More

    ಶಾಲೆ ಆವರಣದಲ್ಲಿ ಅಡಕೆ ತೋಟ!

    ತ್ಯಾಗರ್ತಿ: ಸರ್ಕಾರಿ ಶಾಲೆ ಎಂದರೆ ಶಿಕ್ಷಕರು, ಪಾಲಕರು ಮತ್ತು ಮಕ್ಕಳಿಗೆ ಮಾತ್ರ ಆ ಶಾಲೆಯ ಜವಾಬ್ದಾರಿ ಎನ್ನುವ ಆಲೋಚನೆ ಇರುತ್ತದೆ. ಆದರೆ ಇಲ್ಲೊಂದು ಸರ್ಕಾರಿ ಶಾಲೆ ಬೇರೆ ಶಾಲೆಗಳಿಗಿಂತ ಭಿನ್ನ. ಜ್ಞಾನದೇಗುಲ ಇಡೀ ಗ್ರಾಮದ ಆಸ್ತಿ ಎನ್ನುವಂತೆ ಈ ಊರಿನ ಜನರು ಶಾಲಾ ಆವರಣವನ್ನು ಮುಂದಿನ ದಿನಗಳಲ್ಲಿ ಶಾಲೆಯ ಖರ್ಚುಗಳನ್ನೂ ಸರಿದೂಗಿಸಲು ಆದಾಯ ಬರುವಂತೆ ನಿರ್ಮಾಣ ಮಾಡಿದ್ದಾರೆ.
    ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕೊರ್ಲಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು, ಪಾಲಕರ ಜತೆ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಅಡಕೆ ತೋಟ ನಿರ್ಮಾಣ ಮಾಡಿದ್ದಾರೆ. ಶಾಲಾ ಆವರಣದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿದೆ.
    ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಕೊಠಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅನಾವರಣ ಸೇರಿದಂತೆ ವಿವಿಧ ರೀತಿಯಲ್ಲಿ ಶಾಲಾ ಪರಿಸರವನ್ನು ಸಜ್ಜುಗೊಳಿಸಲಾಗಿದೆ. ಅಡಕೆ ತೋಟಕ್ಕೆ ಗೊಬ್ಬರ ಹಾಕುವುದು, ಕಳೆ ತೆಗೆಯುವ ಕೆಲಸವನ್ನು ಗ್ರಾಮಸ್ಥರೇ ನಿಭಾಯಿಸುತ್ತಿದ್ದಾರೆ.
    ಬೇಸಿಗೆ ಕಾಲದಲ್ಲಿ ನೀರು ಪೂರೈಕೆಗೆ ತೊಂದರೆಯಾಗದಂತೆ ಕೊಳವೆ ಬಾವಿಯನ್ನೂ ಮಂಜೂರು ಮಾಡಿಸಿಕೊಂಡು ಶಾಲಾ ಆವರಣದಲ್ಲೇ ಕೊರೆಸಲಾಗಿದೆ. ತೋಟ ನಿರ್ಮಾಣ ಹಾಗೂ ನಿರ್ವಹಣೆ ಇಲ್ಲಿನ ಶಿಕ್ಷಕರ ಮಾರ್ಗದರ್ಶನದಂತೆ ನಡೆಯುತ್ತಿದೆ.
    ಗ್ರಾಪಂ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಕೆ ಮಾಡಿಕೊಂಡು ಶಾಲಾ ಆವರಣದ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ.
    ಗ್ರಾಮದ ಮಧ್ಯ ಭಾಗದಲ್ಲಿ ಶಾಲೆ ಇರುವುದರಿಂದ ಗ್ರಾಮಸ್ಥರು ಇದೊಂದು ಪವಿತ್ರ ಸ್ಥಳ ಎಂಬ ಭಾವನೆಯಿಂದ ನೋಡುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಶಾಲಾ ಸಮಿತಿಯವರು ಆಯಾ ಅಧ್ಯಕ್ಷರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಅನುದಾನ ವೆಚ್ಚ ಸಹಿತ ಅಂಕಿಅಂಶಗಳನ್ನು ಶಾಲಾ ಗೋಡೆ ಮೇಲೆ ಬರೆಯಲಾಗಿದೆ.
    ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿ ಶಾಲಾ ಆವರಣದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿದ್ದಾರೆ. ದಾನಿಗಳು ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ. ಶಾಲೆಯಲ್ಲಿ ಇಬ್ಬರು ಕಾಯಂ ಶಿಕ್ಷಕರಿದ್ದು ಮೂವರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಯ ವಾತಾವರಣ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts