More

    ನಗರದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿ ಭರಾಟೆ ಜೋರು

    ಮೈಸೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಸಾಮಗ್ರಿಗಳ ಖರೀದಿ ಭರಾಟೆಗೆ ಗುರುವಾರ ದಿನವಿಡಿ ಸುರಿದ ಮಳೆ ಅಡ್ಡಿಯಾಯಿತು. ಭರ್ಜರಿ ವ್ಯಾಪಾರ ನಡೆಸಿ ಲಾಭ ಮಾಡಿಕೊಳ್ಳಬೇಕು ಎಂಬ ವ್ಯಾಪಾರಿಗಳ ಕನಸಿಗೆ ಮಳೆ ತಣ್ಣೀರು ಎರಚಿತು.


    ನಗರದಲ್ಲಿ ಮಧ್ಯಾಹ್ನ 12 ಗಂಟೆವರೆಗೂ ಮೋಡ ಕವಿದ ವಾತಾವರಣ ಇತ್ತು. ಬಳಿಕ ಶುರುವಾದ ಮಳೆ ದಿನವಿಡಿ ಸುರಿಯಿತು. ಮಳೆಯಿಂದ ವರಮಹಾಲಕ್ಷ್ಮೀ ಹಬ್ಬದ ವ್ಯಾಪಾರ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿತು.

    ಗುರುವಾರ ಬೆಳಗ್ಗೆ ಹಾಗೂ ಮಳೆ ಬಿಡುವು ನೀಡಿದ ವೇಳೆ ವ್ಯಾಪಾರ ನಡೆಯಿತು. ಹೆಚ್ಚಾಗಿ ಬೆಳಗ್ಗೆ ಬೆಲೆ ಏರಿಕೆ ಬಿಸಿಯ ನಡುವೆಯೂ ವರಮಹಾಲಕ್ಷ್ಮೀ ಹಬ್ಬಕ್ಕೆ ನಾಗರಿಕರು ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.


    ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸುವಂತೆ ಮಾಡು ಎಂದು ಮಹಾಲಕ್ಷ್ಮೀಯನ್ನು ಪೂಜಿಸುವ ‘ವರಮಹಾಲಕ್ಷ್ಮೀ’ ಹಬ್ಬ ಶುಕ್ರವಾರ ನಗರದಲ್ಲಿ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ. ಹಬ್ಬದ ಮುನ್ನಾ ದಿನವಾದ ಗುರುವಾರ ಬೆಳಗ್ಗೆ ಹಾಗೂ ಬುಧವಾರ ಸಂಜೆ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದು ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.


    ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ಶಿವರಾಂಪೇಟೆ, ಚಿಕ್ಕಗಡಿಯಾರ, ದಿವಾನ್ಸ್ ರಸ್ತೆ, ನಗರ ಬಸ್ ನಿಲ್ದಾಣ, ಸಯ್ಯಜಿರಾವ್ ರಸ್ತೆ, ಧನ್ವಂತ್ರಿ ರಸ್ತೆಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಮಳೆಯಿಂದ ಕೊಳೆರೋಗ ಕಾಣಿಸಿಕೊಂಡು ಹೂ, ತರಕಾರಿಗಳ ಬೆಲೆ ಗಗನಕ್ಕೇರಿದೆ. ಜತೆಗೆ ಗುರುವಾರ ದರ ಮತ್ತಷ್ಟು ಏರಿಕೆ ಕಂಡಿತ್ತಾದರೂ ಜನರು ಖರೀದಿಯಿಂದ ಹಿಂದೆ ಬೀಳಲಿಲ್ಲ. ಎಲ್ಲ ಬಗೆಯ ಹೂವುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಎರಡು-ಮೂರು ಪಟ್ಟು ದುಬಾರಿಯಾಗಿದ್ದವು. ಆದರೂ ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಕಂಡುಬಂತು.

    ಬೆಲೆ ಏರಿಕೆ ಬಿಸಿ: ವೀಳ್ಯದೆಲೆ, ಹೂವು, ನಿಂಬೆಹಣ್ಣು, ವಿವಿಧ ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಅದರಂತೆ ಸೇವಂತಿ 50ರಿಂದ 100-120ರೂ.ಗೆ ಏರಿಕೆಯಾಗಿದೆ. ಕನಕಾಂಬರ 2800 ರೂ.ಗೆ ಏರಿಕೆಯಾಗಿದ್ದು, ದುಬಾರಿಯಾಗಿದೆ. ಮಲ್ಲಿಗೆ ಕೆಜಿಗೆ 1200, ಗಣಿಗಲೆ ಹೂವು 325-350 ರೂ., ಜಾಜಿ ಮಲ್ಲಿಗೆ ಕೆಜಿಗೆ 2000 ರೂ.ಗೆ ಮಾರಾಟವಾಗಿದೆ. ಗುಲಾಬಿ, ಕಾಕಡ, ಪನ್ನಿರ್ ಎಲೆ, ತಾವರೆ ಹೂವಿನ ಬೆಲೆಯೂ ಏರಿಕೆಯಾಗಿದೆ. ಲಕ್ಷ್ಮೀ ಹಬ್ಬಕ್ಕೆ ಹೆಚ್ಚು ಬಳಸುವ ತಾವರೆ ಹೂವು 40 ರೂ. ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts