More

    ರಕ್ಷಕ-ವೀಕ್ಷಕರಿಲ್ಲದೆ ಅರಣ್ಯ ರೋದನ: 2.87 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕೇವಲ 197 ಸಿಬ್ಬಂದಿ!

    ಮಂಗಳೂರು: ಅರಣ್ಯ ಇಲಾಖೆಯ ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ 2.87 ಲಕ್ಷ ಹೆಕ್ಟೇರ್ ಪ್ರದೇಶವಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಅರಣ್ಯ ರಕ್ಷಣೆ ಮಾಡುವುದು ಇಲಾಖೆಗೆ ಬಹುದೊಡ್ಡ ಸವಾಲು ಎದುರಾಗಿದೆ.

    ಶೇಕಡ 50ಕ್ಕಿಂತ ಹೆಚ್ಚು ಅರಣ್ಯ ರಕ್ಷಕ-ವೀಕ್ಷಕ ಹುದ್ದೆ ಖಾಲಿ ಇದ್ದು, ಇರುವ ಕೇವಲ 197 ಸಿಬ್ಬಂದಿಯೊಂದಿಗೆ ಅರಣ್ಯ ರಕ್ಷಣೆ ಕಾರ್ಯಕ್ಕೆ ತೊಡಕಾಗಿದೆ. ಕಳೆದ ಬೇಸಿಗೆಯಲ್ಲಿ ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಆರಿಸಲು ಇಲಾಖೆ ಹರಸಾಹಸಪಟ್ಟಿದ್ದು ಇನ್ನೂ ನೆನಪಿನಂಗಳದಲ್ಲಿದೆ.

    375 ಹುದ್ದೆ ಖಾಲಿ

    ಮಂಗಳೂರು ಮತ್ತು ಕುಂದಾಪುರ ಅರಣ್ಯ ವಿಭಾಗ, ಕುದುರೆಮುಖ ವನ್ಯಜೀವಿ ವಿಭಾಗ ಸಹಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ಸಾಮಾಜಿಕ ಅರಣ್ಯೀಕರಣ ವಿಭಾಗವು ಮಂಗಳೂರು ವೃತ್ತ ವ್ಯಾಪ್ತಿಗೆ ಬರುತ್ತದೆ. ಈ ವ್ಯಾಪ್ತಿಗೆ 426 ಗಸ್ತು ಅರಣ್ಯ ಪಾಲಕರ ಅಗತ್ಯತೆ ಇದೆ. ಆದರೆ, ಕೇವಲ 191 ಮಂದಿ ಮಾತ್ರ ಇದ್ದು, 235 ಹುದ್ದೆ ಖಾಲಿ ಇದೆ. ಅರಣ್ಯ ವೀಕ್ಷಕರು 146 ಸಿಬ್ಬಂದಿ ಇರಬೇಕಿತ್ತು. ಆದರೆ, ಕೇವಲ 6 ಮಂದಿಯಷ್ಟೇ ಕರ್ತವ್ಯದಲ್ಲಿದ್ದು 140 ಹುದ್ದೆಗಳಿಗೆ ನೇಮಕಾತಿಯೇ ಆಗಿಲ್ಲ. ಹೀಗಾಗಿ ಇರುವ 197 ಸಿಬ್ಬಂದಿ ಸಹಕಾರದಲ್ಲಿ ಅರಣ್ಯ ರಕ್ಷಣೆ ಕಷ್ಟದಾಯಕವಾಗಿದೆ.

    ಗಸ್ತು ಕರ್ತವ್ಯ

    ಅರಣ್ಯ ಇಲಾಖೆಯಲ್ಲಿ ಪ್ರಮುಖ ಕೆಲಸವೇ ತಳಮಟ್ಟದ ಬೀಟ್ ಕೆಲಸವಾಗಿದೆ. 2-3 ಗ್ರಾಮ ಸೇರಿ ಒಂದು ಬೀಟ್ ಹಾಗೂ 2-3 ಬೀಟ್ ಸೇರಿ ಒಂದು ಸೆಕ್ಷನ್ (ಡೆಪ್ಯುಟಿ ಆರ್‌ಎ್ಒ), 2-3 ಸೆಕ್ಷನ್ ಸೇರಿ ಒಂದು ರೇಂಜ್ (ರೇಂಜ್ ಆಫೀಸರ್) ಆಗುತ್ತದೆ. ಈ ಪೈಕಿ ಬೀಟ್ ವ್ಯಾಪ್ತಿಯ ಸಿಬ್ಬಂದಿ ಕಾರ್ಯ ಮಹತ್ವದ್ದಾಗಿರುತ್ತದೆ. ಸಾಮಾನ್ಯವಾಗಿ 2-3 ಗ್ರಾಮಗಳನ್ನು ಸೇರಿಸಿಕೊಂಡು ಅರಣ್ಯ ಇಲಾಖೆಯಲ್ಲಿ ಒಂದೊಂದು ಬೀಟ್ ಬೌಂಡರಿ ಇರುತ್ತದೆ. ಈ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಸಂಬಂಧಿಸಿದ ರಕ್ಷಣೆ ಗಸ್ತು ಅರಣ್ಯ ಪಾಲಕರದ್ದು. ಅವರಿಗೆ ಅರಣ್ಯ ವೀಕ್ಷಕರ ನೆರವೂ ಇರುತ್ತದೆ.

    4-5 ಬೀಟ್‌ಗೆ ಒಬ್ಬನೇ ಸಿಬ್ಬಂದಿ

    ಒಂದು ಬೀಟ್‌ಗೆ ಒಬ್ಬ ಗಸ್ತು ಅರಣ್ಯ ಪಾಲಕ ಇದ್ದರೆ ಹೆಚ್ಚು ನಿಗಾ ವಹಿಸಲು ಸಾಧ್ಯ. ಆದರೆ, ಸಿಬ್ಬಂದಿ ಇಲ್ಲದೆ ಈಗ 4-5 ಬೀಟ್‌ಗೆ ಒಬ್ಬನೇ ಗಸ್ತು ಅರಣ್ಯ ಪಾಲಕ ಕರ್ತವ್ಯದಲ್ಲಿದ್ದಾನೆ. ಹೀಗಾಗಿ ಅವರಿಗೆ ಕಾರ್ಯದ ಒತ್ತಡ ಅಧಿಕವಾಗಿದೆ. ಗಸ್ತು ಅರಣ್ಯ ಪಾಲಕ ಹಾಗೂ ವೀಕ್ಷಕ ಎರಡೂ ಕೂಡ ಪೂರ್ಣಾವಧಿ ಹುದ್ದೆ. ಅರಣ್ಯ ವೀಕ್ಷಕರಾಗಿದ್ದವರು ನಂತರ ಗಸ್ತು ಅರಣ್ಯ ಪಾಲಕ, ಡೆಪ್ಯುಟಿ ಆರ್‌ಎಒ, ರೇಂಜರ್ ಆಗಲೂ ಅವಕಾಶವಿದೆ. ಜತೆಗೆ, ಉಪ ವಲಯ ಅರಣ್ಯಾಧಿಕಾರಿಗಳೂ ಅಗತ್ಯದಷ್ಟು ಇಲ್ಲ. 231 ಹುದ್ದೆಗಳ ಪೈಕಿ 63 ಹುದ್ದೆ ಖಾಲಿ ಇದೆ. ಇರುವ ಸಿಬ್ಬಂದಿ ಕೆಲಸದ ಒತ್ತಡದಿಂದ ಪರಿತಪಿಸುವಂತಾಗಿದೆ.

    ಕಾಡು ಕಾಯುವ ನಿಜ ಸೈನಿಕರು

    ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರು ಅರಣ್ಯ ಕಾಯುವ ನಿಜವಾದ ಸೈನಿಕರು. ತಳಮಟ್ಟದಲ್ಲಿ ಇವರು ಕರ್ತವ್ಯ ನಿರ್ವಹಿಸುವುದಾದರೂ ಅರಣ್ಯದ ಬಗ್ಗೆ ಇವರಿಗೆ ಗಹನವಾದ ಮಾಹಿತಿ ಇರುತ್ತದೆ. ಅರಣ್ಯದ ಆಳ-ಅಗಲವಷ್ಟೇ ಅಲ್ಲದೆ, ತನ್ನ ವ್ಯಾಪ್ತಿಯಲ್ಲಿನ ಸಂಪೂರ್ಣ ಮಾಹಿತಿ ಅರಿತಿರುತ್ತಾರೆ. ಜತೆಗೆ ಅರಣ್ಯದ ಸೂಕ್ಷ್ಮ ಸಂಗತಿಯೂ ಇವರಿಗಷ್ಟೇ ತಳಿದಿರುವುದರಿಂದ ಆ ಬಗ್ಗೆ ನಿಗಾ ವಹಿಸುತ್ತಾರೆ. ಇಂತಹ ಮಹತ್ವದ ಹುದ್ದೆ ಕಳೆದ ಮೂರು ವರ್ಷದಿಂದ ಖಾಲಿ ಬಿದ್ದಿದೆ. ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡದ್ದರಿಂದ ಇಲಾಖೆ ಅಧಿಕಾರಿಗಳಿಗೆ ಅರಣ್ಯ ಕಾಪಾಡುವುದು ಕಷ್ಟಕರವಾಗುತ್ತಿದೆ.

    995ರಲ್ಲಿ 488 ಹುದ್ದೆ ಮಾತ್ರ ಭರ್ತಿ

    ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ ಒಟ್ಟು 995 ಅಧಿಕಾರಿ-ಸಿಬ್ಬಂದಿ ಮಂಜೂರಾತಿ ಹುದ್ದೆಯಿದೆ. ಇದರಲ್ಲಿ 488 ಹುದ್ದೆ ಮಾತ್ರ ಭರ್ತಿಯಾಗಿದೆ. ಬರೋಬ್ಬರಿ 507 ಹುದ್ದೆ ಖಾಲಿಯೇ ಇವೆ. ಕಳೆದ 3 ವರ್ಷದಿಂದ ಹೊಸ ನೇಮಕಾತಿ ನಡೆದಿಲ್ಲ. ಹಿಂದೆ ಅರಣ್ಯ ಇಲಾಖೆಗಳ ನೇಮಕಾತಿ ನಿಯಮಿತವಾಗಿ ನಡೆಯುತ್ತಿತ್ತು. ಆದರೆ, ಈಗ ಸೂಕ್ತ ಕಾಲದಲ್ಲಿ ನೇಮಕಾತಿ ಆಗದೆ ಅರಣ್ಯದ ಬಗ್ಗೆ ನಿಗಾ ವಹಿಸಲು ತೊಡಕಾಗುತ್ತಿದೆ. ಪರಿಣಾಮವಾಗಿ ಅಕ್ರಮ ಚಟುವಟಿಕೆ, ಕಾಡ್ಗಿಚ್ಚು ಸಹಿತ ವಿವಿಧ ಘಟನೆ ವರದಿಯಾಗುತ್ತಲೇ ಇದೆ.

    ಅರಣ್ಯ ಇಲಾಖೆಯ ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ ವಿವಿಧ ಹುದ್ದೆ ಖಾಲಿ ಇದ್ದು, ಇರುವ ಸಿಬ್ಬಂದಿಯನ್ನೇ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರು ಅಗತ್ಯವಾಗಿ ಬೇಕು. ಆದರೆ, ನೇಮಕಾತಿ ಆಗಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಸರ್ಕಾರವೇ ಈ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
    – ಆ್ಯಂಟನಿ ಎಸ್. ಮರಿಯಪ್ಪ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts