಕ ಯೂಟ್ಯೂಬ್-ಇನ್​ಸ್ಟಾಗ್ರಾಂ ಶಾರ್ಟ್ಸ್-ರೀಲ್ಸ್​ಗೂ ಜನರು ವ್ಯಸನಿಗಳಾದರು. ಈ ಸಣ್ಣ ವಿಡಿಯೋ ಕ್ಲಿಪ್​ಗಳೇ ಬಳಕೆದಾರರಿಗೆ ದೊಡ್ಡ ಗೀಳಾಯಿತು. ಅದಾಗ್ಯೂ ಈ ಸಣ್ಣ ವಿಡಿಯೋಗಳನ್ನು ಮಾಡುವುದೇ ನಿಲ್ಲಿಸಿದರೆ ಹೇಗೆ ಎಂದು ಅನೇಕರು ಅಂದುಕೊಳ್ಳಬಹುದು. ಆದರೆ ವಿಡಿಯೋ ನಿರ್ವತೃರಿಗೆ ಜನರು ಇದನ್ನೇ ನೋಡುವುದು ಎಂದು ತಿಳಿದಿದೆ. ಇದರಿಂದ ಹಣವೂ ಬರುತ್ತಿದೆ. ವೀಕ್ಷಕರಿಗೆ ಇದರಿಂದ ಕ್ಷಣಿಕ ಖುಷಿ ಸಿಗುತ್ತಿದೆ. ಹೀಗಾಗಿ ಜನರೂ ನೋಡುವುದು ನಿಲ್ಲಿಸುವುದಿಲ್ಲ, ವಿಡಿಯೋ ಉತ್ಪಾದನೆಯೂ ನಿಲ್ಲುವುದಿಲ್ಲ. ಹೀಗೆ ಈ ಶಾರ್ಟ್ಸ್-ರೀಲ್ಸ್ ವಿಷವರ್ತಲಕ್ಕೆ ಒಮ್ಮೆ ಪ್ರವೇಶಿಸಿದರೆ ಅದರಿಂದ ಹೊರಬರುವುದು ಬಹಳ ಕಷ್ಟ. ಸದ್ಯಕ್ಕೆ ಯೂಟ್ಯೂಬ್ ಹಾಗೂ ಇನ್​ಸ್ಟಾಗ್ರಾಂ ತನ್ನ ಲಕ್ಷಾಂತರ ಕಂಟೆಂಟ್ ಕ್ರಿಯೇಟಸ್​ಗೆ ಹಣವನ್ನೂ ಪಾವತಿ ಮಾಡುತ್ತಿದೆ.

    ಇಚ್ಛಾಶಕ್ತಿಯೇ ಇಲ್ಲವಾದೀತು!

    ಮೊಬೈಲ್​ಫೋನ್ ಅಡಿಕ್ಷನ್ ಹೆಚ್ಚಾದರೆ ಸೆರೆಟೋನಿನ್ ಎಂಬ ನ್ಯೂರೋ ಟ್ರಾನ್ಸ್​ಮಿಟರ್ ಉತ್ಪಾದನೆಯಲ್ಲಿ ಏರಿಳಿತ ಉಂಟಾಗಬಹುದು. ಇದರಿಂದಾಗಿ ಮನುಷ್ಯನ ಮೂಡ್, ನಿದ್ದೆ, ಜೀರ್ಣಕ್ರಿಯೆ, ಗಾಯಗಳ ಮಾಸುವಿಕೆ.. ಹೀಗೆ ಅನೇಕ ದೈಹಿಕ ಆಯಾಮಗಳಿಗೆ ತೊಂದರೆ ಉಂಟಾಗುತ್ತದೆ. ಅದಲ್ಲದೇ ಇಂತಹವರಲ್ಲಿ ಇನ್​ಸ್ಟಂಟ್ ಗ್ರಾಟಿಫಿಕೇಷನ್ ಸಮಸ್ಯೆ ಕೂಡ ಉಂಟಾಗಬಹುದು. ಅಂದರೆ ಬೇಕು ಎನಿಸಿದ್ದು ಈಗಲೇ ಸಿಕ್ಕರೆ ಸಮಾಧಾನ ಎನ್ನುವ ಮನಃಸ್ಥಿತಿ ಉಂಟಾಗುವುದು. ಇದರಿಂದ ಮನುಷ್ಯ ತನ್ನ ವಿಲ್ ಪವರ್ ಕಳೆದುಕೊಳ್ಳುವ ಸಾಧ್ಯತೆ ಅಧಿಕ ಎನ್ನುತ್ತಾರೆ ಡಾ.ಸುಧೀರ್.

    ಸೆಲ್​ಫೋನ್ ಪಿಂಕಿ!

    ಅತಿಯಾಗಿ ಮೊಬೈಲ್​ಫೋನ್ ಗೀಳು ಹೊಂದಿರುವವರು ಈ ದೈಹಿಕ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಕೂಡ ಅಧಿಕ. ಇದನ್ನು ಸೆಲ್​ಫೋನ್ ಪಿಂಕಿ ಅಥವಾ ಸ್ಮಾರ್ಟ್​ಫೋನ್ ಪಿಂಕಿ ಎಂದು ಕರೆಯುತ್ತಾರೆ. ಇದು ನಿರಂತರವಾಗಿ ದೀರ್ಘಕಾಲದವರೆಗೆ ಮೊಬೈಲ್​ಫೋನ್ ಹಿಡಿದುಕೊಳ್ಳುವುದರಿಂದ ಆಗುವಂಥ ಸಮಸ್ಯೆ. ಅಂದರೆ ಮೊಬೈಲ್​ಫೋನನ್ನು ಬಹಳ ಸಮಯದವರೆಗೆ ಹಿಡಿದೇ ಇರುವ ಅಭ್ಯಾಸ ಇರುವವರಲ್ಲಿ ಕೈಯ ಕಿರುಬೆರಳು ಸೊಟ್ಟಗಾಗುತ್ತದೆ. ನಿಮ್ಮ ಕೈಯಲ್ಲೂ ಈ ಸೆಲ್​ಫೋನ್ ಪಿಂಕಿ ಇದೆಯಾ ಎನ್ನುವುದನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಇದೆ ಎಂದಾದರೆ ನೀವು ಮೊಬೈಲ್​ಫೋನ್ ಬಳಕೆ ಕಡಿಮೆ ಮಾಡಬೇಕು. ಈ ಸೆಲ್​ಫೋನ್ ಪಿಂಕಿ ಜೀವನಪರ್ಯಂತ ಇರುವುದಿಲ್ಲ. ಆದರೆ ಇದನ್ನು ನಿರ್ಲಕ್ಷಿಸಿ ಫೋನ್​ನ ಅತಿಯಾದ ಬಳಕೆ ಮುಂದುವರಿಸಿದರೆ ಕಿರುಬೆರಳಿನ ಸೆಳೆತ, ನೋವು ಇತ್ಯಾದಿ ಕಾಡಬಹುದು. ಕಿರುಬೆರಳಿನಲ್ಲಿ ಜುಮ್ ಅನಿಸುವುದು, ಮರಗಟ್ಟಿದಂತಾಗುವುದು ಇದ್ದರೆ ಪರಿಸ್ಥಿತಿ ಗಂಭೀರವಾಗಿದೆ ಎಂದರ್ಥ. ಆಗ ತಜ್ಞವೈದ್ಯರಿಂದ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

    ಹಲವು ಶಕ್ತಿಗಳು ಕ್ಷೀಣ

    ಏನೇ ಪ್ರಶ್ನೆ ಎದುರಾದರೂ ಉತ್ತರಕ್ಕಾಗಿ ಪ್ರಯತ್ನಿಸುವ ಬದಲು ಗೂಗಲ್ ಸರ್ಚ್ ಮಾಡುವುದು, ಬೇಜಾರಾದಾಗ ಶಾರ್ಟ್ಸ್-ರೀಲ್ಸ್ ನೋಡುವುದು, ಜನರೊಂದಿಗೆ ಭೌತಿಕ ಸಂವಹನ ಇಲ್ಲದೇ ಇರುವುದು, ಹೀಗೆಲ್ಲ ಆದಾಗ ಆಲೋಚನಾ ಶಕ್ತಿ, ನೆನಪಿನ ಶಕ್ತಿ, ಇಚ್ಛಾಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ.. ಹೀಗೆ ಮನಸ್ಸಿನ ಅನೇಕ ಸಾಮರ್ಥ್ಯಗಳು ಕುಂಠಿತವಾಗುತ್ತವೆ. ಇಚ್ಛಾಶಕ್ತಿ ಕಳೆದುಕೊಂಡರೆ ಈ ವಿಷವರ್ತಲದಿಂದ ಹೊರ ಬರಲು ಬಹಳ ಕಷ್ಟಪಡಬೇಕಾಗುತ್ತದೆ. ಇಚ್ಛಾಶಕ್ತಿ ಎಂದರೆ ಅಂದುಕೊಂಡಿದ್ದನ್ನು ಮಾಡುವ ಮಾನಸಿಕ ಶಕ್ತಿ. ಇದೇ ಇಲ್ಲ ಎನ್ನುವುದು ಕೈಯನ್ನೋ, ಕಾಲನ್ನೋ ಕಳೆದುಕೊಳ್ಳುವುದಕ್ಕೆ ಸಮಾನ.

    ವಿಷವರ್ತಲದಿಂದ ಹೊರ ಬರುವುದು ಹೇಗೆ?

    ಶಾರ್ಟ್ಸ್-ರೀಲ್ಸ್ ಮಾಯಾಲೋಕ!; ಇದು ತಳವಿರದ ಪಾತಾಳ, ಆಳಕ್ಕಿಳಿದಷ್ಟೂ ಕರಾಳ..
    ಡಾ.ಸುಧೀರ್

    ನೀವು ಮೊಬೈಲ್​ಫೋನ್ ಗೀಳು ಅದರಲ್ಲೂ ರೀಲ್ಸ್-ಶಾರ್ಟ್ಸ್ ವ್ಯಸನ ಹೊಂದಿದ್ದೀರಿ ಎಂದಾಗಿದ್ದಲ್ಲಿ, ಅದರಲ್ಲೂ ಇಲ್ಲಿಯವರೆಗೆ ನೀವು ಓದುತ್ತ ಬಂದಿದ್ದರೆ ಈ ವಿಷವರ್ತಲದಿಂದ ಹೊರಬರಲು ಅಗತ್ಯವಾದ ವಿಲ್ ಪವರ್ ನಿಮ್ಮಲ್ಲಿದೆ ಎಂದರ್ಥ. ನಿಮ್ಮ ಮನೆಯಲ್ಲಿ ಅಥವಾ ಗೆಳೆಯರ ಗುಂಪಿನಲ್ಲಿ ಮೊಬೈಲ್​ಫೋನ್ ಅಡಿಕ್ಷನ್ ಇರುವವರು ಇದ್ದರೆ, ಅವರಿಗಾಗಿಯೇ ಡಾ.ಸುಧೀರ್ ಅವರು ತಿಳಿಸಿರುವ ಒಂದಷ್ಟು ಸಲಹೆಗಳು ಇಲ್ಲಿವೆ.

    ಸೋಷಿಯಲ್ ಮೀಡಿಯಾ ಅಡಿಕ್ಷನ್ನಿಂದ ಹೊರಬರಲು ಸಾಕಷ್ಟು ಶ್ರಮದ ಅಗತ್ಯ ಇರುತ್ತದೆ. ಮೂಲಭೂತವಾಗಿ ಮಾಡಬೇಕಾದದ್ದು ಏನೆಂದರೆ ಮೊಬೈಲ್ಪೋನ್ನಿಂದ ದೂರ ಇರುವುದು. ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಳ್ಳುವಾಗಲೇ ಕಡಿಮೆ ಡೇಟಾ ಇರುವಂತೆ ನೋಡಿಕೊಳ್ಳುವುದು ಒಂದು ಉತ್ತಮ ಉಪಾಯ. ದೇಹದಂಡನೆ ಅಥವಾ ವ್ಯಾಯಾಮ ಮಾಡುವುದು ಕೂಡ ಒಂದು ಉತ್ತಮ ಉಪಾಯ. ಏಕೆಂದರೆ ವ್ಯಾಯಾಮ ಮಾಡಿದಾಗ ನೋವುನಿವಾರಕದಂತೆ ಕೆಲಸ ಮಾಡುವ ಸೆರಟೋನಿನ್ ಎಂಬ ರಾಸಾಯನಿಕವನ್ನು ಮೆದುಳು ಉತ್ಪಾದನೆ ಮಾಡುತ್ತದೆ. ಅದರಿಂದಲೂ ಸುಖದ ಅನುಭವ ಉಂಟಾಗುತ್ತದೆ. ಮೊಬೈಲ್ಪೋನ್ ನೋಡಿ ಪಡೆಯುತ್ತಿದ್ದ ಅನುಭವಕ್ಕೂ ಇದಕ್ಕೂ ವ್ಯತ್ಯಾಸ ಇದ್ದರೂ ಇದರಲ್ಲೂ ಖುಷಿ ಸಿಗುತ್ತದೆ. ಮೊಬೈಲ್ಪೋನ್ ಬಿಟ್ಟು ವಾಕಿಂಗ್ ಮಾಡುವುದು, ಜನರೊಂದಿಗೆ ಭೌತಿಕವಾಗಿ ಬೆರೆಯುವುದು, ಪುಸ್ತಕಗಳನ್ನು ಓದುವುದು, ಕ್ರಿಯಾಶೀಲತೆ ಬೇಡುವ ಕೆಲಸಗಳನ್ನು ಮಾಡುವುದರಿಂದ ಮೊಬೈಲ್ಪೋನ್ ಗೀಳಿನಿಂದ ದೂರವಾಗಬಹುದು. ಇದರಿಂದ ಹೊರ ಬರುವ ದಾರಿ ಸರಳವಾಗಿದ್ದರೂ ಅದನ್ನು ಅನುಸರಿಸುವುದು ಕಷ್ಟ. ಸಮಸ್ಯೆ ಗಂಭೀರವಾಗಿದೆ ಎನಿಸಿದಲ್ಲಿ ಆಪ್ತ ಸಮಾಲೋಚಕರು ಅಥವಾ ಮನಃಶಾಸ್ತ್ರಜ್ಞರ ಬಳಿ ಹೋಗುವುದು ಅತ್ಯಗತ್ಯ. ಇಲ್ಲವಾದಲ್ಲಿ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯೇ ಹೆಚ್ಚು.

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts