More

    ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ: ನ್ಯಾ. ಮಲ್ಲಿಕಾರ್ಜುನ ಹೇಳಿಕೆ

    ಶಿವಮೊಗ್ಗ: ಪ್ರತಿನಿತ್ಯ ದೈನಂದಿನ ಚಟುವಟಿಕೆಗಳ ಜತೆ108 ಸೂರ್ಯ ನಮಸ್ಕಾರ ಮಾಡಿದರೆ 108(ಆಂಬುಲೆನ್ಸ್)ಕ್ಕೆ ಕರೆ ಮಾಡುವ ಪ್ರಮೇಯವೇ ಬರಲ್ಲ. ಸೂರ್ಯ ನಮಸ್ಕಾರಕ್ಕೆ ಅಷ್ಟೊಂದು ಶಕ್ತಿ ಇದೆ ಎಂದು ಪ್ರಧಾನ ಜಿಲ್ಲಾ ಮತ್ತ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದರು.
    ಡಿಎಆರ್ ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೊರ ರಾಷ್ಟ್ರಗಳು ನಮ್ಮ ಸಂಸ್ಕೃತಿ, ಯೋಗವನ್ನು ಅನುಕರಣೆ ಮಾಡುತ್ತಿವೆ. ಆದರೆ ನಮ್ಮವರು ಮಾತ್ರ ಹೊರ ರಾಷ್ಟ್ರಗಳ ಆಚರಣೆಗಳನ್ನು ಅನುಕರಣೆ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
    ಕ್ರೀಡಾಪಟುಗಳು ತಮ್ಮ ಕ್ರೀಯಾಶೀಲತೆಯನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಕ್ರೀಡಾಕೂಟಗಳು ಸಹಕಾರಿ ಆಗಲಿವೆ. ದೈಹಿಕವಾಗಿ ದಕ್ಷತೆ ಹೊಂದಿರುವುದರ ಜತೆಗೆ ಮಾನಸಿಕವಾಗಿ ಸದೃಢರಾಗಿರಬೇಕು. ಅದು ಕ್ರೀಡೆಗಳಿಂದ ಸಾಧ್ಯವಾಗಲಿದೆ ಎಂದು ಹೇಳಿದರು.
    ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳು ಹಬ್ಬವಿದ್ದಂತೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆ ಮನೋಭಾವ ಮುಖ್ಯವಾಗುತ್ತದೆ. ತಮ್ಮ ದಕ್ಷತೆ ಮತ್ತು ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವ ಇದು ಸೂಕ್ತ ವೇದಿಕೆಯಾಗುತ್ತದೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಒತ್ತಡದಿಂದ ಮುಕ್ತರಾಗಬೇಕು ಎಂದರು.
    ಒಂದೇ ಬ್ಯಾಚ್‌ನಲ್ಲಿ ಕೆಲಸಕ್ಕೆ ಸೇರ್ಪಡೆ ಆಗಿದ್ದು, ಒಂದೇ ಊರಿನವರಾಗಿದ್ದರೂ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರೂ ಕೆಲವೊಮ್ಮೆ ಒಟ್ಟಿಗೆ ಸೇರುವುದು ಮತ್ತು ಕಷ್ಟಸುಖ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅವರಿಗೆ ವರ್ಷಕ್ಕೊಮ್ಮೆ ಆಯೋಜನೆಗೊಳ್ಳುವ ಕ್ರೀಡಾಕೂಟಗಳು ಪರಸ್ಪರ ವಿಚಾರ ವಿನಿಮಯಕ್ಕೆ ಸಹಕಾರಿ ಆಗುತ್ತಿವೆ ಎಂದು ಹೇಳಿದರು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಡಾ. ವಿಕ್ರಂ ಆಮಟೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts