More

    ಔಷಧಗಳ ಅತಿ ಅವಲಂಬನೆ ಮಾರಕ

    ಶಿವಮೊಗ್ಗ: ಅತಿಯಾದ ರಾಸಾಯನಿಕ ಹಾಗೂ ಔಷಧಗಳ ಅವಲಂಬನೆ ಭೂಮಿಗೆ ಹಾಗೂ ದೇಹಕ್ಕೆ ಮಾರಕವಾಗಿದೆ. ಈ ಸಮಸ್ಯೆ ನಿವಾರಣೆಗೆ ಔಷಧಗಳ ಗುಣಮಟ್ಟದ ಸಮರ್ಪಕ ನಿಯಂತ್ರಣ ಅಗತ್ಯ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
    ನಗರದ ರಾಷ್ಟ್ರೀಯ ಫಾರ್ಮಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಔಷಧಗಳ ಉತ್ಪಾದನೆಯಲ್ಲಿ ಗುಣಮಟ್ಟದ ನಿಯಂತ್ರಣ ಹಾಗೂ ಸಮಕಾಲೀನ ಸಮಸ್ಯೆಗಳ ಕುರಿತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ನಾಲಿಗೆಗೆ ರುಚಿಯಾದ ಆಹಾರ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ ಎಂದು ಎಚ್ಚರಿಸಿದರು.
    ಮಲೆನಾಡನ್ನು ತೀವ್ರವಾಗಿ ಕಾಡುತ್ತಿರುವ ಎಲೆಚುಕ್ಕೆ ರೋಗ ರೈತರನ್ನು ಹತಾಶೆಗೊಳಿಸಿದೆ. ತಜ್ಞರ ವರದಿಯ ಪ್ರಕಾರ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಭೂಮಿ ಫಲವತ್ತತೆಯನ್ನು ಕಳೆದುಕೊಂಡಿದ್ದು ಪೊಟ್ಯಾಶ್ ಅಂಶ ಕ್ಷೀಣಿಸಿದೆ. ರೈತರು ಭೂಮಿಯಲ್ಲಿನ ಮಣ್ಣನ್ನು ಪರೀಕ್ಷಿಸುತ್ತಿಲ್ಲ. ಭೂಮಿಯಲ್ಲಿನ ರೈತ ಸ್ನೇಹಿ ಜಂತುಗಳೆಲ್ಲವೂ ಅಳಿದು ಹೋಗಿದೆ. ಇಂತಹ ಹೊತ್ತಿನಲ್ಲಿ ಮತ್ತೆ ಸಾವಯವ ಗೊಬ್ಬರಗಳ ಬಳಕೆಗೆ ತಜ್ಞರು ಶಿಫಾರಸ್ಸು ಮಾಡುತ್ತಿದ್ದಾರೆ ಎಂದರು.
    ನೈಸರ್ಗಿಕ ಔಷಧಗಳ ಕುರಿತು ಅರಿವು ಹೆಚ್ಚಿಸಿಕೊಳ್ಳಬೇಕಿದೆ. ಔಷಧಗಳ ಗುಣಮಟ್ಟದಲ್ಲಿ ಕಲಬೆರಕೆಯಾಗದಂತೆ ತಡೆಯಬೇಕಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಮಹತ್ವದಾಗಿದೆ. ಸ್ವಾರ್ಥದ ಆಸೆಗೆ ಸಮಾಜದ ಸ್ವಾಸ್ಥೃ ಹಾಳು ಮಾಡಬಾರದು ಎಂದು ಹೇಳಿದರು.
    ಮಣಿಪಾಲ್ ಫಾರ್ಮಸಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಗಿರೀಶ್ ಪೈ ಮಾತನಾಡಿ, ಕಂಪನಿಗಳು ಉತ್ಪಾದಿಸಿದ ಔಷಧಗಳನ್ನು ಯುಎಸ್‌ಎಫ್‌ಡಿ ಪರೀಕ್ಷಿಸಿದ ನಂತರ ಗುಣಮಟ್ಟದ ಆಧಾರದ ಮೇಲೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಗುಣಮಟ್ಟದಲ್ಲಿನ ವ್ಯತ್ಯಾಸ ಕಂಪನಿಗಳಿಗಾಗಲಿ, ಮನುಷ್ಯರಿಗಾಗಲಿ ಅತಿಯಾದ ನಷ್ಟವನ್ನು ಉಂಟುಮಾಡಲಿವೆ. ಹೀಗಾಗಿ ಫಾರ್ಮಸಿಸ್ಟ್‌ಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.
    ಎನ್‌ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಕಾರ್ಯಾಗಾರ ಉದ್ಘಾಟಿಸಿದರು. ಮಣಿಪಾಲ್ ಫಾರ್ಮಸಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಸ್.ಮುದ್ದುಕೃಷ್ಣ, ರಾಷ್ಟ್ರೀಯ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ನಾರಾಯಣಮೂರ್ತಿ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts