More

    ಸಾಗರದ ಯುವಕ ಕುವೈತ್‌ನಲ್ಲಿ ಅನುಮಾಸ್ಪದ ಸಾವು: ತನಿಖೆಗೆ ಕುಟುಂಬಸ್ಥರ ಆಗ್ರಹ

    ಶಿವಮೊಗ್ಗ: ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮದ ಹಾಸಿಂ ಫರೀದ್ ಸಾಬ್ (28) ಕುವೈತ್‌ನಲ್ಲಿ ಇತ್ತೀಚೆಗೆ ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ತನಿಖೆ ನಡೆಸುವಂತೆ ಸಾಗರ ಗ್ರಾಮಾಂತರ ಠಾಣೆ ಮುಖಾಂತರ ಭಾರತೀಯ ರಾಯಭಾರಿ ಕಚೇರಿಗೆ ದೂರು ನೀಡಿದ್ದಾರೆ.

    ತಾಳಗುಪ್ಪ ಸಮೀಪದ ಚೂರಿಕಟ್ಟೆಯ ಹಾಸಿಂ ಎರಡು ವರ್ಷದ ಹಿಂದೆ ಉದ್ಯೋಗದ ನಿಮಿತ್ತ ಕುವೈತ್‌ಗೆ ತೆರೆಳಿದ್ದ. ಮಹಬೂಲ ಪ್ರದೇಶದ ಆರ್ಡರ್ ಸರ್ವಿಸ್ ಫಾರ್ ಲಾಜಿಸ್ಟಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ಕಳೆದ ಡಿ.25ರಂದೇ ಮೃತಪಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಘಟನೆ ವಿವರ:
    ಕುವೈತ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಹಾಸಿಂ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದ ಎನ್ನಲಾಗಿದೆ. ಅದೇ ಕಂಪೆನಿಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲೂ ಈ ವಿಚಾರ ಹರಿದಾಡಿತ್ತು. ಅಲ್ಲದೆ ಹಾಸಿಂ ಮೃತಪಟ್ಟ ದಿನವೇ ಕಂಪನಿ ಅಧಿಕಾರಿಯೊಬ್ಬರು ಕುಟುಂಬದ ಸದಸ್ಯರಿಗೆ ಕರೆ ಮಾಡಿ ಹಾಸಿಂ ಸಮುದ್ರದಲ್ಲಿ ಆತ್ಮಹತ್ಯೆ ಮಾಡಿದ್ದಾರೆಂಬ ಮಾಹಿತಿ ರವಾನಿಸಿದ್ದರು. ಈ ವಿಚಾರವನ್ನು ಸಂಬಂಧಿಕರು ತಕ್ಷಣವೇ ಕುವೈತ್‌ನಲ್ಲಿರುವ ಹಾಸಿಂನ ಸ್ನೇಹಿತರ ಗಮನಕ್ಕೆ ತಂದಿದ್ದರು.

    ಸ್ನೇಹಿತರು ಹಾಸಿಂ ತಂಗಿದ್ದ ಕೊಠಡಿ ಪರಿಶೀಲಿಸಿದಾಗ ಹಾಸಿಗೆ ಮೇಲೆ ರಕ್ತದ ಕಲೆಗಳು ಪತ್ತೆಯಾಗಿತ್ತು. ಈ ಬಗ್ಗೆ ಅನುಮಾನಗೊಂಡು ಹಾಸಿಂ ಸಾವು ಸಂಶಯಾಸ್ಪದವಾಗಿದೆ ಎಂದು ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಮೃತನ ಕುಟುಂಬವು ಡಿ.28ರಂದು ಕುವೈಟ್‌ನ ಭಾರತೀಯ ರಾಯಭಾರಿ ಕಚೇರಿಗೆ ಮರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಮೃತದೇಹವನ್ನು ಸ್ವದೇಶಕ್ಕೆ ಕಳಿಸುವಂತೆ ಇಮೇಲ್ ಮೂಲಕ ಮನವಿ ಮಾಡಿತ್ತು.

    ಮರುದಿನ (ಡಿ.29) ಚೂರಿಕಟ್ಟೆಯ ಕುಟುಂಬಸ್ಥರು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆ, ಶಿವಮೊಗ್ಗ ಡಿಸಿ ಕಚೇರಿ ಮೂಲಕ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಹಾಸಿಂ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕುವೈತ್‌ನಲ್ಲಿಯೇ ಅದರ ತನಿಖೆ ನಡೆಸಲು ಅಲ್ಲಿನ ಭಾರತದ ರಾಯಭಾರಿ ಕಚೇರಿಗೆ ಮನವಿ ಮಾಡಲು ಪತ್ರದ ಮೂಲಕ ಕೇಳಿಕೊಂಡಿದ್ದರು.

    ಜ.4ರಂದು ಕುಟುಂಬಸ್ಥರು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸ್ವತಃ ತೆರಳಿ ಮನವಿ ಕುರಿತು ಪರಿಶೀಲಿಸಿದಾಗ ಮನವಿ ತಲುಪಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ಮನವಿ ಇಲ್ಲದೇ ರಾಜ್ಯ ಸರ್ಕಾರದಿಂದ ಮುಂದಿನ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಮುಂದಿನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts