More

    ಶಾಸಕ ಕುಮಾರ್ ದಸರಾ ದರ್ಬಾರ್!

    ಶಿವಮೊಗ್ಗ: ಸೊರಬ ತಾಲೂಕು ಚಂದ್ರಗುತ್ತಿ ರೇಣುಕಾಂಬೆಯ ಸನ್ನಿಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ನೇತೃತ್ವದಲ್ಲಿ ಜರುಗಿದ ದಸರಾ ಉತ್ಸವದಲ್ಲಿ ಧಾರ್ಮಿಕ ಸಂಗತಿಗಳನ್ನು ಉಪೇಕ್ಷಿಸಿ ಭಕ್ತರ ಭಾವನೆಗಳಿಗೆ ಘಾಸಿ ಉಂಟು ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಮೀರಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಡಾ.ಶ್ರೀಧರ್ ಆರ್.ಹುಲ್ತಿಕೊಪ್ಪ ಒತ್ತಾಯಿಸಿದರು.
    ಮುಜರಾಯಿ ಇಲಾಖೆಯ ಎಲ್ಲ ಮಾನದಂಡಗಳನ್ನು ಉಲ್ಲಂಘಿಸುವ ಮೂಲಕ ಶಾಸಕರು ಸರ್ವಾಧಿಕಾರಿ ನೀತಿ ಅನುಸರಿಸಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವುದರಿಂದ ಗಿಮಿಕ್ ರಾಜಕೀಯ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ನಾವು ಒಂದಿಷ್ಟು ಜನರು ಸಮಿತಿ ರಚಿಸಿಕೊಂಡು 2016ರಿಂದ ರೇಣುಕಾಂಬೆಯ ಸನ್ನಿಧಿಯಲ್ಲಿ ದಸರಾ ಉತ್ಸವ ಆಚರಿಸುತ್ತಿದ್ದೇವೆ. ಇಷ್ಟು ವರ್ಷ ದಸರಾದಿಂದ ದೂರವುಳಿದಿದ್ದ ಶಾಸಕರು, ಈ ವರ್ಷ ಏಕಾಏಕಿ ದಸರಾ ಆಚರಣೆಗೆ ಮುಂದಾದರು. ಅವರದ್ದೇ ಗುಂಪು ಕಟ್ಟಿಕೊಂಡರು. ಎರಡು ಕಡೆ ಆಚರಣೆ ಬೇಡ ನಮ್ಮನ್ನೂ ಸೇರಿಸಿಕೊಳ್ಳಿ ಎಂದು ಹೇಳಿದರೂ ಅದಕ್ಕೆ ಕಿವಿಗೊಡಲಿಲ್ಲ ಎಂದು ತಿಳಿಸಿದರು.
    ಶಾಸಕರು ಸಂಪೂರ್ಣವಾಗಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡರು. ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಯಾರೂ ನಮ್ಮ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಆಡಳಿತ ಯಂತ್ರ ಶಾಸಕರ ತಾಳಕ್ಕೆ ಹೆಜ್ಜೆ ಹಾಕಿತು. ಧಾರ್ಮಿಕವಾಗಿ ನಡೆಯುಬೇಕಿದ್ದ ಉತ್ಸವ ಮನರಂಜನೆಯ ಕಾರ್ಯಕ್ರಮವಾಗಿ ಪರಿವರ್ತನೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
    ಟ್ರಾಕ್ಟರ್ ಬಳಕೆ ತಪ್ಪು
    ಮನರಂಜನೆಯ ಹೆಸರಿನಲ್ಲಿ ಹಾಡು, ನೃತ್ಯ, ಸಿನಿಮಾ ನಟರ ಕಾರ್ಯಕ್ರಮ ಎಲ್ಲವೂ ನಡೆಯಿತು. ಕಡೆಯ ದಿನ ದೇವಿಯ ಮೂತಿಯನ್ನು ಪಲ್ಲಕ್ಕಿಯಲ್ಲಿಟ್ಟು ಉತ್ಸವದ ಮೆರವಣಿಗೆ ಸಾಗಬೇಕಿತ್ತು. ಆದರೆ ಪಲ್ಲಕ್ಕಿಯನ್ನು ಟ್ರಾಕ್ಟರ್‌ನಲ್ಲಿಟ್ಟು ಉತ್ಸವ ಮಾಡುವ ಮೂಲಕ ಭಕ್ತರು ಹರಕೆ ತೀರಿಸಲೂ ಅವಕಾಶವಿಲ್ಲದಂತೆ ಮಾಡಿದ್ದು ದುರದೃಷ್ಟಕರ ಎಂದು ಶ್ರೀಧರ್ ಆರ್.ಹುಲ್ತಿಕೊಪ್ಪ ದೂರಿದರು.
    ಪಲ್ಲಕ್ಕಿಯನ್ನು ಹೊತ್ತೊಯ್ಯುವಾಗ ಭಕ್ತರು ನೆಲದಲ್ಲಿ ಮಲಗಿ ಹರಕೆ ತೀರಿಸುತ್ತಾರೆ. ಅದಕ್ಕೂ ಈ ಬಾರಿ ಆಸ್ಪದವಿಲ್ಲದಂತಾಯಿತು. ದೇವಿಯ ಮೆರವಣಿಗೆಗೆ ಶಾಸಕರು ಬರುವುದು ವಿಳಂಬವಾದ ಕಾರಣ ಮೂರು ತಾಸು ಸಲಾಂ ಕಟ್ಟೆಯಲ್ಲಿ ದೇವಿಯ ವಿಗ್ರಹವನ್ನು ಇರಿಸಿಕೊಂಡು ಕಾದರು. ಇದೆಲ್ಲವೂ ಆಗಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಮುಜರಾಯಿ ಇಲಾಖೆ ಆಯುಕ್ತರು ಮಧ್ಯ ಪ್ರವೇಶಿಸಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷ ಎಂ.ಪಿ.ರತ್ನಾಕರ್, ಸದಸ್ಯ ರೇಣುಕಾ ಪ್ರಸಾದ್, ತಾಪಂ ಮಾಜಿ ಸದಸ್ಯ ನಾಗರಾಜ್, ದಸರಾ ಉತ್ಸವ ಸಮಿತಿ ಸದಸ್ಯ ರಾಘು ಸ್ವಾದಿ ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts