More

    ಶಿವಸಂಚಾರ ನಾಟಕೋತ್ಸವಕ್ಕೆ ಚಾಲನೆ

    ದಾವಣಗೆರೆ: ಮಾನವರು ತಾಂತ್ರಿಕತೆಯಲ್ಲಿ ಮುಂದುವರಿದಿದ್ದಾರೆ. ಆದರೆ ಸಮಾಜಕ್ಕೆ ಅಗತ್ಯವಾದ ಸಂಸ್ಕೃತಿಯನ್ನು ಮರು ಪ್ರತಿಷ್ಠಾಪಿಸುವಲ್ಲಿ ನಾಟಕಗಳು ಸಹಕಾರಿ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕಕ್ಕರಗೊಳ್ಳ ಪರಮೇಶ್ವರಪ್ಪ ಹೇಳಿದರು.
    ಆವರಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಿವಸಂಚಾರ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಶಿವಸಂಚಾರ ನಾಟಕಗಳು ಸಾಮಾಜಿಕ ಸಂದೇಶವನ್ನು ಬಿತ್ತಲಿವೆ. ಇಂದಿನ ಕಲುಷಿತ ಸಮಾಜದಲ್ಲಿ ಎಲ್ಲರನ್ನೂ ಬೆಸೆಯುವುದು ಕಷ್ಟ. ನಾಟಕೋತ್ಸವಗಳಿಗೆ ಆಹ್ವಾನಿಸುವ ಗ್ರಾಮಸ್ಥರು ಅಲ್ಲಿನ ಜನರಲ್ಲಿ ನಾಟಕ ಅಭಿರುಚಿಯನ್ನು ವೃದ್ಧಿಸಬೇಕು ಎಂದು ಆಶಿಸಿದರು.
    ರಂಗಕರ್ಮಿ ಸಿ.ಜಿ.ಕೃಷ್ಣಮೂರ್ತಿ ಅವರ ಕನಸಿನಂತೆ ಶ್ರೀ ಶಿವಕುಮಾರ ಕಲಾ ಸಂಘವು ಶಿವಸಂಚಾರ ನಾಟಕೋತ್ಸವ ಹೆಸರಲ್ಲಿ 1997ರಿಂದ ವಿವಿಧೆಡೆ ನಾಟಕಗಳ ಪ್ರದರ್ಶನ ಆರಂಭಿಸಿತು. ಕಳೆದ 26 ವರ್ಷದಿಂದ ನಾಟಕೋತ್ಸವ ನಡೆಯುತ್ತಿದೆ. ದೇಶ-ವಿದೇಶಗಳಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಪ್ರದರ್ಶನ ಕಾಣುತ್ತಿದೆ ಎಂದರು.
    ಕಂಜಿರ ಬಾರಿಸುವ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದ ಮಾಜಿ ಮೇಯರ್ ಜಯಮ್ಮ ಗೋಪಿನಾಯ್ಕ ಮಾತನಾಡಿ ಹಳ್ಳಿಗಳಲ್ಲಿ ಮೊದಲೆಲ್ಲ ನಾಟಕಗಳು ಪ್ರದರ್ಶಿತವಾಗುತ್ತಿದ್ದವು. ಜನರೂ ಕೂತು ವೀಕ್ಷಣೆ ಮಾಡುತ್ತಿದ್ದರು. ಜನರು ಟಿವಿ, ಮೊಬೈಲ್ ಬಿಟ್ಟು ಶಿವಸಂಚಾರ ತಂಡದ ಅಪರೂಪದ ನಾಟಕಗಳನ್ನು ನೋಡಬೇಕಿದೆ ಎಂದು ತಿಳಿಸಿದರು.
    ಶಿವಸಂಚಾರ ಜಿಲ್ಲಾ ಸಂಘಟಕ ಆರ್.ಜಿ.ಹಳ್ಳಿ ಸುರೇಂದ್ರ ಮಾತನಾಡಿ 2015ರಿಂದಲೂ ಶಿವಸಂಚಾರ ತಂಡ ಗ್ರಾಮಾಂತರ, ನಗರ ಪ್ರದೇಶಗಳಲ್ಲಿ ಗುಣಾತ್ಮಕ ನಾಟಕಗಳ ಪ್ರದರ್ಶನ ನೀಡುತ್ತ ಬಂದಿದೆ. ಸಮಾಜದಲ್ಲಿ ಇಂದು ಸೃಜನಶೀಲತೆ, ಚಲನಶೀಲತೆ ಮರೆಯಾಗಿದೆ. ಇದನ್ನು ಹೆಚ್ಚಿಸುವ ಅಗತ್ಯವಿದೆ. ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳ ಶ್ರಮಕ್ಕೆ ನಾವು ಧ್ವನಿಯಾಗಿ ಸಹಕರಿಸುತ್ತಿದ್ದೇವೆ ಎಂದು ಹೇಳಿದರು.
    ಬಸವ ಬಳಗದ ಕಾರ್ಯದರ್ಶಿ ವೀಣಾ ಮಂಜುನಾಥ್, ಮುಖಂಡರಾದ ಎಚ್.ಜಿ.ಉಮೇಶ್, ಆವರಗೆರೆ ರುದ್ರಮುನಿ, ಆವರಗೆರೆ ಚಂದ್ರು, ಗೋಪಿನಾಯ್ಕ, ಗುರುಸಿದ್ದಸ್ವಾಮಿ, ಬಾನಪ್ಪ ಇತರರಿದ್ದರು. ನಾಟಕಕಾರ ಜಯಂತ ಕಾಯ್ಕಿಣಿ ರಚಿತ, ಹುಲುಗಪ್ಪ ಕಟ್ಟೀಮನಿ ನಿರ್ದೇಶನದಲ್ಲಿ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶಿತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts