More

    ಭಕ್ತರಿಂದ ಶಿವಕುಮಾರಸ್ವಾಮಿಗಳ ಸಂಸ್ಮರಣೆ ; ಭಾವಚಿತ್ರಕ್ಕೆ ಪುಷ್ಪಾರ್ಚನೆ

    ಕೋಲಾರ : ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಬೆಳೆಗಿ ಹೋಗಿರುವ ನಂದಾದೀಪ ಜಗತ್ತಿಗೆ ಬೆಳಕು ನೀಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜು ಹೇಳಿದರು.

    ನಗರದ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಗುರುವಾರ ಶ್ರೀಗಳ ಅಭಿಮಾನಿಗಳು ಹಮ್ಮಿಕೊಂಡಿದ್ದ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಗಳು ತಮ್ಮ ಬದುಕನ್ನು ಬಡವರಿಗೆ ಮೀಸಲಿಟ್ಟು ಅಮರರಾಗಿದ್ದಾರೆ ಎಂದರು. ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯೆ, ಅನ್ನ, ಆಶ್ರಯ ನೀಡಿ ಬದುಕಿಗೆ ದಾರಿ ತೋರಿದ್ದಾರೆ, ಬಸವ ತತ್ವಗಳನ್ನು ವಿಶ್ವಕ್ಕೆ ಸಾರಿದ್ದಾರೆ. ಮಠ ಮಾನ್ಯಗಳ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠ ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ಬೆಳೆಸಿದ್ದಾರೆ ಎಂದರು.

    ಕೇಂದ್ರ ಸರ್ಕಾರ ಶ್ರೀಗಳ ಸೇವೆಗೆ ತಕ್ಕ ಗೌರವ ಸಮರ್ಪಣೆ ಮಾಡಬೇಕು, ರಾಜ್ಯ ಸರ್ಕಾರ ಶ್ರೀಗಳ ಹೆಸರಲ್ಲಿ ಘೋಷಿಸಿರುವ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಶ್ರೀಗಳಿಂದ ನಮ್ಮ ರಾಜ್ಯದ ಕೀರ್ತಿ ಹೆಚ್ಚಿದೆ, ಬಡವರಿಗಾಗಿ ಅವರು ನೀಡಿರುವ ಸೇವೆ ಅವಿಸ್ಮರಣೀಯ, ಲಕ್ಷಾಂತರ ಬಡ ಮಕ್ಕಳು ಶ್ರೀಗಳ ನೆರಳಲ್ಲಿ ಶಿಕ್ಷಣ ಪಡೆದು ದೇಶಕ್ಕೆ, ರಾಜ್ಯಕ್ಕೆ ಮಾತ್ರವಲ್ಲದೆ ವಿಶ್ವಾದ್ಯಂತ ನೆಲೆಸಿ ಸಮಾಜ ಸೇವೆಯಲ್ಲಿ ತೊಡಗಿರುವುದು ಸಿದ್ಧಗಂಗ ಮಠದ ಹಿರಿಮೆ ಮತ್ತು ಗಿರಿಮೆ ಎಂದರು.

    ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಕಸಾಪ ನಗರ ಘಟಕ ಅಧ್ಯಕ್ಷ ಬಿ. ಶಿವಕುಮಾರ್, ತಾಲೂಕು ಗೌರವ ಸಂಚಾಲಕ ಕೆ.ಎನ್.ಪರಮೇಶ್ವರನ್, ಪತ್ರಿಕಾ ಕಾರ್ಯದರ್ಶಿ ಸಚ್ಚಿದಾನಂದ, ಕನ್ನಡ ಸಿರಿ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸುಬ್ಬರಾಮಯ್ಯ, ರಾಜ್ಯ ಜ್ಞಾನ ವಿಜ್ಞಾನ ಪರಿಷತ್ ಜಿಲ್ಲಾ ಸಂಚಾಲಕ ಡಾ.ಶರಣಪ್ಪ ಗಬ್ಬೂರು, ಕನ್ನಡ ಹೋರಾಟಗಾರ ಚಂಚೆ ರಾಜೇಶ್, ಸರ್ಕಾರಿ ನೂತನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರಪ್ಪ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲ್ಲಕಾಂತ ಮಠ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ನಂದೀಶ್, ಶ್ರೀಮತಿ ಪಾರ್ವತಮ್ಮ ಬಿ.ಆರ್.ಮುನಿಯಪ್ಪ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ಬಿ.ಉಮೇಶ್, ಬಿ.ಎಂ.ಶಿವಕುಮಾರ್ ಹಾಗೂ ಕಂಜನೇತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts