More

    ರಾಜಕೀಯ ಅಸ್ತ್ರವಾದ ಮೀಸಲಾತಿ: ಈಶ್ವರಪ್ಪ ಬೇಸರ

    ಶಿವಮೊಗ್ಗ: ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಆದರೆ ಇದು ಜಾತಿ ವ್ಯವಸ್ಥೆಯೊಳಗೆ ಒಳಪಗಂಡಗಳೂ ಸೃಷ್ಠಿಯಾಗಿವೆ. ಮೀಸಲಾತಿ ಎಂಬುದು ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
    ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ದೀನ ದಲಿತರಿಗೆಂದು ಕೇವಲ 10 ವರ್ಷಕ್ಕೆ ನಿಗದಿಯಾಗಿದ್ದ ಮೀಸಲಾತಿ ಇಂದು ಎಲ್ಲ ವರ್ಗದವರ ಬೇಡಿಕೆಯಾಗಿರುವುದು ವಿಪರ್ಯಾಸ ಎಂದರು.
    ಮೀಸಲಾತಿ ಇಂದು ಸಂಪೂರ್ಣ ದುರ್ಬಳಕೆಯಾಗುತ್ತಿದೆ. ಮೀಸಲಾತಿ ಮೂಲಕ ನಾನು ಅಧಿಕಾರ ಅನುಭವಿಸಿದರೆ ಮುಂದೆ ನನ್ನ ಮಗನಿಗೂ ಆ ಸೌಲಭ್ಯ ಸಿಗುತ್ತಿರುವುದು ದೌರ್ಭಾಗ್ಯ. ಅನ್ನವಿಲ್ಲದ ಬಡವನಿಗೆ, ಸೂರಿಲ್ಲದೇ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವವರಿಗೆ ಮೀಸಲಾತಿ ಸಿಕ್ಕರೆ ನಿಜವಾದ ಪ್ರಯೋಜನ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ಮೀಸಲಾತಿ ನೀಡಿದರೆ ಮುಂದಿನ ಚುನಾವಣೆಯಲ್ಲಿ ಎಷ್ಟು ಲಾಭವಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳಲ್ಲಿದೆ. ಪಂಚಮಸಾಲಿಗಳು 2-ಎಗೆ ಸೇರಿಸಿ ಎನ್ನುತ್ತಿದ್ದಾರೆ. ಕುರುಬರು ಎಸ್‌ಟಿಗೆ ಸೇರಿಸಿ ಎಂಬ ಬೇಡಿಕೆಯಿಟ್ಟಿದ್ದಾರೆ. ಸ್ವಾಮೀಜಿಗಳು ಹೋರಾಟಕ್ಕೆ ಕರೆದಾಗ ಹೋಗದಿರಲು ಸಾಧ್ಯವಿಲ್ಲ. ಆದರೆ ಈ ಬೇಡಿಕೆಗಳು ಈಡೇರುವುದು ಬಲು ಕಷ್ಟ ಎಂದು ವಿವರಿಸಿದರು.
    ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಶ್ರೀಧರ್ ಆರ್.ಹುಲ್ತಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸೂಡಾ ಅಧ್ಯಕ್ಷ ಎನ್.ಜೆ.ನಾಗರಾಜ್, ಪಾಲಿಕೆ ಸದಸ್ಯೆ ಲಕ್ಷ್ಮೀ ಶಂಕರನಾಯ್ಕ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು.ಉಮೇಶ್ ಉಪಸ್ಥಿತರಿದ್ದರು. ನಿವೃತ್ತ ಅಭಿಯಂತರ ಹರೀಶ್ ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts