More

    ಮುದ್ದೆ ಮುರಿದು ಬೀಗಿದ ಮಹಿಳೆಯರು!

    ಶಿವಮೊಗ್ಗ: ಸದಾ ಜನರಿಂದ ತುಂಬಿರುತ್ತದೆ. ಶಿವಪ್ಪನಾಯಕ ವೃತ್ತದಲ್ಲಿ ಮಂಗಳವಾರ ಶಾಮಿಯಾನ ಹಾಕಲಾಗಿತ್ತು. ನೋಡ ನೋಡುತ್ತಿದ್ದಂತೆಯೇ ಊಟದ ಟೇಬಲ್, ಕುರ್ಚಿಗಳನ್ನೂ ಹಾಕಲಾಯಿತು. ಇದೇನು ಎಂದು ನಾಗರಿಕರು ಕುತೂಹಲದಿಂದ ನೋಡುತ್ತಿರುವಾಗಲೇ ಮುದ್ದೆ ತಿನ್ನುವ ಸ್ಪರ್ಧೆ ಆರಂಭವಾಯಿತು.

    ಮಂಗಳವಾರ ನಗರದಲ್ಲಿ ಆಹಾರ ದಸರಾ ಅಂಗವಾಗಿ ಏರ್ಪಡಿಸಿದ್ದ ಮುದ್ದೆ ತಿನ್ನುವ ಸ್ಪರ್ಧೆ ನೋಡಲು ಜನರು ಮುಗಿಬಿದ್ದರು. ಮನೆಯಲ್ಲಿ ಪುರುಸೊತ್ತಾಗಿ ಮುದ್ದೆ ಸೇವಿಸುವವರು ಇಂದು ಮಾತ್ರ ತುಂಬಾ ಆತುರದಲ್ಲಿದ್ದರು. ಸ್ಪರ್ಧೆ ಗೆಲ್ಲಲೇಬೇಕೆಂಬ ಸವಾಲು ಅವರಲ್ಲಿ ಮನೆ ಮಾಡಿತ್ತು. ಎರಡು ನಿಮಿಷಕ್ಕೆ ಗರಿಷ್ಠ ಮುದ್ದೆ ಸೇವಿಸಿದವರಿಗೆ ಬಹುಮಾನ ಘೋಷಣೆ ಮಾಡಿದ್ದರಿಂದ ಸ್ಪರ್ಧಾಳುಗಳ ನಿಗಾ ಕೇವಲ ಮುದ್ದೆ ಮತ್ತು ಬಾಯಿ ಮೇಲೆಯೇ ಇತ್ತು. ಕೆಲವರು ಮುದ್ದೆ ತಿನ್ನುವ ತರಾತುರಿ ಕಂಡು ನೆರೆದಿದ್ದವರು ಆಶ್ಚರ್ಯಚಕಿತರಾದರು.

    ಸೇಬು ಗುಳುಂ ಮಾಡಿದ ಶಿಕ್ಷಕಿಯರು
    ಆಹಾರ ದಸರಾದ ಅಂಗವಾಗಿ ಶಿಕ್ಷಕಿಯರಿಗಾಗಿ ಏರ್ಪಡಿಸಿದ್ದ ಸೇಬು ಹಣ್ಣು ತಿನ್ನುವ ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಶಿಕ್ಷಕಿಯರು ಭಾಗವಹಿಸಿದ್ದರು. ಎರಡು ನಿಮಿಷದಲ್ಲಿ ಎರಡೂವರೆ ಸೇಬು ತಿಂದವರು ಮೊದಲ ಸ್ಥಾನ ಪಡೆದರು. ಕೆಲ ಸ್ಪರ್ಧಾಳುಗಳು ಎರಡು ಬಾರಿ ಕಚ್ಚಿ ಸೇಬುವನ್ನು ಹೊಟ್ಟೆಗಿಳಿಸಿದರು.

    ಶಿಕ್ಷಕಿಯರು ಸೇಬು ತಿನ್ನಲು ಹೆಣಗಾಡುತ್ತಿದ್ದರೆ ಅದನ್ನು ನೋಡುತ್ತಿದ್ದವರಿಂದ ಹೋ…ಎನ್ನುವ ಉತ್ತೇಜಕ ಚೀರಾಟ. ನಗಲೂ ಆಗದೇ, ಸೇಬು ನುಂಗಲೂ ಆಗದೇ ಸ್ಪರ್ಧಿಗಳ ಗೋಳಾಟ. ಸುಮಾರು ಒಂದು ತಾಸು ಶಿವಪ್ಪನಾಯಕ ವೃತ್ತದಲ್ಲಿ ಜನರಿಗೆ ಭರ್ತಿ ಮನರಂಜನೆ ಸಿಕ್ಕಿದ್ದಂತೂ ನಿಜ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts