More

    ಕೋವಿಡ್ ಸೇವೆಗೆ ವೈದ್ಯ ಅಭ್ಯರ್ಥಿಗಳ ಹಿಂದೇಟು, ಉಡುಪಿಯಲ್ಲಿ 2, ದ.ಕ.ದಲ್ಲಿ 4 ಹುದ್ದೆ ಖಾಲಿ

    – ಗೋಪಾಲಕೃಷ್ಣ ಪಾದೂರು, ಉಡುಪಿ
    ಅಜ್ಜರಕಾಡು ಜಿಲ್ಲಾಸ್ಪತ್ರೆ ಕೋವಿಡ್-19 ಐಸೋಲೇಷನ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸಲು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಸರ್ಕಾರ ಮುಂದಾಗಿದೆ. ಆದರೆ, ಎರಡು ಬಾರಿ ಸಂದರ್ಶನ ನಡೆಸಿದರೂ 10 ಹುದ್ದೆಗಳಲ್ಲಿ 8 ಹುದ್ದೆ ಮಾತ್ರ ಭರ್ತಿ ಮಾಡಲು ಸಾಧ್ಯವಾಗಿದೆ.

    ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ಕರೊನಾ ಹಿನ್ನೆಲೆಯಲ್ಲಿ ಐಸೋಲೇಷನ್ ವಾರ್ಡ್ ಹಾಗೂ ಫೀವರ್ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಲು 10 ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಏಪ್ರಿಲ್ ಮೊದಲ ವಾರದಲ್ಲಿ ಅರ್ಜಿ ಆಹ್ವಾನಿಸಿತ್ತು. ಏ.9ರಂದು ನಡೆದ ಮೊದಲ ಸಂದರ್ಶನದಲ್ಲಿ ನಾಲ್ವರು ಮಾತ್ರ ಭಾಗವಹಿಸಿದ್ದರು. 2ನೇ ಬಾರಿ ಮೇ 13ರಂದು ಕೂಡ ಅಷ್ಟೇ ಮಂದಿ ಭಾಗವಹಿಸಿದ್ದಾರೆ.

    ತಾತ್ಕಾಲಿಕವೆಂದು ಹಿಂದೇಟು: ಖಾಸಗಿ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರಿಗೆ ಮಾಸಿಕ 40ರಿಂದ 50 ಸಾವಿರ ರೂ. ವೇತನ ನೀಡಲಾಗುತ್ತಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ 60 ಸಾವಿರ ರೂ.ನಿಗದಿಪಡಿಸಲಾಗಿದೆ. ಎಂಡಿ ಪದವಿ ಪಡೆದವರಿಗೆ ಖಾಸಗಿಯಲ್ಲಿ 1.5 ಲಕ್ಷ ರೂ.ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 1.10 ಲಕ್ಷ ರೂ.ವೇತನ ಇದೆ. ಹೆಚ್ಚಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಅಧ್ಯಯನಕ್ಕೆ ಆಸಕ್ತಿ ವಹಿಸಿರುವುದು ಮತ್ತು ನೇಮಕಾತಿ ತಾತ್ಕಾಲಿಕ ಅವಧಿಯದ್ದಾಗಿರುವುದರಿಂದ ವೈದ್ಯ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

    ಜಿಲ್ಲಾಸ್ಪತ್ರೆಗೆ ಒತ್ತಡ: ಎಲ್ಲ ಖಾಸಗಿ ಆಸ್ಪತ್ರೆಗಳು ಕರೊನಾ ಶಂಕಿತ ರೋಗಿಗಳನ್ನು ನೇರವಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದು, ಇವರಿಗೆ ಚಿಕಿತ್ಸೆ ನೀಡಲು 3 ಐಸಿಯು ಸಹಿತ 20 ಬೆಡ್‌ಗಳ ಐಸೋಲೇಷನ್ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರ ಪ್ರತ್ಯೇಕ ತಂಡ ರಚಿಸಲಾಗಿದೆ. ಜಿಲ್ಲಾಸ್ಪತ್ರೆಗೆ ದಿನಕ್ಕೆ 300ಕ್ಕೂ ಅಧಿಕ ಮಂದಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ರೋಗಿಗಳನ್ನು ಫೀವರ್ ಕ್ಲಿನಿಕ್‌ನಲ್ಲಿ ಸ್ಕ್ರೀನಿಂಗ್ ನಡೆಸಿ ಆಸ್ಪತ್ರೆಗೆ ಒಳಗೆ ಬಿಡಬೇಕಿದೆ. ವೈದ್ಯರ ಜತೆಗೆ 20 ಸ್ಟಾಫ್ ನರ್ಸ್ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ 17 ಹುದ್ದೆ ಮಾತ್ರ ಭರ್ತಿಯಾಗಿವೆ. ಹೊರಗುತ್ತಿಗೆ ಆಧಾರದಲ್ಲಿ 5 ಲ್ಯಾಬ್ ಟೆಕ್ನಿಷಿಯನ್, 10 ಡಿ ಗ್ರೂಪ್ ನೌಕರರನ್ನು ಆಯ್ಕೆ ಮಾಡಲಾಗಿದೆ.

    ದ.ಕ.ದಲ್ಲಿಯೂ ನಿರೀಕ್ಷಿತ ಪ್ರತಿಕ್ರಿಯೆ ಇಲ್ಲ: ಕೋವಿಡ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕವಾಗಿ ಸಿಬ್ಬಂದಿ ನೇಮಕ ಮಾಡುವ ಜಿಲ್ಲಾ ಆರೋಗ್ಯ ಇಲಾಖೆಯ ಯತ್ನಕ್ಕೆ ಆಂಶಿಕ ಫಲವಷ್ಟೇ ದೊರೆತಿದೆ. ನಿರೀಕ್ಷೆ ಮಾಡಿದಷ್ಟು ಮಂದಿ ಸಂದರ್ಶನಕ್ಕೆ ಹಾಜರಾಗಲಿಲ್ಲ. ಬಂದಿರುವವರಲ್ಲಿ ಬಹುತೇಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ. ಇವರು ಮುಂದಿನ 6 ತಿಂಗಳು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾಗಿದೆ. 10 ವೈದ್ಯರನ್ನು ಕರೆಯಲಾಗಿದ್ದು, 6 ಮಂದಿ ನೇಮಕಗೊಂಡಿದ್ದಾರೆ. ನರ್ಸ್ 20 ಹುದ್ದೆಗೆ 13 ಮಂದಿ, ಲ್ಯಾಬ್ ಟೆಕ್ನೀಶಿಯನ್ 5 ಹುದ್ದೆಗೆ ಒಬ್ಬರು, ಗ್ರೂಪ್ ಡಿ 10 ಹುದ್ದೆಗೆ 6 ಮಂದಿ ನೇಮಕಗೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ಕರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಐಸೊಲೇಷನ್ ವಾರ್ಡ್‌ನಲ್ಲಿ ಕೆಲಸ ಮಾಡುವವರನ್ನು ಬೇರೆಡೆ ನಿಯೋಜಿಸಲಾಗುವುದಿಲ್ಲ. ಇಲ್ಲಿ 3 ಪಾಳಿಯಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಐಸೊಲೇಷನ್ ವಾರ್ಡ್ ಮತ್ತು ಫೀವರ್ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಲು ಹೆಚ್ಚುವರಿ ವೈದ್ಯರ ಅಗತ್ಯವಿದೆ.
    – ಡಾ.ಮಧುಸೂದನ ನಾಯಕ್, ಜಿಲ್ಲಾ ಸರ್ಜನ್, ಉಡುಪಿ ಜಿಲ್ಲಾಸ್ಪತ್ರೆ

    ಎಂಬಿಬಿಎಸ್ ಬಳಿಕ 1 ವರ್ಷ ಯಾವುದಾದರೂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು. ಸರ್ಕಾರಿ ಸೀಟು ಪಡೆದವರಿಗೆ 2 ವರ್ಷ ಗ್ರಾಮೀಣ ಸೇವೆ ಕಡ್ಡಾಯ. ಈ ವಿಚಾರ ಹೈಕೋರ್ಟ್‌ನಲ್ಲಿದೆ. ಈಗ 1 ವರ್ಷ ಹೌಸ್ ಸರ್ಜನ್ ಆಗಿ ಕರ್ತವ್ಯ ನಿರ್ವಹಿಸಿದವರು ನೇರ ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಎಂಬಿಬಿಎಸ್ ವೈದ್ಯರ ಕೊರತೆ ಕಾಡುತ್ತಿದೆ.
    – ಡಾ.ಉಮೇಶ್ ಪ್ರಭು, ಅಧ್ಯಕ್ಷ, ಐಎಂಎ ಕರಾವಳಿ-ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts