More

    ಪಕ್ಷ ಹೇಳಿದಂತೆ ಕೇಳುವೆ: ಶಾಸಕ ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿರುವ ಸಮಾಧಾನ ನನಗಿದೆ. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು, ಬಿಡುವುದನ್ನು ಪಕ್ಷ ನಿರ್ಧರಿಸುತ್ತದೆ. ಸ್ಪರ್ಧೆ ಮಾಡುವಂತೆ ಸೂಚಿಸಿದರೆ ಸ್ಪರ್ಧಿಸುತ್ತೇನೆ. ಬೇಡ ಎಂದರೆ ಸ್ಪರ್ಧಿಸದೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
    ನನ್ನ ಮೇಲೆ ಬಂದ ಕಳಂಕದಿಂದ ಮುಕ್ತನಾಗಿದ್ದೇನೆ. ಆರೋಪಮುಕ್ತವಾದರೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಹಾಗಾಗಿ ನನಗೆ ಮತ್ತೆ ಸಚಿವ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೂ ಬೇಸರವಿಲ್ಲ ಎಂದು ಮೀಡಿಯಾ ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪಕ್ಷ ಯಾವ ಸ್ಥಾನವನ್ನು ತೋರಿಸುತ್ತದೋ ಆ ಸ್ಥಾನವನ್ನು ಇದುವರೆಗೂ ಅಲಂಕರಿಸಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷ, ಜಲಸಂಪನ್ಮೂಲ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ, ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು ಪಕ್ಷದ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ಹಾಗಾಗಿ ಮುಂದೆಯೂ ಪಕ್ಷ ಯಾವ ಕೆಲಸ ಸೂಚಿಸಿದರೂ ಅದನ್ನು ಮಾಡುತ್ತೇನೆ ಎಂದರು.
    ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಅಸಾಧ್ಯ: ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಎಂಬುದೇ ಅಸಾಧ್ಯ. ಯಾವ ಕಾರಣಕ್ಕೂ ಅವರು ಒಂದಾಗುವುದಿಲ್ಲ. ಗುಂಪುಗಾರಿಕೆ ಮೂಲಕ ಪಕ್ಷವನ್ನು ಬೀದಿಗೆ ಎಳೆದು ತರುತ್ತಾರೆ. ಇದರಿಂದ ಯಾವ ಅನುಮಾನವೂ ಇಲ್ಲ ಎಂದು ಈಶ್ವರಪ್ಪ ಹೇಳಿದರು. ಹೈಕಮಾಂಡ್ ಸೂಚಿಸಿದವರು ಸಿಎಂ ಆಗುತ್ತಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಾಗಿ ಸಿದ್ದರಾಮೋತ್ಸವದ ಬಗ್ಗೆ ಮತ್ತೆ ಭಿನ್ನಾಭಿಪ್ರಾಯಗಳು ಹೊರಬರುತ್ತಿವೆ. ವೇದಿಕೆಯಲ್ಲಿ ತಬ್ಬಿಕೊಂಡ ನಾಯಕರಲ್ಲಿ ಒಗ್ಗಟ್ಟಿನ ಮಂತ್ರ ಎಲ್ಲಿ ಹೋಯಿತು ಎಂದು ಪಶ್ನಿಸಿದರು. ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರ ಮೂಲೆಗುಂಪಾಗಲ್ಲ, ಇಡೀ ಕಾಂಗ್ರೆಸ್ ಪಕ್ಷವೇ ಮೂಲೆಗುಂಪಾಗಲಿದೆ. ದಾವಣಗೆರೆಯಲ್ಲಿ ಮಾತ್ರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಂದಾಗಿದ್ದಾರೆ. ಆದರೆ ಹೊರಗೆ ಬಂದ ನಂತರ ಅಲ್ಲಿನ ಪರಿಸ್ಥಿತಿಯೇ ಬೇರೆಯಾಗಿತ್ತು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts