ಸಕಲೇಶಪುರ : ಬೆಂಗಳೂರು-ಮಂಗಳೂರು ಸಂಪರ್ಕ ಕೊಂಡಿಯಂತಿರುವ ಹಾಸನ ರಾಷ್ಟ್ರೀಯ ಹೆದ್ದಾರಿ-75 ಶಿರಾಡಿ ಘಾಟ್ ಸಂಚಾರವನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗಿದೆ. ನಿರಂತರ ಸುರಿದ ಮಳೆಯಿಂದ ಸಕಲೇಶಪುರದ ದೋಣಿಗಾಲ್ ಬಳಿ ರಸ್ತೆ ಕುಸಿದಿದ್ದು, ಬೆಂಗಳೂರು ಮಂಗಳೂರು ಪ್ರಯಾಣಿಕರು ರಸ್ತೆ ಮಧ್ಯೆ ಸಿಕ್ಕಿ ಹೈರಾಣಾಗಿರುವ ಘಟನೆ ನಡೆದಿದೆ.
ಬಿರುಸು ಮಳೆಯಿಂದಾಗಿ ದೋಣಿಗಾಲ್ ಬಳಿ ರಸ್ತೆಯೇ ಕೊಚ್ಚಿಹೋಗುವ ಹಂತದಲ್ಲಿದೆ ಎನ್ನಲಾಗಿದ್ದು, ಇಂದು ಸಕಲೇಶಪುರ ತಹಸೀಲ್ದಾರ್ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸನ ಜಿಲ್ಲಾ ಪೊಲೀಸರು, ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾರ್ಯ ಇರುವುದರಿಂದ ಆ ರಸ್ತೆಯನ್ನು ಬಂದ್ ಮಾಡಿಸಿದ್ದಾರೆ. ಶಿರಾಡಿ ಘಾಟ್ ಬದಲು ಬೆಂಗಳೂರು ಮಂಗಳೂರು ಬದಲಿ ಮಾರ್ಗವಾಗಿ ಬೇಲೂರು ಮೂಡಿಗೆರೆ ಚಾರ್ಮಾಡಿ ಘಾಟ್ ರಸ್ತೆಯನ್ನು ಸೂಚಿಸಲಾಗಿದೆ. ಇನ್ನು ರಸ್ತೆ ಕುಸಿದ ಹಿನ್ನೆಲೆ, ಶಿರಾಡಿ ಘಾಟ್ ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಊಟವೂ ಇಲ್ಲದೇ ಪರದಾಡೋ ಪರಿಸ್ಥಿತಿ ಉಂಟಾಯಿತು ಎಂದು ತಹಸೀಲ್ದಾರ್ ಜಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಟ್ವಿಟರ್ನಲ್ಲಿ ಮುಟ್ಟಿದ್ರೇನೆ ‘ಲವ್’: ಇನ್ಮುಂದೆ ಹಾಗಾಗದಂತೆ ನಡೆಯುತ್ತಿದೆ ಹೊಸ ಪ್ರಯೋಗ!
ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಮಾಡುವವರು ಸಕಲೇಶಪುರ ದೋಣಿಗಾಲ್ ಬಳಿ ಅವೈಜ್ಞಾನಿಕವಾಗಿ ಮಣ್ಣು ಸುರಿದು ಕಾಮಗರಿ ಮಾಡುತ್ತಿರುವುದೇ ರಸ್ತೆ ಕುಸಿಯಲು ಕಾರಣ ಎಂದು ಈ ಹಿಂದೆ ಪ್ರದೇಶದ ಜನ ಆತಂಕ ವ್ಯಕ್ತಪಡಿಸಿದ್ದರು. ಮೊದಲೇ ಎಚ್ಚೆತ್ತುಕೊಂಡಿದ್ದರೆ ರಸ್ತೆ ಇಷ್ಟರ ಮಟ್ಟಿಗೆ ಕುಸಿಯೋದನ್ನು ತಪ್ಪಿಸಬಹುದಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯವರ ದಿವ್ಯ ನಿರ್ಲಕ್ಷ್ಯದಿಂದ ಈಗ ಶಿರಾಡಿ ಘಾಟ್ ರಸ್ತೆಯೇ ಬಂದ್ ಆಗುವ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)