More

    ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ, ಡಿಸಿ ಡಾ. ಆರ್.ಸೆಲ್ವಮಣಿ

    ಶಿವಮೊಗ್ಗ: ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಚಿಂತನೆಗೊಳಪಡಿಸಿ ಆಚರಣೆಗೆ ತರಬೇಕು. ವಿಜ್ಞಾನವನ್ನು ಚೆನ್ನಾಗಿ ಅರಿತಾಗ ಸಮಾಜದಲ್ಲಿನ ಅನೇಕ ಮೌಢ್ಯ, ಕಂದಾಚಾರಗಳನ್ನು ತೊಡೆದುಹಾಕಬಹುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
    ನಗರದ ನ್ಯಾಷನಲ್ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಉರ್ದು ಮತ್ತು ಇತರೆ ಅಲ್ಪಸಂಖ್ಯಾತರ ಭಾಷಾ ಶಾಲೆಗಳ ನಿರ್ದೇಶನಾಲಯ, ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಹಾಗೂ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ಮಕ್ಕಳು ತಮ್ಮ ದೈನಂದಿನ ಕಲಿಕೆಯೊಂದಿಗೆ ವಿಜ್ಞಾನ ಪ್ರಯೋಗಗಳನ್ನು ಮಾಡುವ ಮೂಲಕ ಅನ್ವೇಷಣಾ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾಲಕಾಲಕ್ಕೆ ಸಂಶೋಧಿಸಲ್ಪಡುವ ಅತ್ಯಾಧುನಿಕ ವೈಜ್ಞಾನಿಕ ಅವಿಷ್ಕಾರಗಳು ಮುಂದಿನ ಪೀಳಿಗೆಯ ಏಳಿಗೆ ಮತ್ತು ಸುರಕ್ಷತೆಗೆ ಸಹಕಾರಿಯಾಗಿದ್ದು, ದೇಶಕ್ಕೆ ಯುವ ವಿಜ್ಞಾನಿಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಬೀಜೋತ್ಪಾದನೆ ಮತ್ತು ಆಹಾರೋತ್ಪಾದನೆಯ ಹಿಂದಿರುವ ಮಹತ್ವದ ವೈಜ್ಞಾನಿಕ ಸತ್ಯಗಳನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
    ತಾಲೂಕುಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲ ಸ್ಪರ್ಧಿಗಳು ರಾಜ್ಯಮಟ್ಟ ಹಾಗೂ ಉನ್ನತ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಿಗಳು ತಮ್ಮ ವಿಜ್ಞಾನದ ಮಾದರಿಯನ್ನು ತಾವು ವ್ಯಾಸಂಗ ಮಾಡುತ್ತಿರುವ ಶಾಲೆಯ ವಿದ್ಯಾರ್ಥಿಗಳೆಲ್ಲರಿಗೂ ಪ್ರದರ್ಶಿಸಬೇಕು. ಇದರಿಂದ ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿದೆ ಎಂದು ಹೇಳಿದರು.
    ಡಯಟ್ ಪ್ರಾಧ್ಯಾಪಕಿ ಫಾತಿಮಾಬಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳಲ್ಲಿ ವಿಶ್ಲೇಷಣಾತ್ಮಕ ಗುಣ, ವೈಜ್ಞಾನಿಕ ಭಾವ ಪ್ರೇರೇಪಿಸಲಿದೆ. ಅಲ್ಲದೇ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲಿದೆ ಎಂದರು.
    ಸ್ಪರ್ಧೆಯಲ್ಲಿ ಸೃಜನಾತ್ಮಕ ಮಾದರಿಗಳನ್ನು ಆಯ್ಕೆ ಮಾಡಲಾಗುವುದು. ವಿಶೇಷವಾಗಿ ವೈಜ್ಞಾನಿಕ ಮಹತ್ವ, ತಾಂತ್ರಿಕತೆ ಹಾಗೂ ಸಾರ್ವಜನಿಕವಾಗಿ ಆಗಬಹುದಾದ ಉಪಯುಕ್ತತೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ಗುಂಪು ಮತ್ತು ವೈಯಕ್ತಿಕ ತಂಡಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಶಿಫಾರಸು ಮಾಡಲಾಗುವುದು ಎಂದರು.
    ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಡಯಟ್ ಪ್ರಾಚಾರ್ಯ ಬಿ.ಆರ್.ಬಸವರಾಜಪ್ಪ, ಎನ್‌ಇಎಸ್ ಅಧ್ಯಕ್ಷ ಜಿ.ಎನ್.ನಾರಾಯಣರಾವ್, ಕಾರ್ಯದರ್ಶಿ ಎನ್.ಆರ್.ನಾಗರಾಜ್, ಡಯಟ್ ಉಪನ್ಯಾಸಕ ನಾಗರಾಜ್, ವಿಜ್ಞಾನ ವಿಷಯ ಪರಿವೀಕ್ಷಕಿ ವೀಣಾ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts