More

    ಸೋಲಿನ ಭೀತಿಯಿಂದ ಸಿದ್ದು ಕ್ಷೇತ್ರ ಬದಲಾವಣೆ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಪ್ರತಿ ಚುನಾವಣೆಯಲ್ಲೂ ಕ್ಷೇತ್ರ ಬದಲಾವಣೆ ಮಾಡುತ್ತಾರೆ. ಒಂದೇ ಕಡೆ ಸ್ಪರ್ಧಿಸಿದರೆ ಮತದಾರರು ಎರಡನೇ ಬಾರಿ ಗೆಲ್ಲಿಸುವುದಿಲ್ಲ ಎಂಬ ವಾಸ್ತವ ಅವರಿಗೆ ಅರಿವಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
    ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಸೋತ ಮಾತ್ರಕ್ಕೆ ಕ್ಷೇತ್ರವನ್ನೇ ಬದಲಾಯಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ನಾನೂ ಶಿವಮೊಗ್ಗ ಕ್ಷೇತ್ರದಲ್ಲಿ ಚುನಾವಣೆ ಸೋತಿದ್ದೆ. ಹಾಗೆಂದ ಮಾತ್ರಕ್ಕೆ ಕ್ಷೇತ್ರದಿಂದ ಪಲಾಯನ ಮಾಡಲಿಲ್ಲ. ಇಲ್ಲಿನ ಮತದಾರರು, ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಿ ಮತ್ತೆ ಗೆಲುವು ಸಾಧಿಸಿದ್ದೇನೆ ಎಂದರು.
    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಣವೂ ಬಿಜೆಪಿ ಸೇರಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಬದುಕಿದ್ದಾಗಲೇ ನಾವು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಇನ್ನು ಅವರ ಹೆಣ ತೆಗೆದುಕೊಂಡು ಮಾಡುವುದಾದರೂ ಏನು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
    ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಪಕ್ಷ ಸಂಘಟನೆಗಾಗಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯಾದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ಅವರನ್ನು ಸಿದ್ದರಾಮಯ್ಯ ಬಫೂನ್ ಎಂದು ಟೀಕಿಸಿದ್ದಾರೆ. ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಇಂತಹ ಕ್ಷುಲ್ಲಕ ಹೇಳಿಕೆ ನೀಡುವುದನ್ನು ಸಿದ್ದರಾಮಯ್ಯ ನಿಲ್ಲಿಸದೇ ಹೋದರೆ ಅವರದೇ ದಾಟಿಯಲ್ಲಿ ನಾವು ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.
    ಯಾವುದೇ ಪಕ್ಷದಲ್ಲಿ ಒಂದು ವ್ಯವಸ್ಥೆ ಎಂಬುದು ಇರುವುದು ಒಳ್ಳೆಯದು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಾನೇ ಕೋಲಾರಕ್ಕೆ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಾರೆ. ಜೆಡಿಎಸ್‌ನಲ್ಲಿ ಭವಾನಿ ರೇವಣ್ಣ ನಾನು ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಎರಡೂ ಪಕ್ಷಗಳಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಾಯಕತ್ವ ಇಲ್ಲದಂತಾಗಿದೆ. ಶಕುನಿಗಳಿಂದ ನಮ್ಮ ಕುಟುಂದಲ್ಲಿ ಬಿರುಕು ಮೂಡಿಸುವ ಯತ್ನ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರ ಪಕ್ಷದಲ್ಲಿ ಶಕುನಿಗಳು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts