More

    ಶಿರಾಡಿ ಸುರಂಗ ಮತ್ತೆ ಮುನ್ನೆಲೆಗೆ, 12 ಸಾವಿರ ಕೋಟಿ ರೂ. ಮೊತ್ತದ ಪ್ರಸ್ತಾವನೆ ಸಲ್ಲಿಕೆ

    – ಭರತ್ ಶೆಟ್ಟಿಗಾರ್, ಮಂಗಳೂರು

    ಹಿಮಾಚಲ ಪ್ರದೇಶದ ರೋಹ್ಟಾಂಗ್‌ನಲ್ಲಿ ವಿಶ್ವದ ಅತಿ ಉದ್ದದ ‘ಅಟಲ್ ಟನಲ್’ ಉದ್ಘಾಟನೆಗೊಂಡ ಬೆನ್ನಲ್ಲೇ, ದ.ಕ.ಜಿಲ್ಲೆಯಲ್ಲೂ ಉದ್ದೇಶಿತ ಶಿರಾಡಿ ಸುರಂಗ ನಿರ್ಮಾಣ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೊಂದೆಡೆ, ಪರಿಸರ ಹೋರಾಟಗಾರ ಕೆಂಗಣ್ಣಿಗೂ ಗುರಿಯಾಗಿದೆ.ಮಂಗಳೂರು-ಬೆಂಗಳೂರು ಸಂಪರ್ಕಿಸುವ

    ರಾ.ಹೆ.75ರ ಶಿರಾಡಿ ಘಾಟಿ ಸಂಚಾರಕ್ಕೆ ಪರ್ಯಾಯವಾಗಿರುವ ಯೋಜನೆ ಈ ಸುರಂಗಮಾರ್ಗ. ಪಶ್ಚಿಮಘಟ್ಟವನ್ನು ಶಿರಾಡಿಯ ಅಡ್ಡಹೊಳೆಯಿಂದ ಕೊರೆಯುತ್ತಾ ಹಾಸನ ಜಿಲ್ಲೆಯ ಮಾರನಹಳ್ಳಿಯಲ್ಲಿ ಹೊರಕ್ಕೆ ಬರುವ ಮೂಲಕ ಸುಮಾರು 23.4 ಕಿ.ಮೀ.ಉದ್ದದ ಸುರಂಗ ನಿರ್ಮಾಣ ಈ ಯೋಜನೆಯ ಉದ್ದೇಶ. 12 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

    ಘಟ್ಟಕ್ಕೆ ಹೊಡೆತ ಬೇಕೇ?: ಹಿಮಾಚಲ ಪ್ರದೇಶದಲ್ಲಿ ಟನಲ್ ನಿರ್ಮಿಸಲಾಗಿದೆ ಎಂದು ಪಶ್ಚಿಮ ಘಟ್ಟದಲ್ಲೂ ಸುರಂಗ ಸರಿಯೇ? ನಾವು ಯೋಜನೆಗೆ ವಿರೋಧಿಗಳಲ್ಲ, ಆದರೆ ಮೊದಲು ಪಶ್ಚಿಮಘಟ್ಟಕ್ಕೆ ಅಂತಹ ಧಾರಣಾ ಸಾಮರ್ಥ್ಯ ಇದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಬೇಕು ಎನ್ನುತ್ತಾರೆ ಪರಿಸರ ಹೋರಾಟಗಾರರು. ಬೆಂಗಳೂರು-ಮಂಗಳೂರು ರೈಲು ಮಾರ್ಗ, ರಾ.ಹೆ, ಗುಂಡ್ಯದಲ್ಲಿ ಜಲವಿದ್ಯುತ ಸ್ಥಾವರ, ಗುಂಡ್ಯ ಬಿ.ಸಿ.ರೋಡ್ ಹೆದ್ದಾರಿ ಮೊದಲಾದ ಕಾಮಗಾರಿ ಜತೆಗೆ ಅತಿಮುಖ್ಯವಾದ ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮ ಘಟ್ಟದ ವಿವಿಧ ಬೆಟ್ಟಗಳಿಗೆ ಹಲವು ಬಾರಿ ಹೊಡೆತ ನೀಡಲಾಗಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಅದರ ಪರಿಣಾಮವನ್ನೂ ಕಾಣಬಹುದು. ಸುರಂಗ ಕೊರೆಯುವುದು ಪಶ್ಚಿಮಘಟ್ಟಕ್ಕೆ ನೀಡುವ ಮತ್ತೊಂದು ದೊಡ್ಡ ಮಟ್ಟದ ಆಘಾತ. ನೇತ್ರಾವತಿಯ ಮೂಲವಾಗಿರುವ ಕೆಂಪುಹೊಳೆ ಭವಿಷ್ಯದಲ್ಲಿ ಬರಿದಾಗುವ ಲಕ್ಷಣಗಳಿವೆ. ಇದು ಪಶ್ಚಿಮಘಟ್ಟದ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಗೂ ಮಾರಕ ಎಂದು ಪರಿಸರ ಹೋರಾಟಗಾರರು ಸರ್ಕಾರವನ್ನು ಎಚ್ಚರಿಸಿದ್ದಾರೆ.

    ಸುರಂಗ ಮಾರ್ಗ ಯಾಕೆ? ಏನು ಲಾಭ?: ಬೆಂಗಳೂರಿನಿಂದ ಚೆನ್ನೈ ಹಾಗೂ ಮಂಗಳೂರು ಸಮಾನ ದೂರದಲ್ಲಿದ್ದರೂ, ಅಲ್ಲಿನ ಉದ್ಯಮಿಗಳು ತಮ್ಮ ಸರಕನ್ನು ರಫ್ತು ಮಾಡಲು ಮಂಗಳೂರು ಬದಲು ಚೆನ್ನೈಯನ್ನೇ ಅವಲಂಬಿಸಿದ್ದಾರೆ. ಮಂಗಳೂರು-ಬೆಂಗಳೂರು ನಡುವಿನ ಘಾಟಿ ರಸ್ತೆಯಲ್ಲಿ 11 ತಿರುವುಗಳಿದ್ದು, ಭಾರಿ ವಾಹನ ಸಂಚಾರ ತ್ರಾಸದಾಯಕ. ಇದು ರಾಜ್ಯದ ಆರ್ಥಿಕ ಚಟುವಟಿಕೆ ಮೇಲೆಯೂ ಪರಿಣಾಮ ಬೀರಿದೆ. ಎಲ್ಲವನ್ನೂ ಗಮನದಲ್ಲಿರಿಸಿ 23.4 ಕಿ.ಮೀ.ಉದ್ದದ ಶಿರಾಡಿ ಸರಂಗಮಾರ್ಗ ನಿರ್ಮಾಣವಾಗಲಿದೆ. ಇದರಲ್ಲಿ ಒಟ್ಟು 12.41 ಕಿ.ಮೀನ 7 ಸುರಂಗಗಳು, ಉಳಿದಂತೆ ಅಂಡರ್ ಪಾಸ್, ಓವರ್ ಬಿಡ್ಜ್ ಮತ್ತು ರಸ್ತೆಯನ್ನು ಒಳಗೊಂಡಿದೆ. ಸುರಂಗ ಮಾರ್ಗಗಳು ನೇರವಾಗಿರುತ್ತ ವೆ. ಹೀಗಾಗಿ ವಾಹನಗಳು ಕಡಿಮೆ ಅವಧಿಯಲ್ಲಿ ಗಮ್ಯಸ್ಥಾನ ತಲುಪಬಹುದು.

    ಎತ್ತಿನಹೊಳೆ ಯೋಜನೆ ಸಂಬಂಧ ಹಿರಿದನಹಳ್ಳಿಯಿಂದ ಹರವನಹಳ್ಳಿವರೆಗೆ 7 ಅಣೆಕಟ್ಟುಗಳ ನಿರ್ಮಾಣವಾಗುತ್ತಿವೆ. ಮೇಲೆ ಅಣೆಕಟ್ಟು, ಕೆಳಗೆ ಸುರಂಗ. ಅನಾಹುತ ಸಂಭವಿಸಿದರೆ ಗತಿ ಏನು? ಪಶ್ಚಿಮಘಟ್ಟ ಭಾಗದಲ್ಲಿ ಪ್ರತಿವರ್ಷ ಭೂಕುಸಿತ ಆಗುತ್ತಿದ್ದರೂ, ಸರ್ಕಾರ ಭೂಗರ್ಭ ಇಲಾಖೆಯಿಂದ ಅಧ್ಯಯನ ಮಾಡಿಸಿಲ್ಲ. ಸಾರ್ವಜನಿಕರ, ಪರಿಸರ ಹೋರಾಟಗಾರರ ಅಭಿಪ್ರಾಯ ಪಡೆದು ಯೋಜನೆ ಮುಂದುವರಿಸಬೇಕು.
    – ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts