More

    ಜ.8, 9ಕ್ಕೆ ಶಿವಮೊಗ್ಗ ರಂಗಾಯಣದಲ್ಲಿ ಹಕ್ಕಿ ಕಥೆ ನಾಟಕ ಪ್ರದರ್ಶನ

    ಶಿವಮೊಗ್ಗ: ಹಿರಿಯ ಸಾಹಿತಿ ನಾ. ಡಿಸೋಜಾ ಅವರ ಕಾದಂಬರಿ ಆಧಾರಿತ ‘ಹಕ್ಕಿ ಕಥೆ’ ಮಕ್ಕಳ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಜ.8ಮತ್ತು 9ರಂದು ಪ್ರದರ್ಶಿಸುವರು ಎಂದು ರಂಗಾಯಣದ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.
    ಸಾಹಿತಿ ಎಸ್.ಮಾಲತಿ ಅವರು ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿದ್ದು, ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.15ರಿಂದ ನಾಟಕ ಆರಂಭವಾಗಲಿದೆ. ನಾಟಕವನ್ನು ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ನಿರ್ದೇಶಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನಟನೆ ಜತೆಗೆ ಮಕ್ಕಳ ಪಪ್ಪೆಟ್ ವಿನ್ಯಾಸ ನಾಟಕದ ವಿಶೇಷತೆಯಾಗಿದೆ. ಮೈಸೂರು ರಂಗಾಯಣ ಬಿಟ್ಟರೆ ರಾಜ್ಯದಲ್ಲಿ ಶಿವಮೊಗ್ಗ ರಂಗಾಯಣ ಈ ಪ್ರಯೋಗ ಮಾಡುತ್ತಿದೆ. ಇದು ಇಲ್ಲಿನ 2ನೇ ರೆಪರ್ಟರಿಯ 2ನೇ ಪ್ರಯೋಗವಾಗಿದೆ ಎಂದರು.
    ಕಾರ್ಖಾನೆಯ ವಿಷದ ಹೊಗೆ, ಡೈನಾಮೇಟ್‌ಗಳ ಸ್ಫೋಟ, ಮುಳುಗಡೆಯ ಪ್ರದೇಶಗಳಿಂದಾಗುವ ಆವಾಂತರ ಹೀಗೆ ಒಂದಾದ ಮೇಲೊಂದು ಅವಘಡಗಳಿಗೆ ಸಿಲುಕಿ ಹಕ್ಕಿಗಳು ಸಾಯುತ್ತವೆ. ಕೊನೆಯಲ್ಲಿ ಮರಗಳ ಕೇಡಿಗೆ ಹೆದರಿ ಮೊಬೈಲ್ ಟವರ್‌ಗಳ ಮೇಲೆ ಗೂಡು ಕಟ್ಟುವ ಸ್ಥಿತಿ, ಮನುಷ್ಯನ ಆಧುನಿಕ ಬದುಕಿನ ಕ್ರೌರ್ಯವನ್ನು ವ್ಯಂಗ್ಯವಾಗಿ ತೋರಿಸುವ ಕಥಾ ವಸ್ತುವನ್ನು ಒಳಗೊಂಡಿದೆ ಎಂದು ಹೇಳಿದರು. ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.
    ಮುಂಗಡವಾಗಿಯೂ ಟಿಕೆಟ್ ಲಭ್ಯ:
    ರಂಗಸಮಾಜದ ಸದಸ್ಯ ಹಾಲಸ್ವಾಮಿ ಮಾತನಾಡಿ, ಕರೊನಾ ಹಿನ್ನಲೆಯಲ್ಲಿ ಪ್ರೇಕ್ಷಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿದೆ. ಟಿಕೆಟ್‌ಗಳನ್ನು ಮುಂಗಡವಾಗಿ ನೀಡಲಾಗುವುದು. ಟಿಕೆಟ್ ಒಂದಕ್ಕೆ 20 ರೂ. ನಿಗದಿ ಮಾಡಿದ್ದು ಕೇವಲ 250 ಜನರಿಗೆ ಅವಕಾಶ ಕಲ್ಪಿಸಲಾಗುವುದು. ಟಿಕೆಟ್‌ಗಳು ಶಿವಮೊಗ್ಗ ರಂಗಾಯಣದ ಕಚೇರಿ(08182-256353)ಅಥವಾ ರಂಗಾಯಣದ ವೆಬ್‌ಸೈಟ್ www.rangayanashivamogga.orgನಲ್ಲಿ ದೊರೆಯಲಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts