More

    ಪರೀಕ್ಷೆ ಕೇಂದ್ರದೊಳಗೆ ಶೂ ಧರಿಸುವುದು ನಿಷಿದ್ಧ !

    ಶಿವಮೊಗ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರಿನ ಕೆಪಿಟಿಸಿಎಲ್(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಆ.7ರಂದು ಪರೀಕ್ಷೆ ನಡೆಯಲಿದ್ದು ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ವಾಚು, ಮೊಬೈಲ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತರುವುದು, ಆಭರಣ ಹಾಗೂ ಶೂ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
    ಪಿಎಸ್‌ಐ ಪರೀಕ್ಷೆ ಹಗರಣದ ಬಳಿಕ ರಾಜ್ಯ ಸರ್ಕಾರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದ್ದು ಗುರುವಾರ ಡಿಸಿ ಕಚೇರಿಯಲ್ಲಿ ಕೆಪಿಟಿಸಿಎಲ್‌ನ ಕಿರಿಯ ಸಹಾಯಕ ಹುದ್ದೆಗಳ ಪರೀಕ್ಷಾ ಪೂರ್ವಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾರ್ಗಸೂಚಿಗಳ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರಿನ ಕೆಪಿಟಿಸಿಎಲ್‌ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಶಿವಮೊಗ್ಗದ 17 ಮತ್ತು ಭದ್ರಾವತಿಯ 5 ಕೇಂದ್ರಗಳು ಸೇರಿದಂತೆ 22 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಈಗಾಗಲೇ ಸರ್ಕಾರವು ಪರೀಕ್ಷೆಗಳು ಶಿಸ್ತುಬದ್ಧವಾಗಿ ನಡೆಸಲು ಜಾರಿಗೊಳಿಸಿರುವ ವಸ್ತ್ರಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ಹೇಳಿದರು.
    ಜಿಲ್ಲೆಯ 9,336 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಹಾಜರಲಾಗಲಿದ್ದು, ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಪರೀಕ್ಷಾ ಕರ್ತವ್ಯಕ್ಕಾಗಿ ಅಗತ್ಯವಿರುವ ಅಧಿಕಾರಿ, ಸಿಬ್ಬಂದಿ, ಪರೀಕ್ಷಾ ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ಆರೋಗ್ಯ ಇಲಾಖಾ ಸಿಬ್ಬಂಧಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರಗಳಿಗೆ ಎ ದರ್ಜೆಯ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ ಎಂದರು.
    ಡಿಡಿಪಿಯು ಕೃಷ್ಣಪ್ಪ, ಜಿಲ್ಲಾ ಖಜಾನಾಧಿಕಾರಿ ಎಚ್.ಎಸ್.ಸಾವಿತ್ರಿ, ಮೆಸ್ಕಾಂ ಎಎ ವೀರೇಂದ್ರ ಸೇರಿದಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts