ಹುಬ್ಬಳ್ಳಿ : ಮಹಾಶಿವರಾತ್ರಿ ಅಂಗವಾಗಿ ನಗರದ ವಿವಿಧ ಶಿವ ಮಂದಿರಗಳಲ್ಲಿ ಶುಕ್ರವಾರದಂದು ವಿಶೇಷ ಪೂಜೆ ನೆರವೇರಿತು. ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ, ಶಿವನ ಮೂರ್ತಿಯ ದರ್ಶನ ಪಡೆದರು.
ಶ್ರೀ ಸಿದ್ಧಾರೂಢ ಮಠದಲ್ಲಿ ಧಾರವಾಡ ಜಿಲ್ಲೆಯಷ್ಟೇ ಅಲ್ಲದೇ, ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ, ಶ್ರೀ ಸಿದ್ಧಾರೂಢರ ಹಾಗೂ ಶ್ರೀ ಗುರುನಾಥ ರೂಢರ ಸಮಾದಿಯ ದರ್ಶನ ಪಡೆದುಕೊಂಡರು. ಶ್ರೀ ಮಠಕ್ಕೆ ಭಕ್ತರು ಗುರುವಾರದಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಮಠದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆದವು. ಭಕ್ತರು ಸಾಮೂಹಿಕವಾಗಿ ಓಂ ನಮಃ ಶಿವಾಯ ಮಂತ್ರ ಜಪಿಸಿದರು.
ಉಣಕಲ್ಲನ ಚಂದ್ರಮೌಳೇಶ್ವರ ದೇವಸ್ಥಾನ, ಕೇಶ್ವಾಪುರ ಪಾರಸ್ವಾಡಿಯ ಕಾಶಿ ವಿಶ್ವನಾಥ ದೇವಸ್ಥಾನ, ಸ್ಟೇಶನ್ ರಸ್ತೆಯ ಈಶ್ವರ ದೇವಾಲಯ, ರಾಮಲಿಂಗೇಶ್ವರ ನಗರ, ಶಿವಪುರ ಕಾಲನಿ ಮತ್ತಿತರೆಡೆಯ ಶಿವ ಮಂದಿರಗಳಲ್ಲಿ ಭಕ್ತರು ಸಾಲಾಗಿ ನಿಂತು, ಶಿವನ ಮೂರ್ತಿ ಹಾಗೂ ಈಶ್ವರ ಲಿಂಗುವಿನ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಈಶ್ವರ ಲಿಂಗಕ್ಕೆ ಹಾಲೆರೆದರು.
ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಿರ್ವಿುಸಿದ್ದ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿಯ ಶ್ರೀ ರಾಮೇಶ್ವರ ಶಿವಲಿಂಗದ ದಿವ್ಯ ದರ್ಶನವನ್ನು ಭಕ್ತರು ಪಡೆದರು. ಸಂಜೆ ಶಿವಾರಾಧನೆ ಹೆಸರಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪದಲ್ಲಿ ನೂತನವಾಗಿ ನಿರ್ವಣಗೊಂಡಿರುವ ಶ್ರೀಶಿವಶಕ್ತಿ ಧಾಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
ಶಿವರಾತ್ರಿ ಅಂಗವಾಗಿ ಅನೇಕ ಭಕ್ತರು ಉಪವಾಸ ಮಾಡಿದರು. ದೇವಾಲಯಗಳಲ್ಲಿ ಶಿವನಾಮ ಪಠಣ ನಡೆಯಿತು.