More

    ಶಂಭೋ ಶಂಕರನಿಗೆ ನಮೋ ನಮಃ

    ಹುಬ್ಬಳ್ಳಿ: ನಗರದೆಲ್ಲೆಡೆ ಗುರುವಾರ ಶಿವಶಿವ ಎಂದರೆ ಭಯವಿಲ್ಲ.. ಶಿವನಾಮಕೆ ಸಾಟಿ ಬೇರಿಲ್ಲ… ಹಾಡು, ಭಜನೆಗಳು ಕೇಳಿ ಬಂದವು. ಜತೆಗೆ ಓಂ ನಮಃ ಶಿವಾಯ ಮಂತ್ರ ಪಠಿಸಿದರು.

    ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಉಪವಾಸ ಕೈಗೊಂಡು ಬೆಳಗ್ಗೆಯಿಂದಲೇ ಶಿವ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

    ಬಿಲ್ವಪತ್ರೆ, ಹೂವುಗಳಿಂದ ಅಲಂಕೃತ ಶಿವಲಿಂಗಕ್ಕೆ ಭಕ್ತರು ಕ್ಷೀರಾಭಿಷೇಕ ಮಾಡಿದರು. ನಗರದ ಎಲ್ಲ ಕಡೆ ಶಿವ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ತಳಿರು- ತೋರಣ ಹಾಗೂ ಹೂಗಳಿಂದ ಶೃಂಗರಿಸಲಾಗಿದೆ.

    ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಹಾಶಿವರಾತ್ರಿ ಅಂಗವಾಗಿ ಒಂದು ವಾರ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಶಿವರಾತ್ರಿ ದಿನದಂದು ಭಕ್ತರ ದಂಡೇ ಆಗಮಿಸಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಶ್ರೀ ಸಿದ್ಧಾರೂಢರು ಹಾಗೂ ಶ್ರೀ ಗುರುನಾಥರೂಢರ ಗದ್ದುಗೆ ದರ್ಶನ ಪಡೆದ ಭಕ್ತರು ಸಂಜೆಯಿಂದ ಜಾಗರಣೆಯಲ್ಲಿ ಪಾಲ್ಗೊಂಡರು. ಭಜನೆ, ಶಿವನಾಮ ಸ್ಮರಣೆ ನಡೆಯಿತು.

    ಉಣಕಲ್ಲ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆದರು. ಶಿವರಾತ್ರಿ ಮಾರನೇ ದಿನ ಇಲ್ಲಿ ರಥೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ನಿತ್ಯ ಸಂಜೆ ಪ್ರವಚನ, ವಿವಿಧ ಸಂಘಟನೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಉಣಕಲ್ಲನ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ದೇಗುಲದಲ್ಲಿನ ಶಿವಲಿಂಗ ಹಾಗೂ ಚತುಮುಖ ಶಿವಲಿಂಗಕ್ಕೆ ಭಕ್ತರು ಪೂಜೆ ಮಾಡಿ ಹಾಲೆರೆದರು.

    ಗೋಕುಲ ರಸ್ತೆ ಶಿವಪುರ ಕಾಲನಿಯಲ್ಲಿನ ಬೃಹತ್ ಶಿವನ ಮೂರ್ತಿ ಹಾಗೂ ದೇವಾಲಯದಲ್ಲಿ ಮಹಾಶಿವರಾತ್ರಿ ವೈಭವ ಮನೆ ಮಾಡಿತ್ತು. ದೊಡ್ಡ ಮೂರ್ತಿಯ ದರ್ಶನ ಮಾಡಿ ಭಕ್ತರು ಕೃತಾರ್ಥರಾದರು.

    ಸ್ಟೇಶನ್ ರಸ್ತೆ ಈಶ್ವರ ದೇವಸ್ಥಾನ, ಜಯನಗರದ ಶಿವ ದೇವಸ್ಥಾನ, ಪಾರಸವಾಡಿಯ ಕಾಶಿ ವಿಶ್ವನಾಥ ದೇವಸ್ಥಾನ, ನವನಗರದ ಈಶ್ವರ ದೇವಸ್ಥಾನ ಮುಂತಾದೆಡೆಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದರು.

    ವಿದ್ಯಾನಗರ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ರುದ್ರಾಭಿಷೇಕ ನಡೆಯಿತು. ಅನೇಕ ಗಣ್ಯರು, ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಹಣ್ಣು ವಿತರಣೆ: ನಗರದ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸೇವಾ ಬಳಗದ ವತಿಯಿಂದ ಬಿಜೆಪಿ ಮುಖಂಡ ರವಿ ನಾಯಕ ನೇತೃತ್ವದಲ್ಲಿ ಭಕ್ತರಿಗೆ ಬಾಳೆಹಣ್ಣು, ದ್ರಾಕ್ಷಿ ಹಾಗೂ ಖರ್ಜೂರ ವಿತರಣೆ ಮಾಡಲಾಯಿತು.

    ಓಂ ನಮಃ ಶಿವಾಯ ಮಂತ್ರ ಜಪಿಸುತ್ತ ಭಕ್ತರು ಪ್ರಸಾದ ಸ್ವೀಕರಿಸಿದರು. ಮಠದ ಹಿರಿಯ ಭಕ್ತರಾದ ರಾಮಣ್ಣ ಗಾರವಾಡ, ಕಲ್ಪನಾ ರವಿ ನಾಯಕ, ಮಂಜು ಅಬಿಗೇರಿ, ಆಕಾಶ ಗಾರವಾಡ, ದ್ರುವಿ, ಸೇವಾ ಬಳಗದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts