More

    ಶಿವಭಕ್ತರು ಸಿನಿಪ್ರೇಮಿಗಳ ಜಾಗರಣೆ

    ಬೆಂಗಳೂರು: ಶಿವರಾತ್ರಿಯಂದು ಶಿವಭಕ್ತರು ಹಾಗೂ ಸಿನಿಪ್ರೇಮಿಗಳು ಜತೆಯಾಗಿ ಜಾಗರಣೆ ಮಾಡಿದರೆ ಹೇಗಿರಬಹುದು!? ಅದು ಸುಂದರವಾಗೇನೊಇರುತ್ತದೆ. ಆದರೆ ಅಂಥದ್ದೊಂದು ದೃಶ್ಯ ಕಣ್ತುಂಬಿಸಿಕೊಳ್ಳಬೇಕಿದ್ದರೆ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

    ಅದಕ್ಕೆ ಸದ್ಯದ ಉತ್ತರವೆಂದರೆ, ‘..ಕುರುಕ್ಷೇತ್ರ’. ಹಾಗಂತ ಅದಕ್ಕಾಗಿ ಎಲ್ಲೂ ದೂರ ಹೋಗಬೇಕಾಗಿಲ್ಲ. ಏಕೆಂದರೆ ಬೆಂಗಳೂರಿನ ಮತ್ತಿಕೆರೆ ಹಾಗೂ ಲಗ್ಗೆರೆಯಲ್ಲೇ ಈ ಶಿವರಾತ್ರಿಯಂದು ಶಿವಭಕ್ತರು- ಸಿನಿಪ್ರೇಮಿಗಳ ಸಮಾಗಮದ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ‘ವೃಷಭಾದ್ರಿ ಪ್ರೊಡಕ್ಷನ್’ ಬ್ಯಾನರ್​ನಲ್ಲಿ ನಿರ್ಮಾಪಕ ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ ಬಹುತಾರಾಗಣದ ಅದ್ದೂರಿ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ದ ಶತದಿನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಇಂಥದ್ದೊಂದು ಸಮಾಗಮ ಹಮ್ಮಿಕೊಳ್ಳಲಾಗಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಷ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಡ್ಯಾನಿಷ್ ಅಖ್ತರ್, ಶಶಿಕುಮಾರ್, ರವಿಶಂಕರ್, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್ ಸೇರಿ ಇನ್ನೂ ಹಲವಾರು ಖ್ಯಾತ ಕಲಾವಿದರು ಅಭಿನಯಿಸಿರುವ ಈ ಸಿನಿಮಾ ಕೆಲವು ದಿನಗಳ ಹಿಂದೆ ನೂರು ದಿನಗಳ ಪ್ರದರ್ಶನ ಪೂರೈಸಿರುವ ಹಿನ್ನೆಲೆಯಲ್ಲಿ ಮುನಿರತ್ನ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಫೆ. 21ರಂದು ಮತ್ತಿಕೆರೆಯ ಜೆ.ಪಿ. ಪಾರ್ಕ್ ಹಾಗೂ ಲಗ್ಗೆರೆಯ ಡಾ. ವಿಷ್ಣುವರ್ಧನ್ ಆಟದ ಮೈದಾನಗಳಲ್ಲಿ ರಾತ್ರಿಯಿಡೀ ಈ ಕಾರ್ಯಕ್ರಮ ನಡೆಯಲಿದೆ. ಎರಡೂ ಕಡೆಯ ಕಾರ್ಯಕ್ರಮದಲ್ಲಿ ಈ ಸಿನಿಮಾದಲ್ಲಿ ಅಭಿನಯಿಸಿರುವ ತಾರೆಯರು, ಇತರ ಕಲಾವಿದರು, ತಂತ್ರಜ್ಞರು ಉಪಸ್ಥಿತರಿರಲಿದ್ದಾರೆ. ಎರಡೂ ಕಡೆ ವರ್ಣರಂಜಿತ ವೇದಿಕೆಯಲ್ಲಿ ಇರುಳಿಡೀ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲೂ ಜೆ.ಪಿ.ಪಾರ್ಕ್​ನಲ್ಲಿ ಸಂಜೆ 7ರಿಂದ ರಾತ್ರಿ 9ರ ವರೆಗೆ, ವಿಷ್ಣುವರ್ಧನ್ ಆಟದಮೈದಾನದಲ್ಲಿ ರಾತ್ರಿ 9ರಿಂದ 11ರವರೆಗೆ ಈ ಜಾಗರಣೆ ಹಾಗೂ ಶತದಿನೋತ್ಸವದ ಕಾರ್ಯಕ್ರಮಕ್ಕೆ ಸ್ಟಾರ್ ಕಳೆ ಬರಲಿದೆ.

    ಮತ್ತಿಕೆರೆಯ ಜೆ.ಪಿ.ಪಾರ್ಕ್, ಲಗ್ಗೆರೆಯ ವಿಷ್ಣುವರ್ಧನ್ ಆಟದ ಮೈದಾನದಲ್ಲಿ ಶಿವರಾತ್ರಿಯಂದು ಇರುಳಿಡೀ ಜಾಗರಣೆ ಹಾಗೂ ‘..ಕುರುಕ್ಷೇತ್ರ’ ಶತದಿನೋತ್ಸವ ಸಮಾರಂಭ ನಡೆಯಲಿದೆ. ‘..ಕುರುಕ್ಷೇತ್ರ’ ಚಿತ್ರತಂಡದ ನಟ-ನಟಿಯರು ಇಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ 2 ಗಂಟೆ ಪಾಲ್ಗೊಳ್ಳಲಿದ್ದಾರೆ. ದರ್ಶನ್ ಮಾತ್ರ ಎರಡೂ ಕಡೆ ಹಾಜರಿದ್ದು ಜನರೊಂದಿಗೆ ಸಂಭ್ರಮ ಹಂಚಿಕೊಳ್ಳಲಿದ್ದಾರೆ.

    | ಮುನಿರತ್ನ ನಿರ್ಮಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts