More

    ಶಿವಮೊಗ್ಗದಲ್ಲಿ ವೇತನ+ಕಮಿಷನ್ ಆಸೆ ತೋರಿಸಿ ಲಕ್ಷಾಂತರ ರೂ. ವಂಚನೆ

    ಶಿವಮೊಗ್ಗ: ಖಾಸಗಿ ಕಂಪನಿಯೊಂದು ತಿಂಗಳಿಗೆ 15ರಿಂದ 40 ಸಾವಿರ ರೂ.ವರೆಗೆ ಸಂಬಳ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಿದರೆ ಹೆಚ್ಚು ಕಮಿಷನ್ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಲಕ್ಷಾಂತರ ರೂ. ಕಳೆದುಕೊಂಡ ಸಂತ್ರಸ್ತರು ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
    ಇಲ್ಲಿನ ಸವಾರ್‌ಲೈನ್ ರಸ್ತೆಯಲ್ಲಿರುವ ಖಾಸಗಿ ಕಂಪನಿ ಮಾಲೀಕ, ಮ್ಯಾನೇಜರ್, ಟೀಮ್ ಲೀಡರ್ ಸೇರಿದಂತೆ ಸಿಬ್ಬಂದಿ ವಿರುದ್ಧ ಸಾಗರ ತಾಲೂಕಿನ ಮರಸ ಗ್ರಾಮದ ಎಚ್.ದೇವರಾಜ್ ಅವರು ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.
    ಸಮಯದೊಂದಿಗೆ ಹಣ ಗಳಿಸಿ ಎಂಬ ಶೀರ್ಷಿಕೆಯೊಂದಿಗೆ ಕಂಪನಿ ಗ್ರಾಹಕರನ್ನು ಸೆಳೆಯುತ್ತಿದ್ದು ಈಗಾಗಲೇ ನೂರಾರು ಜನರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ನಾನೂ ಸೇರಿದಂತೆ ಹಲವರಿಂದ 1,07,520 ರೂ. ಕಟ್ಟಿಕೊಂಡು ಮೋಸ ಮಾಡಿದ್ದು ಕಂಪನಿ ಮಾಲೀಕರು ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
    ಪ್ರತಿ ತಿಂಗಳು ಗರಿಷ್ಠ 40 ಸಾವಿರ ರೂ.ವರೆಗೂ ಗಳಿಸಬಹುದು ಎಂದು ನಂಬಿಸಿದ್ದರು. ಕಂಪನಿಗೆ 35,840 ರೂ. ಪಾವತಿಸಿದರೆ ಕಂಪನಿಯಿಂದ ವಸ್ತುಗಳನ್ನು ಪೂರೈಕೆ ಮಾಡಲಿದ್ದು, ಅವುಗಳನ್ನು ಮಾರಾಟ ಮಾಡಬೇಕೆಂದು ಹೇಳಿದ್ದರು. ಅದಕ್ಕೆ ದೇವರಾಜ್ ಒಪ್ಪಿಕೊಂಡು ಜು.25ರಂದು ಕೆಲಸಕ್ಕೆ ಹೋಗಿದ್ದರು. ಆಗ ಮಾನೇಜರ್ ಹೇಳಿದಂತೆ ಎರಡು ಕಂತಿನಲ್ಲಿ ಬ್ಯಾಂಕ್ ಖಾತೆಗೆ 35,840 ರೂ. ಜಮಾ ಮಾಡಿದ್ದರು.
    ಕಳಪೆ ಉತ್ಪನ್ನ ನೀಡಿ ವಂಚನೆ:
    ದೇವರಾಜ್ ಅವರು ಹಣ ಪಾವತಿಸಿ ಬಂದ ಬಳಿಕ ಮ್ಯಾನೇಜರ್ ಕಂಪನಿಯ ಉತ್ಪನ್ನಗಳನ್ನು ನೀಡಿದ್ದರು. ತೆರೆದು ನೋಡಿದಾಗ ದೇವರಾಜ್ ಅವರಿಗೆ ಅಚ್ಚರಿ ಕಾದಿತ್ತು. ಅದರಲ್ಲಿ ಮೂರು ಪ್ಯಾಂಟ್ ಮತ್ತು 10 ಶರ್ಟ್‌ಗಳಿದ್ದವು. 200-300 ರೂ. ಮೌಲ್ಯದ ಬಟ್ಟೆಗಳನ್ನು 1,500-2500 ರೂ.ಗೆ ಮಾರಾಟ ಮಾಡಬೇಕೆಂಬ ತಾಕೀತು ಮಾಡಲಾಗಿತ್ತು. ಜತೆಗೆ ನಾಲ್ಕೈದು ಜನರನ್ನು ಕಂಪನಿಗೆ ಪರಿಚಯಿಸಿ ಕೊಡಬೇಕು. ಒಬ್ಬರನ್ನು ಪರಿಚಯಿಸಿಕೊಟ್ಟರೆ 11,200 ರೂ. ಕಮೀಷನ್ ಸಿಗುವುದಾಗಿ ನಂಬಿಸಿದ್ದರು. ಎಷ್ಟು ಜನರನ್ನು ಸೇರಿಸುತ್ತಿರೋ ಅಷ್ಟು ಆದಾಯ ಬರುತ್ತದೆಂದು ಹೇಳಿ ಕಂಪನಿಯ ಒಂದು ಐಡಿ(ಗುರುತಿನ ಕರ್ಡ್)ಯನ್ನೂ ಕೊಟ್ಟಿದ್ದರು.
    ಚೈನ್ ಲಿಂಕ್ ಮಾಡಿಸುವಂತೆ ಒತ್ತಡ:
    ಇದೇ ವೇಳೆ ಒಬ್ಬರು ಕನಿಷ್ಟ ನಾಲ್ವರನ್ನು ಕಂಪನಿಗೆ ಪರಿಚಯಿಸಿಕೊಡಬೇಕೆಂದು ಸಿಬ್ಬಂದಿ ತಾಕೀತು ಮಾಡಿದ್ದರು. ದೇವರಾಜ್ ಸೇರಿ ಹಲವರು ತಲಾ 35,800 ರೂ. ಪಾವತಿಸಿದ್ದು ಇದೇ ರೀತಿ ನೂರಾರು ಜನರಿಗೆ ಕಂಪನಿ ಸಿಬ್ಬಂದಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    ಏನಿದು ಪ್ರಕರಣ ?:
    ಮರಸ ಗ್ರಾಮದ ಕೃಷಿಕ ದೇವರಾಜ್ ಅವರಿಗೆ ಎರಡು ತಿಂಗಳ ಹಿಂದೆ ಖಾಸಗಿ ಕಂಪನಿಯ ಮಹಿಳಾ ಸಿಬ್ಬಂದಿಯೊಬ್ಬರು ಕರೆ ಮಾಡಿದ್ದರು. ಸಮಯದೊಂದಿಗೆ ಹಣ ಗಳಿಸುವ ವಿಧಾನದ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕಾಗಿ ಶಿವಮೊಗ್ಗದಲ್ಲಿ ನಾಲ್ಕು ದಿನ ತರಬೇತಿ ಪಡೆದು ಪ್ರತಿ ತಿಂಗಳು ಒಳ್ಳೆಯ ಆದಾಯ ಗಳಿಸುವ ಬಗ್ಗೆ ಹೇಳಿದ್ದಳು. ಇದನ್ನು ನಂಬಿದ್ದ ದೇವರಾಜ್ ಅವರು ಕಳೆದ ಜು.19ರಂದು ಕಂಪನಿಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಮ್ಯಾನೇಜರ್, ಟೀಮ್ ಲೀಡರ್ ಹಾಗೂ ಇತರೆ ಸಿಬ್ಬಂದಿ ಪರಿಚಯಿಸಿಕೊಂಡಿದ್ದರು. ಒಂದು ಸಾವಿರ ರೂ. ಕಟ್ಟಿಸಿಕೊಂಡು ನಾಲ್ಕು ದಿನ ತರಬೇತಿಯನ್ನೂ ನೀಡಿದ್ದರು. ಅದಾದ ಬಳಿಕ ಹಣ ಪಡೆದು ವಂಚನೆ ಮಾಡಿದ್ದಾರೆ. ಇದೀಗ ಹಣ ಕೇಳಿದರೆ ಸತಾಯಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts