More

    ಸಮಾಜಮುಖಿ ಕಾರ್ಯಗಳಿಂದ ಮಾತ್ರ ಜೀವನ ಸಾರ್ಥಕ

    ಶಿವಮೊಗ್ಗ: ಪ್ರತಿಯೊಬ್ಬನ ಬದುಕಿನಲ್ಲಿ ಜನನ-ಮರಣ ಎಂಬುದು ಸಹಜ ಪ್ರಕ್ರಿಯೆ. ಬದುಕಿದ್ದಾಗ ಮಾಡಿದ ಪುಣ್ಯ ಮತ್ತು ಸೇವಾ ಕಾರ್ಯಗಳು ಸತ್ತ ಬಳಿಕವೂ ಸಮಾಜ ನಮ್ಮನ್ನು ಸ್ಮರಿಸುವಂತೆ ಮಾಡುತ್ತದೆ. ಆಗ ಮಾತ್ರ ಜೀವನ ಸಾರ್ಥಕ ಎಂದು ಕರ್ಕಿ ಜ್ಞಾನೇಶ್ವರಿ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
    ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಭಾನುವಾರ ದೈವಜ್ಞ ಹೆಲ್ಪ್‌ಲೈನ್‌ನ 20ನೇ ವಾರ್ಷಿಕೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಹಿರಿಯ ದಂಪತಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರಾಣಿ-ಪಕ್ಷಿಗಳೂ ಬದುಕುತ್ತವೆ. ಹಾಗೆಯೇ ಒಂದು ದಿನ ಯಾರಿಗೂ ಗೊತ್ತಾಗದಂತೆ ಸಾಯುತ್ತವೆ. ಮನುಷ್ಯನ ಜೀವನ ಹಾಗಾಗಬಾರದು ಎಂದರು.
    ಸಮಾಜದಲ್ಲಿ ಕೆಲವರು ಇದ್ದೂ ಸತ್ತಂತೆ ಬದುಕಿರುತ್ತಾರೆ. ಯಾವುದೇ ಜನಪರ, ಸಮಾಜಪರ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳದೆ, ತಮ್ಮ ಅಸ್ತಿತ್ವವನ್ನೇ ಗುರುತಿಸಿಕೊಳ್ಳದೆ ಒಂದು ದಿನ ಮರೆಯಾಗುತ್ತಾರೆ. ವ್ಯಕ್ತಿ ಬದುಕಿದ್ದಾಗ ಮಾಡಿದ ಸಮಾಜಮುಖಿ ಕಾರ್ಯಗಳನ್ನು ಸತ್ತ ನಂತರವೂ ಜನರು ಗುರುತಿಸಬೇಕು. ನಮ್ಮ ತತ್ವ, ಆದರ್ಶಗಳು ಈ ಸಮಾಜ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.
    ವಿದ್ಯೆ ಜತೆಗೆ ಸಂಸ್ಕಾರ ಬಹಳ ಮುಖ್ಯ. ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರವೂ ಬಹಳ ಮುಖ್ಯ. ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಮರೆಯಾಗುತ್ತಿದೆ. ದೇಶದ ಸಂಸ್ಕೃತಿ ಮತ್ತು ಸಂಪ್ರದಾಯ ಶ್ರೇಷ್ಠವಾಗಿರುವುದರಿಂದಲೇ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ಮತ್ತು ಗೌರವ ಇದೆ. ಆದರೆ ಕೆಲವರು ದುಶ್ಚಟಗಳಿಗೆ ದಾಸರಾಗಿ ಹಾಗೂ ವಿದೇಶಿ ಸಂಸ್ಕೃತಿ ಅನುಕರಣೆಯಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆ ಬರುತ್ತಿದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.
    ದೈವಜ್ಞ ಹೆಲ್ಪ್‌ಲೈನ್ ಅಧ್ಯಕ್ಷ ನಾಗರಾಜ್ ಎಸ್.ಆರ್.ಶೇಟ್ ಅಧ್ಯಕ್ಷತೆ ವಹಿಸಿದ್ದರು. ಅದಕ್ಕೂ ಮುನ್ನ ಮಹಿಳೆಯರಿಂದ ಲಲತಾಸಹಸ್ರನಾಮ ಪಠಣ, ಸಮಾಜದ ಪುರುಷ ಮತ್ತು ಮಹಿಳೆಯರಿಂದ ಜ್ಞಾನೇಶ್ವರಿ ದೇವಿಗೆ ಪುಷ್ಪಾರ್ಚನೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts