More

    ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಕೊಡಿ: ಕಾಂಗ್ರೆಸ್ ನೇತೃತ್ವದಲ್ಲಿ ರೈತರ ಪ್ರತಿಭಟನೆ

    ಶಿವಮೊಗ್ಗ: ಸಾಗರ ತಾಲೂಕು ಕರೂರು ಹೋಬಳಿ ಹಾಗೂ ಹೊಸನಗರ ತಾಲೂಕಿನ ನಗರ ಹೋಬಳಿಯ ಬಹುತೇಕ ಭಾಗದಲ್ಲಿ ಅಡಕೆಗೆ ಎಲೆ ಚುಕ್ಕೆ ರೋಗ ತಗುಲಿದೆ. ರೋಗ ನಿಯಂತ್ರಣಕ್ಕೆ ವಿಜ್ಞಾನಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ತಜ್ಞರನ್ನು ಸ್ಥಳಕ್ಕೆ ಕಳಿಸಿ ನಷ್ಟದ ಲೆಕ್ಕಾಚಾರ ನಡೆಸಿ ಪರಿಹಾರ ವಿತರಣೆ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಕರೂರು ಹೋಬಳಿಯ ಮರಾಠಿ ಕ್ಯಾಂಪ್, ಇಕ್ಕಿಬೀಳು, ಕಸಗೋಡು, ಬ್ಯಾಡಗೋಡು ಗ್ರಾಮಗಳ 100ಕ್ಕೂ ಹೆಚ್ಚು ಬೆಳೆಗಾರರಿಗೆ ಸಂಬಂಧಿಸಿದ 250 ಎಕರೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ತೀವ್ರವಾಗಿ ಕಾಣಿಸಿಕೊಂಡಿದೆ. ನಗರ ಹೋಬಳಿಯ ನಾಗೋಡಿ ಸುತ್ತಮುತ್ತಲ ಪ್ರದೇಶಗಳಲ್ಲಿ 30 ಎಕರೆ ಅಡಕೆ ತೋಟಕ್ಕೆ ಎಲೆಚುಕ್ಕೆ ರೋಗ ತಗುಲಿದೆ. ಇದರಿಂದ ಅಡಕೆ ಮರಗಳು ಸಾಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಅಡಕೆ ಬೆಳೆ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಈಗ ಬೀದಿಗೆ ಬೀಳುವ ಸನ್ನಿವೇಶ ಸೃಷ್ಠಿಯಾಗಿದೆ. ಬ್ಯಾಂಕ್ ಮತ್ತಿತರ ಸಂಘ ಸಂಸ್ಥೆಗಳ ಮೂಲಕ ಸಾಲ ಮಾಡಿ ಅಡಕೆ ಕೃಷಿ ಮಾಡಿರುವ ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ. ಕೂಡಲೇ ಕೃಷಿ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಿ ರೋಗ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಬೆಳೆ ಹಾನಿಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ಮಾಡಿಸಬೇಕು. ರೈತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು. ಈ ಸಂದರ್ಭವನ್ನು ವಿಶೇಷವೆಂದು ಪರಿಗಣಿಸಿ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಅಡಕೆ ಬೆಳೆಗಾರರು ಪಡೆದಿರುವ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡ ಶಿವಾನಂದ, ಅಡಕೆ ಬೆಳೆಗಾರರಾದ ಕೃಷ್ಣಪ್ಪ, ರಾಮಣ್ಣ, ಭದ್ರಯ್ಯ ಜೈನ್, ರಾಜು, ಮಧು, ಜಿನೇಂದ್ರ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts