More

    ರಾಗಿಗುಡ್ಡ ಜೀವ ವೈವಿಧ್ಯತಾ ತಾಣವನ್ನಾಗಿ ಘೋಷಣೆಗೆ ಬೃಹತ್ ಅಭಿಯಾನ

    ಶಿವಮೊಗ್ಗ: ರಾಗಿಗುಡ್ಡ ಪ್ರದೇಶವನ್ನು ಜೈವಿಕ ಅರಣ್ಯ ಅಥವಾ ಜೀವ ವೈವಿಧ್ಯತಾ ತಾಣವನ್ನಾಗಿ ಘೋಷಣೆ ಮಾಡಬೇಕು ಹಾಗೂ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಪರಿಸರಾಸಕ್ತರು, ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳು ಶನಿವಾರ ರಾಗಿಗುಡ್ಡದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರಾಗಿಗುಡ್ಡ ಉಳಿಸಿ-ಸಹಿ ಸಂಗ್ರಹ ಬೃಹತ್ ಅಭಿಯಾನ ನಡೆಸಿದರು.
    ಶಿವಮೊಗ್ಗ ನಗರದಲ್ಲಿರುವ ಏಕೈಕ ಗುಡ್ಡ, ನಗರಕ್ಕೆ ಕಳಶಪ್ರಾಯ ಮತ್ತು ಪರಿಸರ ಪ್ರದೇಶವಾಗಿರುವ ರಾಗಿಗುಡ್ಡವನ್ನು ನೈಸರ್ಗಿಕ ಸಂಪನ್ಮೂಲವಾಗಿ ಉಳಿಸಲೇಬೇಕಾದ ದೊಡ್ಡ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಗುಡ್ಡದ ಮಹತ್ವವನ್ನು ಅರಿತು ರಾಗಗುಡ್ಡವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದರು.
    ನಾಲ್ಕುವರೆ ಕಿ.ಮೀ. ಕಾಲ್ನಡಿಗೆ ಜಾಥಾ ಮತ್ತು ಸೈಕಲ್ ಜಾಥಾವು ರಾಗಿಗುಡ್ಡದಿಂದ ನವುಲೆ, ಉಷಾ ನರ್ಸಿಂಗ್, ಸವಳಂಗ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಹತ್ತಾರು ಸಂಘಟನೆಗಳ ನೂರಾರು ಪದಾಧಿಕಾರಿಗಳು, ನಾಗರಿಕರು ರಾಗಿಗುಡ್ಡದ ಪರಿಸರ ಉಳಿಸಿ ಎಂಬ ಹೋರಾಟಕ್ಕೆ ಬೃಹತ್ ಜಾಥಾಕ್ಕೆ ಕೈಜೋಡಿಸಿದರು. ಜಾಥಾದಲ್ಲಿ ಪಾಲ್ಗೊಳ್ಳುವವರಿಗೆ ರಾಗಿಗುಡ್ಡಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲ ಅಶಕ್ತರು ಉಷಾ ನರ್ಸಿಂಗ್ ಹೋಮ್ ವೃತ್ತದಿಂದ ಜಾಥಾದಲ್ಲಿ ಪಾಲ್ಗೊಂಡರು.
    ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪರಿಸರ ವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ, ಜೆಡಿಎಸ್‌ನ ಶಾಂತಾ ಸುರೇಂದ್ರ, ಆಪ್‌ನ ಶಿವಮೊಗ್ಗ ನಗರ ಅಭ್ಯರ್ಥಿ ಡಾ. ಟಿ.ನೇತ್ರಾವತಿ, ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಕೆ.ವಿ.ವಸಂತ್‌ಕುಮಾರ್ ,ಪರಿಸರ ಹೋರಾಟಗಾರರಾದ ಡಾ. ಎಲ್.ಕೆ.ಶ್ರೀಪತಿ, ಡಾ. ಶೇಖರ್ ಗೌಳೇರ್, ನವ್ಯಶ್ರೀ ನಾಗರಾಜ್, ಡಾ. ನಾಗರಾಜ್ ಪರಿಸರ, ನಾಗರಾಜ ಶೆಟ್ಟಿ, ಚನ್ನವೀರಪ್ಪ ಗಾಮನಗಟ್ಟಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಉಪಾಧ್ಯಕ್ಷರಾದ ಪಿ.ಶೇಖರಪ್ಪ, ಹುಲಿಮಟ್ಟಿ ಜಯಣ್ಣ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಕಾರ್ಯಾಧ್ಯಕ್ಷ ಪಿ.ಡಿ.ಮಂಜಪ್ಪ, ಹಸಿರುಸೇನೆ ಸಂಚಾಲಕ ಎಂ.ಡಿ.ನಾಗರಾಜ್, ಕಾರ್ಯದರ್ಶಿ ಗುರುಶಾಂತ, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts