More

    ಕಿರುತೆರೆಗೂ ವೈರಸ್ ಕಾಟ: ಮಾ.22-31ರವರೆಗೆ ಚಿತ್ರೀಕರಣ ಸ್ಥಗಿತ

    ಬೆಂಗಳೂರು: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಚಿತ್ರಪ್ರದರ್ಶನಕ್ಕೆ ಮಾರ್ಚ್ 31ರವರೆಗೂ ತಡೆಯೊಡ್ಡಿರುವುದು ಗೊತ್ತೇ ಇದೆ. ಇನ್ನು ಚಿತ್ರೀಕರಣ ನಿಂತು ಕೆಲವೇ ದಿನಗಳಾಗಿವೆ. ಈಗ ಕನ್ನಡ ಕಿರುತೆರೆಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣವನ್ನೂ ನಿಲ್ಲಿಸಬೇಕು ಎಂದು ತೀರ್ವನವಾಗಿದ್ದು, ಮಾರ್ಚ್ 22ರಿಂದ 31ರವರೆಗೆ ಕಿರುತೆರೆಯ ಕಾರ್ಯಕ್ರಮಗಳ ಚಿತ್ರೀಕರಣ ಸಹ ನಿಲ್ಲಲಿದೆ. ಇತ್ತೀಚೆಗಷ್ಟೇ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂರ್ಸ್ ಅಸೋಸಿಯೇಷನ್ (ಐಎಂಪಿಪಿಎ) ಮಾರ್ಚ್ 31ರವರೆಗೆ ಸಿನಿಮಾ, ಧಾರಾವಾಹಿ, ವೆಬ್ ಸೀರೀಸ್, ಸಾಕ್ಷ್ಯಚಿತ್ರ … ಹೀಗೆ ಎಲ್ಲಾ ತರಹದ ಚಿತ್ರೀಕರಣಕ್ಕೂ ತಡೆಯೊಡ್ಡಿತ್ತು. ಈಗ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಹ ಮಾರ್ಚ್ 22ರಿಂದ 31ರವರೆಗೆ ಕಿರುತೆರೆಯ ಎಲ್ಲಾ ಚಿತ್ರೀಕರಣ ನಿಲ್ಲಿಸುವ ನಿರ್ಧಾರವನ್ನು ಕೈಗೊಂಡಿದೆ.

    ಈ ಕುರಿತು ಮಾತನಾಡುವ ಸಂಘದ ಅಧ್ಯಕ್ಷ ಎಸ್.ವಿ. ಶಿವಕುಮಾರ್, ‘ಈಗಾಗಲೇ ಒಮ್ಮೆ ಸಭೆ ಸೇರಿ, ಕಡಿಮೆ ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡಬೇಕೆಂದು ಸಂಘ ನಿರ್ಧರಿಸಿತ್ತು. ಅದರಂತೆ ಎಲ್ಲಾ ಧಾರಾವಾಹಿ ತಂಡಗಳು ಕಡಿಮೆ ಜನರನ್ನಿಟ್ಟುಕೊಂಡು ಕೆಲಸ ಮಾಡಿದವು. ಆದರೆ, ಇದೀಗ ಎಲ್ಲಾ ರಾಜ್ಯಗಳಲ್ಲೂ ಚಿತ್ರೀಕರಣ ಚಟುವಟಿಕೆಗಳು ನಿಲ್ಲುತ್ತಿರುವುದರಿಂದ ನಾವು ಸಹ ಮುಂದುವರೆಸುವುದು ಕಷ್ಟವಾಗುತ್ತಿದೆ. ಐಎಂಪಿಪಿಎ ಚಿತ್ರೀಕರಣ ನಿಲ್ಲಿಸಬೇಕೆಂದು ತೀರ್ಮಾನ ಕೈಗೊಂಡಾಗ, ಮಹಾರಾಷ್ಟ್ರದಲ್ಲಿ ಕರೊನಾ ಮೂರನೆಯ ಲೆವೆಲ್​ನಲ್ಲಿತ್ತು. ಆದರೆ, ನಮ್ಮದು ಇನ್ನೂ ಮೊದಲ ಹಂತದಲ್ಲೇ ಇತ್ತು. ಈಗ ಕರ್ನಾಟಕದಲ್ಲೂ ಎರಡನೇ ಹಂತ ಶುರುವಾಗಿರುವುದರಿಂದ, ರಿಸ್ಕ್ ತೆಗೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ, ಮಾರ್ಚ್ 31ರವರೆಗೂ ಚಿತ್ರೀಕರಣ ನಿಲ್ಲಿಸಲಾಗಿದೆ’ ಎನ್ನುತ್ತಾರೆ. ಕಿರುತೆರೆಯಲ್ಲಿ ಪ್ರತಿನಿತ್ಯ ಹಲವು ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿರುತ್ತವೆ. ಇಲ್ಲಿ ಹೆಚ್ಚು ದಿನಗಳ ಕಾಲ ಎಪಿಸೋಡ್​ಗಳ ಸಂಗ್ರಹಣೆ ಮಾಡಿಟ್ಟುಕೊಳ್ಳಲು ಸಾಧ್ಯವಿಲ್ಲ. ಚಿತ್ರಕಥೆ ಬದಲಾಗುತ್ತಿರುವುದರಿಂದ ಚಿತ್ರೀಕರಣ ನಿರಂತರವಾಗಿ ನಡೆಯುತ್ತಿರಬೇಕಾಗುತ್ತದೆ. ಈಗ 10 ದಿನಗಳ ಕಾಲ ಚಿತ್ರೀಕರಣ ಮಾಡುವಂತಿಲ್ಲ ಎಂದರೆ, ಎಲ್ಲಾ ಚಾನಲ್​ಗಳು ಸಮಸ್ಯೆ ಎದುರಿಸುವಂತಾಗುತ್ತದೆ.

    ಈ ಕುರಿತು ಮಾತನಾಡುವ ಜೀ ಕನ್ನಡದ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಈಗಾಗಲೇ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣ ನಿಲ್ಲಿಸಲಾಗಿದೆ. ಈ ಸಮಸ್ಯೆಯ ಬಗ್ಗೆ ಅರಿವಿರುವುದರಿಂದ ಕಳೆದ ಕೆಲವು ದಿನಗಳಿಂದಲೇ ಸೂಕ್ತ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೆವು. ಕಡಿಮೆ ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡುತ್ತಿದ್ದೆವು. ಕಿರುತೆರೆಯಲ್ಲಿ ಮುಖ್ಯವಾಗಿ ಯಾರೂ ಹೆಚ್ಚು ಕಂತುಗಳ ಬ್ಯಾಂಕಿಂಗ್ ಇಟ್ಟುಕೊಂಡಿರುವುದಿಲ್ಲ. ವಿಷಯ ಗೊತ್ತಿದ್ದರಿಂದ ಸಾಧ್ಯವಾದಷ್ಟೂ ಬ್ಯಾಂಕಿಂಗ್ ಮಾಡಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಮಾರ್ಚ್ 22ರೊಳಗೆ ಎಷ್ಟು ಸಾಧ್ಯವೋ ಅಷ್ಟು ಚಿತ್ರೀಕರಣ ಮಾಡುತ್ತಿದ್ದೇವೆ. ಆದರೆ, ಅಷ್ಟೊಂದು ಕಂತುಗಳ ಬ್ಯಾಂಕಿಂಗ್ ಸಾಧ್ಯವಾಗದಿದ್ದರೆ ಅನಿವಾರ್ಯವಾಗಿ ಮರುಪ್ರಸಾರ ಮಾಡಬೇಕಾಗುತ್ತದೆ. ಆದರೆ, ದೇಶ ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿರುವಾಗ, ಜವಾಬ್ದಾರಿಯುತ ಚಾನಲ್ ಆಗಿ ಮಾರ್ಚ್ 22ರೊಳಗೆ ಸಾಧ್ಯವಾದಷ್ಟೂ ಬ್ಯಾಂಕಿಂಗ್ ಮಾಡಿಟ್ಟುಕೊಂಡು, ಚಿತ್ರೀಕರಣ ನಿಲ್ಲಿಸಲಿದ್ದೇವೆ’ ಎನ್ನುತ್ತಾರೆ.

    ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳುವಂತೆ, ಯಾವುದೇ ಚಾನಲ್ ನಡೆಯುವುದು ಹೊಸಹೊಸ ಕಂಟೆಂಟ್​ನಿಂದ. ಇಲ್ಲಿ ಪ್ರತಿ ದಿನ ಹೊಸಹೊಸ ವಿಷಯಗಳನ್ನು ಹೇಳುತ್ತಲೇ ಇರಬೇಕು. ಹಾಗಾಗಿ ಸಾಧ್ಯವಾದಷ್ಟು ಹೊಸ ಎಪಿಸೋಡುಗಳ ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದೇವೆ. ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು, ಒಂದೊಂದು ಕಾರ್ಯಕ್ರಮದ ಸ್ಟೇಟಸ್ ಒಂದೊಂದು ರೀತಿ ಇದೆ. ಕೆಲವು ಧಾರಾವಾಹಿಗಳ ಮುಂಗಡ ಕಂತುಗಳಿದ್ದರೆ, ಇನ್ನೂ ಕೆಲವು ಧಾರಾವಾಹಿಗಳದ್ದು ಇಲ್ಲ. ಆಗ ಮರುಪ್ರಸಾರ ಅನಿವಾರ್ಯ. ಪ್ರೇಕ್ಷಕರು ಧಾರಾವಾಹಿ ಮತ್ತು ರಿಯಾಲಿಟಿ ಶೋಗಳನ್ನು ನೋಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ರಿಪೀಟ್ ಶೋಗಳನ್ನು ಹಾಕಿದರೆ ತೊಂದರೆ ಆಗುತ್ತದೆ. ಆದರೆ, ಇದೊಂದು ಜಾಗತಿಕ ಸಮಸ್ಯೆ. ಪ್ರತಿಯೊಬ್ಬರ ಜೀವನಕ್ಕೆ ಸಂಬಂಧಿಸಿದ್ದು. ಇಂಥಾ ಸಂದರ್ಭದಲ್ಲಿ ಬೇರೆ ದಾರಿ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ.

    ನಯನತಾರಾ, ತಮನ್ನಾ ಹಿಂದಿಕ್ಕಿದ ಶ್ರದ್ಧಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts