More

    ಕೊಳಚೆ ನೀರು ಶುದ್ಧೀಕರಣ ಘಟಕ ಕಾಮಗಾರಿಗೆ ಈಶ್ವರಪ್ಪ ಚಾಲನೆ

    ಶಿವಮೊಗ್ಗ: ನಗರದ ವಿವಿಧ ಪ್ರದೇಶಗಳಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ತುಂಗಾ ನದಿಗೆ ಹರಿಸುವ ಮೂಲಕ ನದಿ ನೀರು ಮಲಿನ ಆಗುವುದನ್ನು ತಡೆಗಟ್ಟಲು ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ಕೆಆರ್ ವಾಟರ್ಸ್‌ ಸಮೀಪ ನೀರು ಶುದ್ಧೀಕರಣದ 15.15 ಕೋಟಿ ರೂ. ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ಇಮಾಂಬಾಡ, ಮಂಡಕ್ಕಿ ಭಟ್ಟಿ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕೊಲ್ಲೂರಯ್ಯನ ಬೀದಿ, ಭೀಮೇಶ್ವರ ದೇವಸ್ಥಾನ, ಬಿ.ಸಿ.ಎಂ.ಹಾಸ್ಟೆಲ್ ಹಾಗೂ ಬೆಕ್ಕಿನಕಲ್ಮಠದ ಸಮೀಪದಲ್ಲಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸುವ 1.28 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ ಎಂದರು.
    ತ್ಯಾವರೆಚಟ್ನಳ್ಳಿ, ಗುಂಡಪ್ಪಶೆಡ್, ಗುರುಪುರ, ಕಂಟ್ರಿಕ್ಲಬ್, ವಿದ್ಯಾನಗರ, ಕೆಆರ್ ವಾಟರ್‌ವರ್ಕ್ಸ್, ಮಂಡ್ಲಿ ಹಾಗೂ ವಾದಿ-ಎ-ಹುದಾದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಂದು ವರ್ಷದಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಹೇಳಿದರು.
    ನಾಗರಿಕರ ಆಶಯಗಳಿಗೆ ಪೂರಕವಾಗಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ದಿನದ 24 ತಾಸು ನೀರು ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ. ಯುಜಿಡಿ ಕಾಮಗಾರಿ ಪೂರ್ಣವಾಗಿದ್ದು, ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದರು.
    ಒಳಚರಂಡಿ ತ್ಯಾಜ್ಯದಿಂದಾಗಿ ರಾಜ್ಯದ 17 ನದಿಗಳು ನೀರು ಮಲಿನವಾಗುತ್ತಿದೆ. ಇದರಲ್ಲಿ ಶಿವಮೊಗ್ಗ ತುಂಗಾ ನದಿಯೂ ಒಂದಾಗಿದೆ. ಒಳಚರಂಡಿ ವ್ಯವಸ್ಥೆ ಸರಿಪಡಿಸಿ ನೀರು ಶುದ್ದೀಕರಿಸಿದ ಬಳಿಕ ನದಿಗೆ ಬಿಡುವುದೊಂದೇ ಇದಕ್ಕೆ ಪರಿಹಾರವಾಗಿದೆ ಎಂದು ಹೇಳಿದರು.
    ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸೂಡಾ ಅಧ್ಯಕ್ಷ ನಾಗರಾಜ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್‌ಕುಮಾರ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts