More

    ಶಿವಮೊಗ್ಗ ಹೈವೇಗೆ ಬಲ ತುಂಬಿದ ಬಿವೈಆರ್ ದೆಹಲಿ ಭೇಟಿ

    ಶಿವಮೊಗ್ಗ: ನಗರದ ಉತ್ತರ ಭಾಗದಲ್ಲಿ ಬಾಕಿ ಉಳಿದಿರುವ 15 ಕಿಮೀ ಬೈಪಾಸ್ ರಸ್ತೆ ನಿರ್ಮಾಣ ಹಾಗೂ 1,012 ಕೋಟಿ ರೂ. ಮೊತ್ತದಲ್ಲಿ ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766(ಸಿ)ನಿರ್ಮಾಣಕ್ಕೆ ಮಂಜೂರಾತಿ ನೀಡಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ.
    ದೆಹಲಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಶಿವಮೊಗ್ಗ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ವಿವಿಧ ಹಂತಗಳಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು ಅದಕ್ಕೆ ಅಗತ್ಯ ಅನುದಾನ ಬಿಡುಗಡೆಗೆ ಸಚಿವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಬಿವೈಆರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಶಿವಮೊಗ್ಗ ನಗರದ ಉತ್ತರ ಭಾಗದ ಬಾಕಿ ಉಳಿದ 15 ಕಿಮೀ ಉದ್ದದ ಬೈಪಾಸ್ ರಸ್ತೆಗೆ ಮಂಜೂರಾತಿ ನೀಡಿರುವುದರಿಂದ ಶಿವಮೊಗ್ಗ ನಗರಕ್ಕೆ 34 ಕಿಮೀ ಉದ್ದದ ರಿಂಗ್ ರಸ್ತೆ ಪೂರ್ಣಗೊಳಿಸಲು ಅನುಕೂಲವಾಗಲಿದೆ.
    ಕರಾವಳಿಯ ಬೈಂದೂರಿನಿಂದ ಕೊಲ್ಲೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಮಾಸೂರು, ರಟ್ಟೆಹಳ್ಳಿ ಮೂಲಕ ರಾಣೆಬೆನ್ನೂರಿಗೆ ಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ಅಗಲೀಕರಣ ಹಾಗೂ ಅಭಿವೃದ್ಧಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ 7 ಕಿರು ಸೇತುವೆ ಹಾಗೂ 27.70 ಕಿ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ 238.70 ಕೋಟಿ ರೂ. ಮಂಜೂರಾತಿ ದೊರೆತಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ.
    ಶಿಕಾರಿಪುರ ಪಟ್ಟಣಕ್ಕೆ 6.576 ಕಿಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣ ಮಾಡಲು 66.44 ಕೋಟಿ ಮೊತ್ತದ ಡಿಪಿಆರ್ ಹಾಗೂ ಹೊಸನಗರ ಮಾವಿನಕೊಪ್ಪ ವೃತ್ತದಿಂದ ಹೊಸನಗರ ಬೈಪಾಸ್, ಶರಾವತಿ ಹಿನ್ನೀರಿಗೆ 1.54 ಕಿಮೀ ಮತ್ತು 0.72 ಕಿ.ಮೀ ಉದ್ದದ 2 ಭಾರೀ ಸೇತುವೆಗಳ ನಿರ್ಮಾಣದೊಂದಿಗೆ ಆಡುಗೋಡಿವರೆಗೆ 13.82 ಕಿ.ಮೀ ಉದ್ದದ ಬದಲೀ ರಸ್ತೆ ನಿರ್ಮಾಣ ಮಾಡಲು 313.56 ಕೋಟಿ ರೂ. ಡಿಪಿಆರ್‌ಗೆ ಮಂಜೂರಾತಿ ನೀಡಲಾಗಿದೆ ಎಂದಿದ್ದಾರೆ.
    ಭೇಟಿಯ ಪ್ರಮುಖ ಅಂಶಗಳು
    ಒಟ್ಟು ನಾಲ್ಕು ರಸ್ತೆಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ- ಹೊನ್ನಾಳಿ- ಮಲೆಬೆನ್ನೂರು- ಹರಿಹರ- ಹರಪನಹಳ್ಳಿ-ಮರಿಯಮ್ಮನಹಳ್ಳಿ ರಸ್ತೆ, ಶಿವಮೊಗ್ಗ-ಶಿಕಾರಿಪುರ-ಶಿರಾಳಕೊಪ್ಪ-ಹಾನಗಲ್-ತಡಸ ರಸ್ತೆ, ಆಯನೂರು-ರಿಪ್ಪನ್ ಪೇಟೆ- ಹುಂಚ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ ರಸ್ತೆ ಹಾಗೂ ಸಾಗರ-ಸೊರಬ-ಶಿರಾಳಕೊಪ್ಪ- ಆನವಟ್ಟಿ ರಸ್ತೆಗಳ ಅನುಕೂಲವಾಗಲಿದೆ ಎಂದು ಬಿವೈಆರ್ ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts