More

    ಶಿವಮೊಗ್ಗ ಜಿಲ್ಲೆಯಲ್ಲಿ 3,500 ಮಕ್ಕಳಿಗೆ ರಕ್ತಹೀನತೆ ತೊಂದರೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಸುಮಾರು 3,500 ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಎಲ್ಲ ವಯೋಮಾನದವರಲ್ಲೂ ರಕ್ತಹೀನತೆ ಕಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆತಂಕ ವ್ಯಕ್ತಪಡಿಸಿದರು.
    ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಅನೀಮಿಯಾಮುಕ್ತ ಭಾರತ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೈರ್ಮಲ್ಯ ಕಾಯ್ದುಕೊಳ್ಳುವ ಜತೆಗೆ ಶೌಚಗೃಹದ ಬಳಕೆ, ಶುದ್ದ ಕುಡಿಯುವ ನೀರು ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಬಳಕೆಯಿಂದ ರಕ್ತಹೀನತೆ ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
    ರಕ್ತಹೀನತೆಗೆ ಮುಖ್ಯ ಕಾರಣವಾದ ಜಂತುಹುಳು ನಿವಾರಣೆಗೆ ಅಲ್ಬೆಂಡಜೋಲ್ ಮಾತ್ರೆಗಳನ್ನು ಎಲ್ಲ ವಯೋಮಾನದವರಿಗೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಶೌಚಗೃಹಗಳಿದ್ದರೂ ಅನೇಕರು ಅದನ್ನು ಬಳಸುತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸಬೇಕು. ಪೌಷ್ಟಿಕಾಂಶಯಕ್ತ ಆಹಾರದ ಬಗ್ಗೆ ಮಾಹಿತಿ ನೀಡಬೇಕೆಂದರು.
    ದೇಶಕ್ಕೆ ಸ್ವಾತಂತ್ರೃ ಲಭಿಸಿದ ಸಂದರ್ಭದಲ್ಲಿ ನಾವು ಆಹಾರ ಭದ್ರತೆ ಸಾಧಿಸಿರಲಿಲ್ಲ. ಇಂದು ಆಹಾರ ಉತ್ಪಾದನೆಯಲ್ಲಿ ಅತ್ಯುತ್ತಮ ಸ್ಥಾನದಲ್ಲಿದ್ದೇವೆ. ಆದರೆ ಎಲ್ಲರಿಗೂ ಪೌಷ್ಟಿಕಾಂಶಯುಕ್ತ ಆಹಾರ ಸಿಗುತ್ತಿಲ್ಲ. ಹೀಗಾಗಿ ಮಹಿಳೆಯರು, ಮಕ್ಕಳು, ದುರ್ಬಲರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಏಕ ರೀತಿಯ ಆಹಾರ ಬಳಸದೇ ಸಮತೋಲಿತ ಆಹಾರ ಬಳಕೆಯನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ಡಾ.ಆರ್.ಸೆಲ್ವಮಣಿ ತಿಳಿಸಿದರು.
    ಜಿಲ್ಲಾ ಲಸಿಕಾಧಿಕಾರಿ ಡಾ.ನಾಗರಾಜ ನಾಯ್ಕ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಡಾ.ಕಿರಣ್‌ಕುಮಾರ್, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳಾದ ಡಾ.ಮಂಜುನಾಥ ನಾಗಲೀಕರ್, ಡಾ.ಶಮಾ ಬೇಗಂ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲಪ್ಪ, ಡಬ್ಲ್ಯುಎಚ್‌ಒ ಕನ್ಸಲ್ಟೆಂಟ್ ವಿಶ್ವನಾಥ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts