ಹೊಸದುರ್ಗ: ಬಸವಣ್ಣನ ಕಾಯಕ ಹಾಗೂ ದಾಸೋಹ ಸಿದ್ಧಾಂತಗಳನ್ನು ಪಾಲಿಸುವ ಮೂಲಕ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಮಾಜಕ್ಕೆ ಆದರ್ಶ ಗುರುವಾಗಿದ್ದಾರೆ ಎಂದು ಹುಣಸಘಟ್ಟದ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪಶು ಚಿಕಿತ್ಸಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅನ್ನ, ಅರಿವು, ಆಶ್ರಯ ಒಳಗೊಂಡ ತ್ರಿವಿಧ ದಾಸೋಹದ ಮೂಲಕ ಶ್ರೀಗಳು ಸಮಾಜದ ಪರಿವರ್ತನೆ ಕಾರಣರಾಗಿದ್ದಾರೆ. ತಮ್ಮ ಬದುಕನ್ನೇ ಸಮಾಜಕ್ಕೆ ಸಮರ್ಪಿಸಿದ ಅವರು, ಇತಿಹಾಸ ಕಂಡ ಶ್ರೇಷ್ಠ ಸಂತ ಸಾಧಕರಾಗಿದ್ದಾರೆ. ಅವರು ಭೌತಿಕವಾಗಿ ನಮ್ಮಿಂದ ಮರೆಯಾಗಿದ್ದರೂ ಚೈತನ್ಯ ಸ್ವರೂಪರಾಗಿ ಎಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಸಿದ್ಧಗಂಗಾ ಶ್ರೀಗಳಂತಹ ಮಹಾಚೇತನವನ್ನು ನಿರಂತರವಾಗಿ ಸ್ಮರಿಸುವ ಮೂಲಕ ಹೊಸದುರ್ಗದ ಜನರು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಕೆಲಸ ಮಾಡಿರುವುದು ಸಂತಸ ತಂದಿದೆ. ಸಮಾಜಕ್ಕೆ ಬೆಳಕು ನೀಡುವ ಶಕ್ತಿ ಹೊಂದಿರುವ ಇಂತಹ ಗುರುವಿನ ಅಗತ್ಯ ಇದೆ. ಉಚಿತ ಪ್ರಸಾದ ನಿಲಯ, ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಸಮಾಜಕ್ಕೆ ಒದಗಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.
ಶ್ರೀಗಳ ಅದರ್ಶವನ್ನು ಬದುಕಿನಲ್ಲಿ ರೂಢಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಜೀವನದ ಹಾದಿಯಲ್ಲಿ ಪರೋಪಕಾರ ಕಾರ್ಯಗಳ ಮೂಲಕ ಸಮಾಜದಲ್ಲಿ ಹಿಂದುಳಿದವರ ಸೇವೆಗೆ ಪ್ರತಿಯೊಬ್ಬರೂ ಸಂಕಲ್ಪಿಸಬೇಕು ಎಂದರು.
ವಿವೇಕಾನಂದ ಬಳಗದ ಅಧ್ಯಕ್ಷ ಕುಮಾರಪ್ಪ, ಪುರಸಭಾ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಕೆ.ಆರ್.ಪ್ರವೀಣ್, ಯುವ ಉದ್ಯಮಿ ನಿಜಲಿಂಗಪ್ಪ, ಎಂಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ರೈತ ಸಂಘದ ಕಾರ್ಯಾಧ್ಯಕ್ಷ ಮಹೇಶ್ವರಪ್ಪ ಮತ್ತಿತರಿದ್ದರು.
ಭಾವಚಿತ್ರಕ್ಕೆ ಸಹಸ್ರ ಬಿಲ್ವಾರ್ಚನೆ: ಬುಧವಾರ ಮುಂಜಾನೆ ವಿಶೇಷವಾಗಿ ಅಲಂಕರಿಸಲಾಗಿದ್ದ ಶ್ರೀಗಳ ಭಾವಚಿತ್ರಕ್ಕೆ ಸಹಸ್ರ ಬಿಲ್ವಾರ್ಚನೆ ನೆರವೇರಿತು. ಭಕ್ತ ಸಮುದಾಯಕ್ಕೆ ಶ್ರೀ ಗುರುಮೂರ್ತಿಸ್ವಾಮೀಜಿ, ರುದ್ರಾಕ್ಷಿ ದೀಕ್ಷೆ ನೀಡಿ ಆಶಿರ್ವದಿಸಿದರು. ಹೊಸದುರ್ಗ ಸಾಂಸ್ಕೃತಿಕ ವೇದಿಕೆ ಸದಸ್ಯರು ವಚನ ಸಂಗೀತ ಹಾಡಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.