More

    ತಿಪಟೂರಿನಲ್ಲಿ ಫುಟ್​ಪಾತ್​ ವ್ಯಾಪಾರ ತೆರವಿಗೆ ದಿನದ ಗಡುವು: ಮತ್ತೆ ಕಾಲಾವಕಾಶ ಕೇಳಿದ್ರು ವ್ಯಾಪಾರಿಗಳು

    ತಿಪಟೂರು: ನಗರದಲ್ಲಿ ಫುಟ್‌ಪಾತ್ ಅಂಗಡಿಗಳ ತೆರವಿಗೆ ದಿನಗಣನೆ ಶುರುವಾಗಿದೆ. ಪಾದಚಾರಿ ಮಾರ್ಗ ಅತಿಕ್ರಮಿಸಿದ್ದ ಅಂಗಡಿ ಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂಬ ಸುಪ್ರೀಂಕೋರ್ಟ್‌ನ 2010ರ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಮುಂದಾಗಿರುವ ಜಿಲ್ಲಾಡಳಿತ ಆದೇಶ ನಗರದಲ್ಲಿಗ ಚಾಲನೆ ಪಡೆದಿದೆ.

    ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟುಕೊಂಡಿರುವ ಮಾಲೀಕರಿಗೆ ಅಂಗಡಿ ತೆರವುಗೊಳಿಸುವಂತೆ 6 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದು, ಗುರುವಾರ ಅಂತಿಮವಾಗಿ 24 ಗಂಟೆಗಳ ಕಾಲಾವಕಾಶ ನೀಡಿ ನಗರಸಭೆ ಆಯುಕ್ತರು ನೋಟಿಸ್ ನೀಡಿದ್ದರು. ನೋಟಿಸ್ ಪ್ರಶ್ನಿಸಿ ನ್ಯಾಯ ಕೇಳಲು ಶುಕ್ರವಾರ ಶಾಸಕ ಬಿ.ಸಿ.ನಾಗೇಶ್ ಬಳಿ ಬಂದ ಅಂಗಡಿಗಳ ಮಾಲೀಕರು, ಕರೊನಾ ಪರಿಣಾಮ ವ್ಯಾಪಾರ, ವಹಿವಾಟು ನಿಂತಿದೆ, ತೆರವಿಗೆ ಸ್ವಲ್ಪ ಕಾಲಾವಕಾಶಬೇಕೆಂದು ಮನವಿ ಮಾಡಿದರು.

    ಅನುಕಂಪದ ಆಧಾರದಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿದ್ದನ್ನೇ ದುರುಪಯೋಗ ಮಾಡಿಕೊಂಡು ಸರ್ಕಾರಿ ಜಾಗ ಅತಿಕ್ರಮಣ ಮಾಡಿ, ಇನ್ನೊಬ್ಬರಿಗೆ ಬಾಡಿಗೆ, ಲೀಸ್‌ಗೆ ಕೊಡುವ ದಂಧೆ ನಡೆದಿದೆ. ರಸ್ತೆ ಬದಿ ಅಂಗಡಿಗಳನ್ನಿಟ್ಟು ಶಾಂತಿಭಂಗ ಮಾಡಲಾಗುತ್ತಿದೆ. ಹೆಣ್ಣುಮಕ್ಕಳು ಸುರಕ್ಷಿತವಾಗಿ ತಿರುಗಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

    ಯಾವುದೇ ಕಾರಣಕ್ಕೂ ಅನಧಿಕೃತ ಅಂಗಡಿಗಳ ಮುಂದುವರಿಕೆಗೆ ಅವಕಾಶವಿಲ್ಲ. ವಾರದೊಳಗೆ ನಗರದಲ್ಲಿರುವ ಇಂತಹ ಎಲ್ಲ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ನಗರಸಭೆ ಆಯುಕ್ತರಿಗೆ ಶಾಸಕರು ಸೂಚಿಸಿದರು.
    ಎಸೈ ದಾಕ್ಷಾಯಿಣಿ, ಬೀದಿ ಬದಿ ವ್ಯಾಪಾರಿಗಳು ಇದ್ದರು.

    ನೂಕು ಗಾಡಿಗಳಿಗೆ ಅವಕಾಶ: ಸುಪ್ರೀಂಕೋರ್ಟ್‌ನ ಆದೇಶದ ಪ್ರತಿ ಓದಿದ ನಗರಾಯುಕ್ತ ಉಮಾಕಾಂತ್, ರಸ್ತೆ ತಿರುವು, ವಾಹನ ದಟ್ಟಣೆ ಹೆಚ್ಚಾಗಿರುವ ಪ್ರದೇಶ ಹೊರತು ಪಡಿಸಿ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೂಕು ಗಾಡಿ ಮೂಲಕ ವ್ಯಾಪಾರ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ, ಒಂದೇ ಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ನೆರೆಯ ಆಂಧ್ರ, ತಮಿಳುನಾಡಿನಿಂದ ಬಂದವರು ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ನೀಡಿ ಶೋಷಿಸುತ್ತಿದ್ದಾರೆ. ನಿಮಗರಿವಿಲ್ಲದೇ ಅವರನ್ನು ಶ್ರೀಮಂತರಾಗಿಸುತ್ತಿದ್ದೀರಿ, ದಿನದಿಂದ ದಿನಕ್ಕೆ ಸರ್ಕಾರದ ಕಾನೂನುಗಳು ಬಿಗಿಯಾಗುತ್ತಿವೆ. ರಸ್ತೆ ಬದಿ ವ್ಯಾಪಾರ ಮುಂದಿನ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಶಾಲಾ, ಕಾಲೇಜು ಸಮಯದಲ್ಲಿ ಪಾನಿಪುರಿ ಅಂಗಡಿಗಳಿಗೆ ಅವಕಾಶವಿಲ್ಲ.
    ಬಿ.ಸಿ.ನಾಗೇಶ್ ಶಾಸಕ

    ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿರುವ ಅಂಗಡಿಗಳ ತೆರವಿಗೆ ಕಾಲಾವಕಾಶ ನೀಡುವ ಬಗ್ಗೆ ಉಪವಿಭಾಗಾಧಿಕಾರಿಗಳು, ಡಿವೈಎಸ್‌ಪಿ, ಮತ್ತು ತಹಸೀಲ್ದಾರ್ ಸಮ್ಮುಖದಲ್ಲಿ ಸಭೆ ಕರೆದು ತೀರ್ಮಾನಿಸಲಾಗುವುದು. ಆದರೆ, ಶಾಶ್ವತವಾಗಿ ನಿರ್ಮಿಸಲಾಗಿರುವ ಅಂಗಡಿಗಳನ್ನು ಒಂದು ವಾರದೊಳಗೆ ತೆರವುಗೊಳಿಸಲೇಬೇಕು.
    ಉಮಾಕಾಂತ್ ತಿಪಟೂರು ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts